ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಲ್ಲಿ ನಾಯಕರಾಗಿ ಪಂತ್‌ರನ್ನು ಮುಂದುವರಿಸಿದ ನಿರ್ಧಾರ ಗೌರವಿಸುತ್ತೇನೆ: ಅಯ್ಯರ್

Last Updated 23 ಸೆಪ್ಟೆಂಬರ್ 2021, 11:53 IST
ಅಕ್ಷರ ಗಾತ್ರ

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿ ರಿಷಭ್ ಪಂತ್ ಅವರನ್ನು ಮುಂದುವರಿಸಿರುವ ನಿರ್ಧಾರವನ್ನು ತಾವು ಗೌರವಿಸುವುದಾಗಿ ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ.

ಭಾರತದಲ್ಲಿ ನಡೆದ ಟೂರ್ನಿಯ ಮೊದಲಾರ್ಧದಲ್ಲಿ ಭುಜ ನೋವಿನಿಂದಾಗಿ ಶ್ರೇಯಸ್ ಅಯ್ಯರ್ ಅಲಭ್ಯರಾಗಿದ್ದರು. ಇದರಿಂದಾಗಿ ರಿಷಭ್ ಪಂತ್ ಅವರನ್ನು ನಾಯಕರಾಗಿ ಆಯ್ಕೆ ಮಾಡಲಾಗಿತ್ತು.

ಇದಾದ ಬಳಿಕ ಕೋವಿಡ್‌ನಿಂದಾಗಿ ಐಪಿಎಲ್ ಸ್ಥಗಿತಗೊಂಡಿತ್ತು. ಈಗ ದ್ವಿತೀಯಾರ್ಧದ ಪಂದ್ಯಗಳು ಯುಎಇನಲ್ಲಿ ಆಯೋಜನೆಯಾಗುತ್ತಿವೆ. ಈ ನಡುವೆ ಗಾಯಮುಕ್ತರಾಗಿರುವ ಅಯ್ಯರ್ ತಂಡವನ್ನು ಸೇರಿದರೂ ನಾಯಕರಾಗಿ ಪಂತ್ ಅವರನ್ನೇ ಮುಂದುವರಿಸಲು ಡೆಲ್ಲಿ ಫ್ರಾಂಚೈಸಿಯು ನಿರ್ಧರಿಸಿತ್ತು.

'ನನಗೆ ನಾಯಕತ್ವವನ್ನು ನೀಡಿದಾಗ ನಾನು ವಿಭಿನ್ನ ಮನಸ್ಥಿತಿಯಲ್ಲಿದ್ದೆ ಮತ್ತು ನಿರ್ಣಯ ಕೈಗೊಳ್ಳುವ ಮನೋಬಲವು ಉತ್ತಮ ಮಟ್ಟದಲ್ಲಿತ್ತು. ಇದರಿಂದ ಕಳೆದೆರಡು ವರ್ಷಗಳಲ್ಲಿ ಪ್ರಯೋಜನವಾಗಿದೆ' ಎಂದು ಅಯ್ಯರ್ ಹೇಳಿದ್ದಾರೆ.

'ಡೆಲ್ಲಿ ಫ್ರಾಂಚೈಸಿಯು ತೆಗೆದುಕೊಂಡ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಪ್ರಸಕ್ತ ಸಾಲಿನಲ್ಲಿ ರಿಷಭ್ ಪಂತ್ ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಅಲ್ಲದೆ ಈ ವರ್ಷ ಅವರೇ ನಾಯಕರಾಗಿ ಮುಂದುವರಿಯಬೇಕು ಎಂದು ಫ್ರಾಂಚೈಸಿಯು ಬಯಸಿದೆ. ಈ ನಿರ್ಧಾರವನ್ನು ಗೌರವಿಸುತ್ತೇನೆ' ಎಂದು ಹೇಳಿದ್ದಾರೆ.

26 ವರ್ಷದ ಅಯ್ಯರ್, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ನಾಯಕ ರಿಷಭ್ ಪಂತ್ ಜೊತೆಗೆ ಅರ್ಧಶತಕದ ಜೊತೆಯಾಟ ನೀಡಿದ್ದರಲ್ಲದೆ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.ಅವರು 47 ರನ್ ಗಳಿಸಿ ಔಟಾಗದೆ ಉಳಿದರು.

'ನಾಯಕ ಸ್ಥಾನದ ಹೊಣೆ ಇಲ್ಲದಿದ್ದರೂ ತಮ್ಮ ಬ್ಯಾಟಿಂಗ್ ಶೈಲಿಯಲ್ಲಿಹೆಚ್ಚಿನ ಬದಲಾವಣೆಯಾಗಿಲ್ಲ ಎಂದವರು ಸ್ಪಷ್ಟಪಡಿಸಿದರು. ನಾನು ಕ್ಯಾಪ್ಟನ್ ಆಗಿದ್ದಾಗ ಒತ್ತಡದಲ್ಲಿ ಆಡಲು ಇಷ್ಟಪಡುತ್ತೇನೆ. ಒತ್ತಡ ಹೆಚ್ಚಿದಾಗ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ. ಅದುವೇ ನನ್ನ ಮನಸ್ಥಿತಿಯಾಗಿದೆ. ಇಂದು (ಬುಧವಾರ) ಪಂದ್ಯ ಗೆಲ್ಲುವ ಒತ್ತಡವಿತ್ತು. ವಿಕೆಟ್ ಕೂಡ ವಿಭಿನ್ನವಾಗಿ ವರ್ತಿಸುತ್ತಿತ್ತು. ಹಾಗಾಗಿ ಅಂತಿಮ ಎಸೆತದ ವರೆಗೂ ಆಡಿ ಪಂದ್ಯವನ್ನು ಗೆಲ್ಲಿಸುವುದು ನನ್ನ ಗುರಿಯಾಗಿತ್ತು' ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT