ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ಮೆಗಾ ಹರಾಜು ಇಂದಿನಿಂದ: ಕನ್ನಡಿಗರತ್ತ ಆರ್‌ಸಿಬಿ ಚಿತ್ತ?

Last Updated 12 ಫೆಬ್ರುವರಿ 2022, 2:28 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಿಕೆಟಿಗರ ಕಂಗಳಲ್ಲಿ ಈಗ ಕೋಟಿ ಕೋಟಿ ಕಾಂಚಾಣದ ಕನಸು. ಶನಿವಾರ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಯ ತಂಡಗಳಿಗಾಗಿ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಹಣದ ಹೊಳೆಯೇ ಹರಿಯಲಿದೆ.

ಎರಡು ಹೊಸ ತಂಡಗಳ ಸೇರ್ಪಡೆಯಿಂದಾಗಿ ಆಟಗಾರರ ಅವಕಾಶಗಳ ವ್ಯಾಪ್ತಿಯೂ ವಿಸ್ತರಿಸಿದೆ. ಆದ್ದರಿಂದ ಹರಾಜು ಪಟ್ಟಿಯಲ್ಲಿರುವ ಆಟಗಾರರು ಕುಬೇರರರಾಗುವ ಕನಸು ಕಾಣುತ್ತಿದ್ದಾರೆ. ಫ್ರ್ಯಾಂಚೈಸಿಗಳು ಕೂಡ ಮುಂದಿನ ಐದು ವರ್ಷಗಳ ಯೋಜನೆಯೊಂದಿಗೆ ತಂಡ ರಚನೆಗೆ ಕೈಹಾಕುವತ್ತ ಚಿತ್ತ ನೆಟ್ಟಿವೆ. ಆದ್ದರಿಂದ ಪ್ರತಿಭಾವಂತ ಯುವ ಆಟಗಾರರು ಮತ್ತು ಅನುಭವಿಗಳ ಸಮತೋಲಿತ ತಂಡವನ್ನು ಆಯ್ಕೆ ಮಾಡುವುದು ಖಚಿತ.

ಭಾರತ ತಂಡದ ಆಟಗಾರರಾದ ಶ್ರೇಯಸ್ ಅಯ್ಯರ್, ಶಿಖರ್ ಧವನ್, ಆರ್. ಆಶ್ವಿನ್, ಕನ್ನಡಿಗ ದೇವದತ್ತ ಪಡಿಕ್ಕಲ್, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್, ಸ್ಟೀವ್ ಸ್ಮಿತ್ ಅವರು ದೊಡ್ಡ ಮೊತ್ತದ ಥೈಲಿಯನ್ನು ತಮ್ಮದಾಗಿಸಿಕೊಳ್ಳು ಸಾಧ್ಯತೆಗಳಿವೆ. ಈ ಹಿಂದಿನ ಹರಾಜು ಪ್ರಕ್ರಿಯೆಗಳಲ್ಲಿ ಅತಿ ಹೆಚ್ಚು ವೈಯಕ್ತಿಕ ಮೊತ್ತ ಪಡೆದವರ ಎಲ್ಲ ದಾಖಲೆಗಳೂ ಈ ಬಾರಿ ದೂಳೀಪಟವಾಗುವ ಸಾಧ್ಯತೆಗಳಿವೆ. ವೈಯಕ್ತಿಕ ಮೌಲ್ಯವು ₹ 20 ಕೋಟಿ ದಾಟುವ ಸಾಧ್ಯತೆ ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ಗಳಿಸಿದ್ದ ₹ 17 ಕೋಟಿಯೇ ಇದುವರೆಗಿನ ಗರಿಷ್ಠ ದಾಖಲೆಯಾಗಿದೆ.

ಕನ್ನಡಿಗರತ್ತ ಆರ್‌ಸಿಬಿ ಚಿತ್ತ?
ಪ್ರತಿ ಬಾರಿಯೂ ಬೆಂಗಳೂರಿನ ತಂಡವು ಬೇರೆ ರಾಜ್ಯಗಳ ತಂಡಗಳನ್ನು ಹೆಚ್ಚು ಸಂಖ್ಯೆಯಲ್ಲಿ ಆಯ್ಕೆ ಮಾಡಿಕೊಂಡು ಟೀಕೆಗೆ ಗುರಿಯಾಗುತ್ತಿದೆ. ಕರ್ನಾಟಕದಲ್ಲಿ ಪ್ರತಿಭಾವಂತ ಕ್ರಿಕೆಟಿಗರಿದ್ದರೂ ಅವಕಾಶ ಸಿಗುತ್ತಿಲ್ಲವೆಂಬ ಕೂಗು ಇದೆ. ಆದರೆ ಕಳೆದೆರಡು ಋತುಗಳಲ್ಲಿ ದೇವದತ್ತ ಪಡಿಕ್ಕಲ್ ಆರ್‌ಸಿಬಿಯಲ್ಲಿ ತೋರಿದ ಅಮೋಘ ಆಟದಿಂದಾಗಿ ಫ್ರ್ಯಾಂಚೈಸಿಯು ಕರ್ನಾಟಕದ ಆಟಗಾರರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಣೆ ಹಾಕುವ ಸಾಧ್ಯತೆ ಇದೆ. ಅಲ್ಲದೇ ವಿರಾಟ್ ಕೊಹ್ಲಿ ನಾಯಕತ್ವ ಬಿಟ್ಟಿರುವುದರಿಂದ ಅವರ ಸ್ಥಾನಕ್ಕೆ ಸಮರ್ಥ ಆಟಗಾರನನ್ನು ಹುಡುಕುವತ್ತಲೂ ತಂಡ ಪ್ರಯತ್ನಿಸುವುದು ಖಚಿತ. ಇದಕ್ಕಾಗಿ ಕರ್ನಾಟಕದ ಅನುಭವಿಗಳಾದ ರಾಬಿನ್ ಉತ್ತಪ್ಪ, ಮನೀಷ್ ಪಾಂಡೆ, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರ ಹೆಸರುಗಳು ಕೇಳಿಬರುತ್ತಿವೆ.

ಕಣಕ್ಕೆ ಮರಳಿದ ಶ್ರೀಶಾಂತ್
ಸ್ಪಾಟ್ ಫಿಕ್ಸಿಂಗ್‌ ಹಗರಣದಲ್ಲಿ ಆರೋಪಮುಕ್ತರಾಗಿ ಮರಳಿರುವ ಕೇರಳದ ವೇಗಿ ಎಸ್‌. ಶ್ರೀಶಾಂತ್ ಐಪಿಎಲ್ ಕಣಕ್ಕೆ ಮರಳಿದ್ದಾರೆ. ಮೆಗಾ ಹರಾಜಿನಲ್ಲಿ ₹ 50 ಲಕ್ಷ ಮೂಲಬೆಲೆ ನಿಗದಿಪಡಿಸಲಾಗಿದೆ. 2013ರ ಐಪಿಎಲ್‌ನಲ್ಲಿ ನಡೆದಿದ್ದ ಮೋಸದಾಟದ ಹಗರಣದಲ್ಲಿ ಅವರು ಆರೋಪ ಎದುರಿಸಿದ್ದರು. ಅದಾದ ನಂತರ ಇದೀಗ ಮತ್ತೆ ಲೀಗ್‌ಗೆ ಮರಳುತ್ತಿದ್ದಾರೆ.

ಅರ್ಜುನ್‌ ತೆಂಡೂಲ್ಕರ್‌ಗೆ ₹ 20 ಲಕ್ಷ!
ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಅವರಿಗೆ ಈ ಐಪಿಎಲ್‌ನಲ್ಲಿ ₹ 20 ಲಕ್ಷ ಮೂಲಬೆಲೆ ನಿಗದಿ ಮಾಡಲಾಗಿದೆ. ಆಲ್‌ರೌಂಡರ್ ಅರ್ಜುನ್ ಕೆಲವು ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡದಲ್ಲಿ ನೆಟ್ ಬೌಲರ್ ಆಗಿ ತರಬೇತಿ ಪಡೆದಿದ್ದಾರೆ. ಹೋದ ಸಲವೂ ಅವರು ಪಟ್ಟಿಯಲ್ಲಿದ್ದರು.

ಕಣದಲ್ಲಿ ಸಚಿವ!
ಪಶ್ಚಿಮ ಬಂಗಾಳ ತಂಡದ ಮಾಜಿ ಆಟಗಾರ ಮತ್ತು ಸದ್ಯ ಕ್ರೀಡಾ ಸಚಿವರಾಗಿರುವ ಮನೋಜ್ ತಿವಾರಿ ಐಪಿಎಲ್‌ನಲ್ಲಿ ಆಡಲು ಉತ್ಸುಕರಾಗಿದ್ದಾರೆ. ಅವರೂ ಕೂಡ ಹರಾಜುಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ₹ 50 ಲಕ್ಷ ಮೂಲಬೆಲೆ ನಿಗದಿಯಾಗಿದೆ. ಐಪಿಎಲ್ ಹರಾಜಿನಲ್ಲಿ ಸ್ಪರ್ಧಿಸಲಿರುವ ಮೊದಲ ರಾಜಕಾರಣಿ ಅವರಾಗಿದ್ದಾರೆ.

ಯಶ್ ಬಳಗದ ಮೇಲೆ ಕಣ್ಣು
19 ವರ್ಷದೊಳಗಿನವರ ವಿಶ್ವಕಪ್ ಗೆದ್ದು ಬಂದಿರುವ ಭಾರತ ತಂಡದ ನಾಯಕ ಯಶ್ ಧುಳ್ ಮತ್ತು ಸಹ ಆಟಗಾರರಿಗೆ ಈ ಹರಾಜಿನಲ್ಲಿ ಉತ್ತಮ ಮೌಲ್ಯ ಲಭಿಸುವ ನಿರೀಕ್ಷೆ ಇದೆ. ಅದರಲ್ಲೂ ರನ್ ಗಳ ಹೊಳೆ ಹರಿಸಿದ್ದ ಯಶ್‌ ಮೇಲೆ ಫ್ರ್ಯಾಂಚೈಸಿಗಳ ಕಣ್ಣಿದೆ. ಇದೇ ತಂಡದಲ್ಲಿದ್ದ ಕನ್ನಡಿಗ ಅನೀಶ್ವರ್ ಗೌತಮ್ ಕೂಡ ಸ್ಪರ್ಧೆಯಲ್ಲಿದ್ದಾರೆ.

ಹಿಂದೆ ಸರಿದ ಆಟಗಾರರು
ವಿದೇಶದ ಕೆಲವು ಆಟಗಾರರು ಈ ಬಾರಿಯ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ. ತಮ್ಮ ದೇಶಗಳ ತಂಡಗಳಿಗೆ ಆಡಲು ಮತ್ತು ಕುಟುಂಬಕ್ಕಾಗಿ ಸಮಯ ಮೀಸಲಿಡಲು ಈ ನಿರ್ಧಾರ ಕೈಗೊಂಡಿದ್ದಾರೆ. ಕ್ರಿಸ್ ಗೇಲ್ (ವಿಂಡೀಸ್), ಜೋ ರೂಟ್, ಬೆನ್ ಸ್ಟೋಕ್ಸ್ (ಇಂಗ್ಲೆಂಡ್), ಕೈಲ್ ಜೆಮಿಸನ್, (ನ್ಯೂಜಿಲೆಂಡ್), ಸ್ಯಾಮ್ ಕರನ್, ಮಿಚೆಲ್ ಸ್ಟಾರ್ಕ್ ಕಣಕ್ಕಿಳಿಯುತ್ತಿಲ್ಲ.

ಮೆಗಾ ಹರಾಜು ದಿನಾಂಕ ಫೆ 12 ಮತ್ತು 13
ಸ್ಥಳ
: ಬೆಂಗಳೂರು
ಆರಂಭ: ಬೆಳಿಗ್ಗೆ 11
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ (15 ಕೋಟಿ), ರಶೀದ್ ಖಾನ್‌ (15 ಕೋಟಿ) ಮತ್ತು ಶುಭಮನ್ ಗಿಲ್‌ (8 ಕೋಟಿ).
ಲಖನೌ ಸೂಪರ್‌ ಜೈಂಟ್ಸ್: ಕೆ.ಎಲ್‌. ರಾಹುಲ್‌ (17 ಕೋಟಿ), ಮಾರ್ಕಸ್‌ ಸ್ಟೋಯಿನಿಸ್‌ (9.2 ಕೋಟಿ), ರವಿ ಬಿಷ್ಣೋಯಿ (4 ಕೋಟಿ).

_______________________
ಅಂಕಿ ಸಂಖ್ಯೆ–ಮಾಹಿತಿ
: ಐಪಿಎಲ್ ವೆಬ್‌ಸೈಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT