ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ಧೋನಿ ವಿಸ್ಮಯ; 2016ರ ಟಿ20 ವಿಶ್ವಕಪ್ ನೆನಪಿಸಿದ ಅದ್ಭುತ ರನೌಟ್

Last Updated 3 ಏಪ್ರಿಲ್ 2022, 15:17 IST
ಅಕ್ಷರ ಗಾತ್ರ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ, ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಅದ್ಭುತ ರನೌಟ್ ಮಾಡುವ ಮೂಲಕ ಕ್ರಿಕೆಟ್ ಪ್ರೇಮಿಗಳನ್ನು ಬೆರಗುಗೊಳಿಸಿದ್ದಾರೆ.

ಮುಂಬೈನ ಬ್ರೆಬೋರ್ನ್ ಮೈದಾನದಲ್ಲಿ ಭಾನುವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಧೋನಿ, ಮಗದೊಮ್ಮೆ ಅದ್ಭುತ ವಿಕೆಟ್ ಕೀಪಿಂಗ್ ಕೌಶಲ್ಯ ಮೆರೆದರು.

ವೇಗಿ ಕ್ರಿಸ್ ಜಾರ್ಡನ್ ಎಸೆದ ದ್ವಿತೀಯ ಓವರ್‌ನ ಎರಡನೇ ಎಸೆತದಲ್ಲಿ ಪಂಜಾಬ್ ಬ್ಯಾಟರ್ ಭಾನುಕ ರಾಜಪಕ್ಸ ಒಂದು ರನ್ ಕದಿಯಲು ಯತ್ನಿಸಿದರು. ಆದರೆ ನಾನ್ ಸ್ಟ್ರೈಕರ್‌ನಲ್ಲಿದ್ದ ಶಿಖರ್ ಧವನ್ ಜೊತೆಗಿನ ಹೊಂದಾಣಿಕೆ ಕೊರತೆಯಿಂದಾಗಿ ಮತ್ತೆ ಕ್ರೀಸಿನತ್ತ ಧಾವಿಸಿದರು.

ಇದನ್ನು ಗಮನಿಸಿದ ಬೌಲರ್ ಕ್ರಿಸ್ ಜಾರ್ಡನ್, ಚೆಂಡನ್ನು ವಿಕೆಟ್‌ನತ್ತ ಎಸೆದರು. ಈ ಸಂದರ್ಭದಲ್ಲಿ ಅದ್ಭುತ ಸಮಯಪ್ರಜ್ಞೆ ಮೆರೆದ ಧೋನಿ, ವಿಕೆಟ್‌ನತ್ತ ಮಿಂಚಿನ ವೇಗದಲ್ಲಿ ಓಡಿ ಬಂದು ಬೇಲ್ಸ್ ಹಾರಿಸುವಲ್ಲಿ ಯಶಸ್ವಿಯಾದರು.

ಪರಿಣಾಮ ಒಂದು ಸಿಕ್ಸರ್ ಬಾರಿಸಿ ಅಪಾಯಕಾರಿಯಾಗಿ ಮುನ್ನುಗ್ಗುತ್ತಿದ್ದ ರಾಜಪಕ್ಸ, ರನೌಟ್ ಆಗಿ ಪೆವಿಲಿಯನ್‌ಗೆ ಹಿಂತಿರುಗಬೇಕಾಯಿತು.

ಪ್ರಸ್ತುತ ಘಟನೆಯು 2016ರ ಟ್ವೆಂಟಿ-20 ವಿಶ್ವಕಪ್ ರನೌಟ್ ಅನ್ನು ನೆನಪಿಸಿತು. ಅಂದು ಬೆಂಗಳೂರಿನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದ ಕೊನೆಯ ಎಸೆತದಲ್ಲಿ ರನೌಟ್ ಮಾಡಿದ ಧೋನಿ ಭಾರತಕ್ಕೆ ಒಂದು ರನ್ ಅಂತರದ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾಗಿದ್ದರು.

40ರ ಹರೆಯದಲ್ಲೂ ಗರಿಷ್ಠ ಫಿಟ್‌ನೆಸ್ ಮಟ್ಟವನ್ನು ಕಾಯ್ದುಕೊಂಡಿರುವ ಧೋನಿ, ಯುವ ಕ್ರಿಕೆಟಿಗರಿಗೆ ಮಾದರಿಯಾಗಿದ್ದಾರೆ. ಪ್ರಸ್ತುತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕ್ರಿಕೆಟ್ ತಜ್ಞರ ಮೆಚ್ಚುಗೆಗೆ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT