ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 DC vs RR: ಬಟ್ಲರ್ ಶತಕ; ಡೆಲ್ಲಿಗೆ ಸೋಲು, ರಾಜಸ್ಥಾನ್ ಟಾಪ್

Last Updated 22 ಏಪ್ರಿಲ್ 2022, 18:22 IST
ಅಕ್ಷರ ಗಾತ್ರ

ಮುಂಬೈ:ಜೋಸ್ ಬಟ್ಲರ್ ಮಗದೊಂದು ಆಕರ್ಷಕ ಶತಕದ (116) ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಶುಕ್ರವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 15 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಅಂತಿಮ ಓವರ್‌ನಲ್ಲಿ ನಡೆದ ನಾಟಕೀಯ ಬೆಳವಣಿಗೆಯು ಮತ್ತಷ್ಟು ರೋಚಕತೆಗೆ ಸಾಕ್ಷಿಯಾಗಿತ್ತು. ಅಂಪೈರ್ ನೋ ಬಾಲ್ ತೀರ್ಪು ನೀಡದಿರುವುದು ಡೆಲ್ಲಿ ತಂಡದ ಆಕ್ರೋಶಕ್ಕೆ ಕಾರಣವಾಗಿತ್ತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್, ಬಟ್ಲರ್ ಶತಕದ ನೆರವಿನಿಂದ ಎರಡು ವಿಕೆಟ್ ನಷ್ಟಕ್ಕೆ 222 ರನ್‌ಗಳ ಬೃಹತ್ ಮೊತ್ತ ಗಳಿಸಿತ್ತು.

ಬಳಿಕ ಗುರಿ ಬೆನ್ನಟ್ಟಿದ ಡೆಲ್ಲಿ ಎಂಟು ವಿಕೆಟ್ ನಷ್ಟಕ್ಕೆ 207 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಈ ಗೆಲುವಿನೊಂದಿಗೆ ಆಡಿರುವ ಏಳು ಪಂದ್ಯಗಳಲ್ಲಿ ಐದನೇ ಗೆಲುವು ದಾಖಲಿಸಿರುವ ಸಂಜು ಸ್ಯಾಮ್ಸನ್ ಪಡೆ ಒಟ್ಟು 10 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅತ್ತ ಡೆಲ್ಲಿ ಅಷ್ಟೇ ಪಂದ್ಯಗಳಲ್ಲಿ ನಾಲ್ಕನೇ ಸೋಲಿಗೆ ಒಳಗಾಗಿದೆ.

ಚೇಸಿಂಗ್ ವೇಳೆ ಡೆಲ್ಲಿ ತಂಡಕ್ಕೆ ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ಬಿರುಸಿ ನ ಆರಂಭವೊದಗಿಸಿದರು. ಈ ಬಾರಿಯ ಐಪಿಎಲ್‌ನಲ್ಲಿ ಸ್ಫೋಟಕ ಆರಂಭಿಕ ಜೋಡಿ ಎನಿಸಿರುವ ವಾರ್ನರ್ ಹಾಗೂ ಪೃಥ್ವಿ ಮೊದಲ ವಿಕೆಟ್‌ಗೆ 4.3 ಓವರ್‌ಗಳಲ್ಲಿ 43 ರನ್ ಪೇರಿಸಿದರು.

ವಾರ್ನರ್ 28 ರನ್ (14 ಎಸೆತ, 5 ಬೌಂಡರಿ, 1 ಸಿಕ್ಸರ್) ಗಳಿಸಿ ಔಟ್ ಆದರು. ಈ ನಡುವೆ ಸರ್ಫರಾಜ್ ಖಾನ್ (1) ನಿರಾಸೆ ಮೂಡಿಸಿದರು.

ಇನ್ನೊಂದೆಡೆ ಪೃಥ್ವಿ ಶಾ 37 ರನ್‌ಗಳ (27 ಎಸೆತ, 5 ಬೌಂಡರಿ, 1 ಸಿಕ್ಸರ್) ಕಾಣಿಕೆ ನೀಡಿದರು.

ಅತ್ತ ದಿಟ್ಟ ಹೋರಾಟ ಪ್ರದರ್ಶನ ಪ್ರದರ್ಶಿಸಿದ ನಾಯಕ ರಿಷಭ್ ಪಂತ್ ಪತನದೊಂದಿಗೆ ಡೆಲ್ಲಿ ಗೆಲುವಿನ ಆಸೆ ಕಮರಿತು. 24 ಎಸೆತಗಳನ್ನು ಎದುರಿಸಿದ ಪಂತ್ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 44 ರನ್ ಗಳಿಸಿದರು.

ಕೊನೆಯ ಹಂತದಲ್ಲಿ ಲಲಿತ್ ಯಾದವ್ (37), ರೋವ್‌ಮ್ಯಾನ್ ಪೊವೆಲ್ (36) ಹಾಗೂ ಶಾರ್ದೂಲ್ ಠಾಕೂರ್ (10) ಪ್ರಯತ್ನಿಸಿದರೂ ಗೆಲುವಿನ ದಡ ಸೇರಲಾಗಲಿಲ್ಲ.

ಕೊನೆಯ ಓವರ್‌ನಲ್ಲಿ ರೋವ್‌ಮ್ಯಾನ್ ಸತತ ಮೂರು ಸಿಕ್ಸರ್ ಬಾರಿಸಿದರೂ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ.

ಬಟ್ಲರ್ ಸತತ ಎರಡನೇ ಶತಕ...

ಈ ಮೊದಲು ಜೋಸ್ ಬಟ್ಲರ್ (116) ಹಾಗೂ ದೇವದತ್ ಪಡಿಕ್ಕಲ್ (54) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್, ಎರಡುವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತ್ತು.

ನಾಯಕ ಸಂಜು ಸ್ಯಾಮ್ಸನ್ ಕೂಡ 46* ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು.

ರಾಜಸ್ಥಾನ್ ತಂಡಕ್ಕೆ ಜೋಸ್ ಬಟ್ಲರ್ ಹಾಗೂ ದೇವದತ್ ಪಡಿಕ್ಕಲ್ ಎಚ್ಚರಿಕೆಯ ಆರಂಭವೊದಗಿಸಿದರು. ಒಮ್ಮೆ ಕ್ರೀಸಿನಲ್ಲಿ ನೆಲೆಯೂರಿದ ಬಳಿಕ ಡೆಲ್ಲಿ ಬೌಲರ್‌ಗಳನ್ನು ದಂಡಿಸಿದರು.

ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಅಮೋಘ ಬ್ಯಾಟಿಂಗ್ ಲಯ ಮುಂದುವರಿಸಿದ ಬಟ್ಲರ್ 36 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. 11ನೇ ಓವರ್‌ನಲ್ಲಿ ರಾಜಸ್ಥಾನ್ 100ರ ಗಡಿ ದಾಟಿತು.

ಬಟ್ಲರ್‌ಗೆ ಉತ್ತಮ ಸಾಥ್ ನೀಡಿದ ಪಡಿಕ್ಕಲ್, 31 ಎಸೆತಗಳಲ್ಲಿ ಫಿಫ್ಟಿ ಬಾರಿಸಿದರು. ಬಟ್ಲರ್ ಹಾಗೂ ದೇವದತ್ ಮೊದಲ ವಿಕೆಟ್‌ಗೆ 15.1 ಓವರ್‌ಗಳಲ್ಲಿ 155 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

35 ಎಸೆತಗಳನ್ನು ಎದುರಿಸಿದ ದೇವದತ್ 54 ರನ್ (7 ಬೌಂಡರಿ, 2 ಸಿಕ್ಸರ್) ಗಳಿಸಿದರು.

ಅತ್ತ ಆಕ್ರಮಣಕಾರಿ ಆಟವಾಡಿದ ಬಟ್ಲರ್ 57 ಎಸೆತಗಳಲ್ಲಿ ಶತಕ ಸಾಧನೆ ಮಾಡಿದರು. ಈ ಮೂಲಕ ಪ್ರಸಕ್ತ ಸಾಲಿನಲ್ಲಿ ಮೂರನೇ ಹಾಗೂ ಒಟ್ಟಾರೆಯಾಗಿ ಐಪಿಎಲ್‌ನಲ್ಲಿ ನಾಲ್ಕನೇ ಶತಕ ಗಳಿಸಿದರು.

ಬಳಿಕ ಬಟ್ಲರ್‌ ಜೊತೆಗೂಡಿದ ನಾಯಕ ಸಂಜು ಸ್ಯಾಮ್ಸನ್ ಸಹ ಬಿರುಸಿನ ಆಟವಾಡುವ ಮೂಲಕ ಗಮನ ಸೆಳೆದರು.

ಅಂತಿಮವಾಗಿ ರಾಜಸ್ಥಾನ್ ಎರಡು ವಿಕೆಟ್ ನಷ್ಟಕ್ಕೆ 222 ರನ್‌ಗಳ ಬೃಹತ್ ಮೊತ್ತ ಪೇರಿಸಿತು. 65 ಎಸೆತಗಳನ್ನು ಎದುರಿಸಿದ ಬಟ್ಲರ್ ತಲಾ ಒಂಬತ್ತು ಬೌಂಡರಿ ಹಾಗೂ ಸಿಕ್ಸರ್‌ಗಳ ನೆರವಿನಿಂದ 116 ರನ್ ಗಳಿಸಿದರು.

ಡೆಲ್ಲಿ ಫೀಲ್ಡಿಂಗ್...

ಈ ಮೊದಲು ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಡೆಲ್ಲಿ ತಂಡದಲ್ಲಿ ಕೋವಿಡ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಪಂದ್ಯವನ್ನು ಪುಣೆಯಿಂದ ಮುಂಬೈನ ವಾಂಖೆಡೆ ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು.

ಕುಟುಂಬ ಸದಸ್ಯನಿಗೆ ಕೋವಿಡ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಡೆಲ್ಲಿ ಕೋಚ್ ರಿಕಿ ಪಾಂಟಿಂಗ್ ಸಹ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ಪ್ಲೇಯಿಂಗ್ ಇಲೆವೆನ್...

ಚಾಹಲ್ vs ಕುಲ್‌ದೀಪ್

ರಾಜಸ್ಥಾನ್ರಾಯಲ್ಸ್ ತಂಡದ ಯಜುವೇಂದ್ರ ಚಾಹಲ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಚೈನಾಮೆನ್ ಬೌಲರ್ ಕುಲ್‌ದೀಪ್ ಯಾದವ್ ನೇರ ಸ್ಪರ್ಧೆಗೆ ವೇದಿಕೆ ಸಿದ್ಧಗೊಂಡಿದೆ.

ಕಳೆದ ಪಂದ್ಯದಲ್ಲಿ ರಾಯಲ್ಸ್‌ನ ಚಾಹಲ್ ಕೋಲ್ಕತ್ತ ನೈಟ್ ರೈಡರ್ಸ್ ಎದುರು ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಆ ಪಂದ್ಯದಲ್ಲಿ ಒಟ್ಟು ಐದು ವಿಕೆಟ್ ಗಳಿಸಿ ತಂಡಕ್ಕೆ ಜಯದ ಕಾಣಿಕೆ ನೀಡಿ ದ್ದರು.

ಬುಧವಾರದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಅಲ್ಪಮೊತ್ತ ಗಳಿಸಲು ಕುಲದೀಪ್ ಯಾದವ್ ಬೌಲಿಂಗ್ ನೆರವಾಗಿತ್ತು.

ಡೆಲ್ಲಿ ತಂಡವು ಮೂರು ಪಂದ್ಯ ಗೆದ್ದು, ಮೂರರಲ್ಲಿ ಸೋತಿದೆ.

ಇನ್ನೊಂದೆಡೆ ರಾಯಲ್ಸ್ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ದಾಖಲಿಸಿದೆ. ಆರಂಭಿಕ ಆಟಗಾರ ಜೋಸ್ ಬಟ್ಲರ್ ಈ ಟೂರ್ನಿಯಲ್ಲಿ ಎರಡು ಶತಕ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT