ಶುಕ್ರವಾರ, ಜುಲೈ 1, 2022
24 °C
ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ ಪಂಜಾಬ್ ತಂಡದ ಆಟಗಾರರು

ಐಪಿಎಲ್‌: ಜಸ್ಟ್ ಅಂಗಳದಲ್ಲಿ ಕಿಂಗ್ಸ್‌ ಕನ್ನಡಿಗರ ಆಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಳೆದ  ಆರು ತಿಂಗಳಲ್ಲಿ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಕೋಚ್  ಅನಿಲ್  ಕುಂಬ್ಳೆ ತಮ್ಮ ಮನೆಯಿಂದ ಹೊರಬಂದಿದ್ದು ಎರಡು ಸಲ ಮಾತ್ರ. ಕೆಲವು ದಿನಗಳ ಹಿಂದೆ ಮಾಸ್ಕ್‌ ಧರಿಸುವ ಜಾಗೃತಿಗಾಗಿ ಹೊರಗೆ ಬಂದಿದ್ದರು. ಅದು ಬಿಟ್ಟರೆ ಶುಕ್ರವಾರ ಜಸ್ಟ್‌ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡರು.

ಅವರೊಂದಿಗೆ  ಕರ್ನಾಟಕದ ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್, ಕರುಣ್ ನಾಯರ್, ಕೆ. ಗೌತಮ್ ಮತ್ತು ಜೆ. ಸುಚಿತ್ ಕೂಡ ಹಾಜರಿದ್ದರು.  ಇವರೆಲ್ಲರಿಂದಾಗಿ ಕಿಂಗ್ಸ್‌ ಇಲೆವನ್ ತಂಡವು ’ಮಿನಿ ಕರ್ನಾಟಕ ಬಳಗ‘ವಾಗಿ ಮಾರ್ಪಟ್ಟಿದೆ.

ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೆಲವೇ ಪತ್ರಕರ್ತರೊಂದಿಗೆ ಮಾತನಾಡಿದ ಅನಿಲ್, ’ಪಂಜಾಬ್ ತಂಡವು ಯಾವಾಗಲೂ ಚೆನ್ನಾಗಿಯೇ ಇದೆ. ಸಮತೋಲನದಿಂದ ಕೂಡಿದೆ.  ಪ್ರತಿಭಾನ್ವಿತರನ್ನು ಗುರುತಿಸಿ ಹೊಣೆ ನೀಡಿದರೆ ನಿಭಾಯಿಸುತ್ತಾರೆ. ಆಗ ತಂಡಕ್ಕೆ ಉತ್ತಮ ಫಲಿತಾಂಶ ಲಭಿಸುತ್ತದೆ. ಕರ್ನಾಟಕದ ಐವರು ಆಟಗಾರರು ಇರುವುದರಿಂದ ನಮ್ಮ ಕಾರ್ಯಾಚರಣೆ ಸುಲಭವಾಗಲಿದೆ. ಅದರಲ್ಲಿಯೂ ಕಳೆದ ಎರಡು ವರ್ಷಗಳಿಂದ ತಂಡದಲ್ಲಿರುವ ಕೆ.ಎಲ್. ರಾಹುಲ್ ಈ ಬಾರಿ ನಾಯಕತ್ವ ವಹಿಸುತ್ತಿದ್ದಾರೆ. ಅವರಿಗೂ ತಂಡವನ್ನು ನಿಭಾಯಿಸುವುದು ಸುಲಭವಾಗಿದೆ. ಕೋವಿಡ್–19 ಕಾರಣದಿಂದ ಸಿಕ್ಕ ಬಿಡುವಿನಲ್ಲಿ ಬಹುತೇಕ ಆಟಗಾರರು  ಆಡಿಯೇ ಇಲ್ಲ. ಈಗ ಅವರ ಕೌಶಲಗಳನ್ನು ಒರೆಗೆ ಹಚ್ಚು ಸವಾಲು ಇದೆ. ಅಲ್ಲದೇ ಈ ವಾತಾವರಣದಲ್ಲಿ ಸ್ಪರ್ಧಾತ್ಮಕ ವಾತಾವರಣಕ್ಕೆ ಇಳಿದು ಹೊಂದಿಕೊಳ್ಳುವುದು ಸುಲಭವಲ್ಲ. ಮೊದಲು ಅದರಲ್ಲಿ ಅವರು ಜಯಿಸಬೇಕು‘ ಎಂದರು.

’ವಿದೇಶಿ ನೆಲದಲ್ಲಿ ಆಡಲು ಎಲ್ಲರೂ ಉತ್ಸುಕರಾಗಿದ್ದಾರೆ. ಆದರೆ ನಾಲ್ಕು ತಿಂಗಳುಗಳಿಂದ ಯಾವುದೇ ಪಂದ್ಯಗಳಲ್ಲಿ ಆಟಗಾರರು ಆಡಿಲ್ಲ. ಆದ್ದರಿಂದ ಈಗ ನೇರವಾಗಿ ಪಂದ್ಯಗಳಲ್ಲಿ ಆಡುವುದು ಸುಲಭದ ಕೆಲಸವಲ್ಲ. ಆದರೆ ನಮ್ಮ ತಂಡದಲ್ಲಿರುವ ನೆರವು ಸಿಬ್ಬಂದಿ ಉತ್ತಮವಾಗಿದೆ. ಎಲ್ಲ ರೀತಿಯಿಂದಲೂ ನಮ್ಮ ಆಟಗಾರರನ್ನು ಸದೃಢಗೊಳಿಸುವ ಸಾಮರ್ಥ್ಯ ಅವರಲ್ಲಿದೆ‘ ಎಂದು ವಿಶ್ವಾಸ ವ್ಯಕ್ತಪಡಿಸಿದರು.

’ಕೊರೊನಾ ಬಿಕ್ಟಟ್ಟು ನಿಭಾಯಿಸುವ ಸಲುವಾಗಿ ಸಿದ್ಧಪಡಿಸಲಾಗಿರುವ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವುದೇ ಈಗಿರುವ ದೊಡ್ಡ ಸವಾಲು. ಒಬ್ಬ ಕೋಚ್ ಆಗಿ ಎಲ್ಲ ಆಟಗಾರರಲ್ಲಿ ತಿಳಿವಳಿಕೆ ಮೂಡಿಸುವುದು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡುವುದೇ ಪ್ರಮುಖ ಕೆಲಸವಾಗಲಿದೆ. ಅದಕ್ಕಾಗಿ ಕೆಲವು ವಿನೂತನ ರೀತಿಯ  ಆಟಗಳನ್ನು ನಡೆಸಲು ಯೋಜಿಸುತ್ತಿದ್ದೇವೆ. ನಾವು ಅಲ್ಲಿಗೆ ಹೋದ ಕೂಡಲೇ ಆರು ದಿನಗಳ ಕಾಲ ಪ್ರತ್ಯೇಕವಾಸ ಅನುಭವಿಸಬೇಕು. ಅಂದರೆ ಅಷ್ಟು ಕಾಲ ಕೋಣೆಯಲ್ಲಿ ಒಬ್ಬರೇ ಇರಬೇಕು. ಆ ಹೋತ್ತಿನಲ್ಲಿ ಮಾನಸಿಕವಾಗಿ ಒತ್ತಡ ಬೆಳೆಯದಿರಲು ಕೆಲವು ಫನ್‌ ಗೇಮ್ಸ್‌ ಯೋಜಿಸಲಾಗುತ್ತಿದೆ. ಅವುಗಳಲ್ಲಿ ತೊಡಗಿಸಿಕೊಂಡರೆ ಏಕತಾನತೆ ಮತ್ತು ಖಿನ್ನತೆಯನ್ನು ದೂರವಿಡಬಹುದು‘ ಎಂದು ಅನಿಲ್ ವಿವರಿಸಿದರು.

’ಟಿ20 ಕ್ರಿಕೆಟ್‌ನಲ್ಲಿ ಚೆಂಡಿಗೆ ಎಂಜಲು ಬಳಕೆ ನಿಷೇಧದಿಂದ ಯಾವುದೇ ಪರಿಣಾಮವಾಗುವ ಸಾಧ್ಯತೆ ಇಲ್ಲ. ಟೆಸ್ಟ್‌ ಕ್ರಿಕೆಟ್‌ನಲ್ಲಿಯೇ ಈ ನಿಯಮ ಯಶಸ್ವಿಯಾಗಿ ಜಾರಿಯಾಗಿದೆ‘ ಎಂದು ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು