ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತಿ ಹಿಂಪಡೆದು ಅಂ.ರಾ ಕ್ರಿಕೆಟ್‌ಗೆ ಮರಳಿ: ವಿಲಿಯರ್ಸ್‌ಗೆ ಶಾಸ್ತ್ರಿ ಸಲಹೆ

Last Updated 13 ಅಕ್ಟೋಬರ್ 2020, 12:43 IST
ಅಕ್ಷರ ಗಾತ್ರ

ಐಪಿಎಲ್‌ನಲ್ಲಿ ಅತ್ಯುತ್ತಮವಾಗಿ ಬ್ಯಾಟ್‌ ಬೀಸುತ್ತಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು‌ ತಂಡದ ಆಟಗಾರ ಎಬಿ ಡಿ ವಿಲಿಯರ್ಸ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ‌ ನೀಡಿರುವ ನಿವೃತ್ತಿಯನ್ನು ಹಿಂಪಡೆಯಬೇಕು ಎಂದು ಭಾರತ ಕ್ರಿಕೆಟ್‌ ತಂಡದ ಕೋಚ್‌ ರವಿಶಾಸ್ತ್ರಿ ಹೇಳಿದ್ದಾರೆ.

ಐಪಿಎಲ್‌ನಲ್ಲಿ 7 ಪಂದ್ಯಗಳನ್ನು ಆಡಿರುವ ವಿಲಿಯರ್ಸ್‌ ಮೂರು ಅರ್ಧಶತಕ ಸಹಿತ 228 ರನ್‌ ಕಲೆ ಹಾಕಿದ್ದಾರೆ. ಸೋಮವಾರ ರಾತ್ರಿ ಕೋಲ್ಕತ್ತ ನೈಟ್‌ರೈಡರ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್‌ ನಡೆಸಿದ್ದ ವಿಲಿಯರ್ಸ್ ಕೇವಲ 33 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 5 ಬೌಂಡರಿ ಸಹಿತ ಅಜೇಯ 73 ರನ್‌ ಬಾರಿಸಿದ್ದರು. ಇದರಿಂದಾಗಿ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ಕಳೆದುಕೊಂಡು 194 ರನ್‌ ಕಲೆಹಾಕಿತ್ತು. ಗುರಿ ಬೆನ್ನತ್ತಿದ ಕೆಕೆಆರ್ 9 ವಿಕೆಟ್‌ ನಷ್ಟಕ್ಕೆ ಕೇವಲ 112 ರನ್‌ ಗಳಿಸಲಷ್ಟೇ ಶಕ್ತವಾಗಿ 82 ರನ್‌ ಅಂತರದ ಸೋಲೊಪ್ಪಿಕೊಂಡಿತ್ತು.

ವಿಲಿಯರ್ಸ್ ಆಟದ ಬಗ್ಗೆ ಪ್ರತಿಕ್ರಿಯಿಸಿರುವ ರವಿಶಾಸ್ತ್ರಿ, ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಹೇಳಿರುವ ವಿದಾಯದ ನಿರ್ಧಾರವನ್ನು ಕೈಬಿಟ್ಟು ದಕ್ಷಿಣ ಆಫ್ರಿಕಾ ತಂಡವನ್ನು ಮತ್ತೆ ಕೂಡಿಕೊಳ್ಳಲು ಇದು ಸರಿಯಾದ ಸಮಯ.ಆಟಕ್ಕೆ ಮರಳುವ ಪ್ರಯತ್ನ ನಡೆಯುತ್ತಿರುವ ಹೊತ್ತಿನಲ್ಲಿ, ನೀವು ಕ್ರಿಕೆಟ್‌ಗೆ ಹಿಂದಿರುಗುವಅಗತ್ಯವಿದೆ. ಆಟವೂ ಉತ್ತಮಗೊಳ್ಳಲಿದೆ ಎಂದು ಶಾಸ್ತ್ರಿ ಟ್ವೀಟ್‌ ಮಾಡಿದ್ದಾರೆ.

ವಿಲಿಯರ್ಸ್‌ 2018ರ ಮೇ ತಿಂಗಳಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇದು ಕ್ರಿಕೆಟ್‌ ವಲಯದಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಮಾತ್ರವಲ್ಲದೆ, 2019ರ ವಿಶ್ವಕಪ್‌ಗೆ ಯೋಜನೆ ರೂಪಿಸುತ್ತಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಸಂಯೋಜನೆ‌ ಮೇಲೂ ಪರಿಣಾಮ ಬೀರಿತ್ತು. 10 ತಂಡಗಳು ಭಾಗವಹಿಸಿದ್ದ ಈ ಟೂರ್ನಿಯಲ್ಲಿ ಆಫ್ರಿಕಾ ತಂಡ 7ನೇ ಸ್ಥಾನ ಗಳಿಸಿತ್ತು.

‘ವಿಶ್ವಕಪ್‌ ಟೂರ್ನಿ ವೇಳೆ ವಿಲಿಯರ್ಸ್ ತಂಡಕ್ಕೆ ವಾಪಸ್ಸಾಗುವ ಪ್ರಯತ್ನ ಮಾಡಿದ್ದರು. ಆದರೆ, ವಿಶ್ವಕಪ್‌ಗೆ ತಂಡ ಕಟ್ಟಲು ಸಾಕಷ್ಟು ಶ್ರಮಿಸಿರುವುದರಿಂದ ಈ ಹಂತದಲ್ಲಿ ಎಬಿ ಡಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಸರಿಯಲ್ಲ ಎಂಬ ಕಾರಣದಿಂದಾಗಿತಂಡದ ಆಡಳಿತ, ನಾಯಕ ಫಾಫ್‌ ಡು ಪ್ಲೆಸಿ ಮತ್ತು ಕೋಚ್‌ ಒಟ್ಟಿಸ್‌ ಗಿಬ್ಸನ್‌ ಅವರು ಎಬಿ ಡಿ ಪ್ರಯತ್ನವನ್ನು ಪರಿಗಣಿಸಿರಲಿಲ್ಲ’ ಎಂಬ ವಿವಾದ ಇತ್ತೀಚೆಗೆ ಸೃಷ್ಟಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT