ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ಕನ್ನಡಿಗರೆಲ್ಲ, ಭಾರತಕ್ಕಾಗಿ ಆಡುವಾಗಲೂ ಕನ್ನಡದಲ್ಲಿಯೇ ಮಾತಾಡೋದು: ಪಡಿಕ್ಕಲ್

Last Updated 26 ಸೆಪ್ಟೆಂಬರ್ 2021, 10:24 IST
ಅಕ್ಷರ ಗಾತ್ರ

ದುಬೈ: 'ನಾವು ಕನ್ನಡಿಗರೆಲ್ಲ, ಭಾರತಕ್ಕಾಗಿ ಆಡುವಾಗಲೂ ಕನ್ನಡದಲ್ಲಿಯೇ ಮಾತಾಡೋದು' - ಹೀಗೆ ಅಂದಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಎಡಗೈ ಆರಂಭಿಕ ಬ್ಯಾಟ್ಸ್‌ಮನ್, ಕನ್ನಡಿಗ ದೇವದತ್ತ ಪಡಿಕ್ಕಲ್.

ಆರ್‌ಸಿಬಿ ತಂಡವು ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಪಡಿಕ್ಕಲ್ ತಮ್ಮ ಕ್ರಿಕೆಟ್ ಜೀವನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 'ನಾವು ಕನ್ನಡಿಗರೆಲ್ಲ, ಭಾರತಕ್ಕಾಗಿ ಆಡುವಾಗಲೂ ಕನ್ನಡದಲ್ಲಿಯೇ ಮಾತಾಡೋದು, ಗೌತಮ್ ಇರಲಿ, ರಾಹುಲ್ ಸರ್ ಇರಲಿ, ನಾವೆಲ್ಲರೂ ಕನ್ನಡದಲ್ಲಿಯೇ ಮಾತನಾಡುತ್ತೇವೆ. ಬೇರೆ ರಾಜ್ಯದ ಆಟಗಾರರೊಂದಿಗೆ ಆಂಗ್ಲ ಹಾಗೂ ಹಿಂದಿ ಭಾಷೆಯಲ್ಲಿ ಮಾತನಾಡುತ್ತೇವೆ. ಕನ್ನಡಿಗರೆಲ್ಲ ಕನ್ನಡದಲ್ಲೇ ಮಾತಾಡೋದು' ಎಂದು ವಿವರಿಸಿದರು.

ತಮ್ಮ ವೃತ್ತಿ ಜೀವನದ ಕುರಿತು ಮೆಲುಕು ಹಾಕಿದ ಪಡಿಕ್ಕಲ್, 'ಕ್ರಿಕೆಟ್ ಆಡುವುದಕ್ಕಾಗಿಯೇ ಬೆಂಗಳೂರಿಗೆ ಸ್ಥಳಾಂತರವಾಗಿರುವುದಾಗಿ ತಿಳಿಸಿದ್ದಾರೆ. ನಮ್ಮ ಕುಟುಂಬದಲ್ಲಿ ಅದೊಂದು ಮಹತ್ತರವಾದ ತೀರ್ಮಾನವಾಗಿತ್ತು. ನನಗೆ ಬೆಂಬಲ ನೀಡಲು ಹೆತ್ತವರು ಧೈರ್ಯ ತೋರಿದ್ದಾರೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದೇವೆ. ಅದಕ್ಕಾಗಿ ಹೆತ್ತವರಿಗೆ ಋಣಿಯಾಗಿದ್ದೇನೆ' ಎಂದು ಹೇಳಿದ್ದಾರೆ.

'ಹಳೆಯ ಬ್ಯಾಟ್‌ಗಳನ್ನು ಸಂಗ್ರಹಿಸಿ ಇಡುತ್ತೇನೆ. ನನ್ನ ಮನೆಯಲ್ಲಿ ಅನೇಕ ಬ್ಯಾಟ್‌ಗಳಿವೆ. ಆಟಗಾರನ ಪಾಲಿಗೆ ಬ್ಯಾಟ್ ಭಾವನಾತ್ಮಕ ನಂಟು ಹೊಂದಿದೆ. ಹಾಗಾಗಿ ನನ್ನ ಕ್ರಿಕೆಟ್ ಜೀವನದಲ್ಲಿ ಬಳಕೆ ಮಾಡಿದ ಬ್ಯಾಟ್‌ಗಳನ್ನು ಸಂಗ್ರಹಿಸಿಡುವುದು ನನ್ನ ಪಾಲಿಗೆ ವಿಶೇಷ' ಎಂದು ತಿಳಿಸಿದರು.

'ಭಾರತದ ಪರ ಪದಾರ್ಪಣೆ ಮಾಡಿರುವುದು ಅದ್ಭುತ ಅನುಭವವಾಗಿತ್ತು. ಹಿರಿಯ ಆಟಗಾರರು, ತರಬೇತುದಾರರ ಜೊತೆಗೆ ಸಮಾಲೋಚನೆ ನಡೆಸಲು ಸಾಧ್ಯವಾಯಿತು. ನನ್ನ ಪಾಲಿಗಿದು ಹೆಮ್ಮೆಯ ಕ್ಷಣ. ಆದರೆ ಇದರಿಂದ ನನ್ನ ವ್ಯಕ್ತಿತ್ವದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನಾನು ಅದೇ ರೀತಿ ಉಳಿದುಕೊಳ್ಳಲು ಬಯಸುತ್ತೇನೆ' ಎಂದು ಹೇಳಿದರು.

ತಾವು ಎದುರಿಸಿದ ಬೌಲರ್‌ಗಳ ಪೈಕಿ ಜಸ್‌ಪ್ರೀತ್ ಬೂಮ್ರಾ ದಾಳಿಯನ್ನು ಎದುರಿಸುವುದು ಅತ್ಯಂತ ಸವಾಲಿನಿಂದ ಕೂಡಿತ್ತು ಎಂದಿದ್ದಾರೆ. ಅಲ್ಲದೆ ಮುಂದಿನ ಗುರಿ ಬಗ್ಗೆ ಕೇಳಿದಾಗ, ತಂಡಕ್ಕೆ ಸಾಧ್ಯವಾದಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಡಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT