ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 GT vs SRH: ತೆವಾಟಿಯಾ, ರಶೀದ್ ಅಬ್ಬರ; ಗುಜರಾತ್‌ಗೆ ರೋಚಕ ಜಯ

Last Updated 27 ಏಪ್ರಿಲ್ 2022, 18:27 IST
ಅಕ್ಷರ ಗಾತ್ರ

ಮುಂಬೈ: ವೃದ್ಧಿಮಾನ್ ಸಹಾ (68) ಹಾಗೂ ಕೊನೆಯ ಹಂತದಲ್ಲಿ ರಾಹುಲ್ ತೆವಾಟಿಯಾ (40*) ಹಾಗೂ ರಶೀದ್ ಖಾನ್ (31*) ಅಬ್ಬರದ ನೆರವಿನಿಂದ ಗುಜರಾತ್ ಟೈಟನ್ಸ್, ಬುಧವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಐದು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಇದರೊಂದಿಗೆ ಯುವ ವೇಗಿ ಉಮ್ರಾನ್ ಮಲಿಕ್ ಚೊಚ್ಚಲ ಐದು ವಿಕೆಟ್ ಸಾಧನೆಯು ವ್ಯರ್ಥವೆನಿಸಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ಅಭಿಷೇಕ್ ಶರ್ಮಾ (65) ಹಾಗೂ ಏಡನ್ ಮಾರ್ಕರಮ್ ಆಕರ್ಷಕ ಅರ್ಧಶತಕಗಳ (56) ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತ್ತು.

ಬಳಿಕ ಗುರಿ ಬೆನ್ನಟ್ಟಿದ ಗುಜರಾತ್ ಒಂದು ಹಂತದಲ್ಲಿ 16 ಓವರ್‌ಗಳಲ್ಲಿ 140 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸೋಲಿನ ಭೀತಿಗೊಳಗಾಗಿತ್ತು.

ಆದರೆ ಮುರಿಯದ ಆರನೇ ವಿಕೆಟ್‌ಗೆ 24 ಎಸೆತಗಳಲ್ಲಿ 59 ರನ್‌ಗಳ ಜೊತೆಯಾಟ ಕಟ್ಟಿದ ತೆವಾಟಿಯಾ ಹಾಗೂ ರಶೀದ್, ಹೈದರಾಬಾದ್ ಕೈಯಿಂದ ಗೆಲುವನ್ನು ಅಕ್ಷರಶಃ ಕಸಿದುಕೊಂಡರು.

ಕೊನೆಯ ಓವರ್‌ನಲ್ಲಿ ಗುಜರಾತ್ ಗೆಲುವಿಗೆ 22 ರನ್‌ಗಳ ಅಗತ್ಯವಿತ್ತು. ಮಾರ್ಕೊ ಜಾನ್ಸೆನ್ ಎಸೆದ ಅಂತಿಮ ಓವರ್‌ನಲ್ಲಿ ತೆವಾಟಿಯಾ ಹಾಗೂ ರಶೀದ್ ಅಬ್ಬರಿಸುವ ಮೂಲಕ ಗುಜರಾತ್‌ಗೆ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು.

ಕೊನೆಯ ಓವರ್‌ನಲ್ಲಿ ರಶೀದ್ ಮೂರು ಹಾಗೂ ತೆವಾಟಿಯಾ ಒಂದು ಸಿಕ್ಸರ್ ಬಾರಿಸುವ ಮೂಲಕ ಅಬ್ಬರಿಸಿದರು.

ಇದರೊಂದಿಗೆ ಇದೇ ಮೊದಲ ಬಾರಿಗೆ ಐಪಿಎಲ್‌ಗೆ ಪದಾರ್ಪಣೆ ಮಾಡಿರುವ ಗುಜರಾತ್, ಎಂಟು ಪಂದ್ಯಗಳಲ್ಲಿ ಏಳನೇ ಗೆಲುವಿನೊಂದಿಗೆ ಒಟ್ಟು 14 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಅತ್ತ ಹೈದರಾಬಾದ್ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದ್ದು, ಎಂಟು ಪಂದ್ಯಗಳಲ್ಲಿ ಮೂರನೇ ಸೋಲು ಅನುಭವಿಸಿದೆ. ಆದರೂ 10 ಅಂಕಗಳೊಂದಿಗೆ ಮೂರನೇ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಗುಜರಾತ್ ತಂಡಕ್ಕೆ ವೃದ್ಧಿಮಾನ್ ಸಹಾ ಹಾಗೂ ಶುಭಮನ್ ಗಿಲ್ ಉತ್ತಮ ಆರಂಭವೊದಗಿಸಿದರು. ಗಿಲ್ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರೆ ಸಹಾ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದರು.

ಇವರಿಬ್ಬರು ಮೊದಲ ವಿಕೆಟ್‌ಗೆ 46 ಎಸೆತಗಳಲ್ಲಿ 69 ರನ್ ಪೇರಿಸಿದರು. ಈ ಹಂತದಲ್ಲಿ ದಾಳಿಗಿಳಿದ ಸ್ಪೀಡ್ ಸ್ಟಾರ್ ಉಮ್ರಾನ್ ಮಲಿಕ್, ಡಬಲ್ ಆಘಾತ ನೀಡಿದರು.

ಗಿಲ್ (22) ಜೊತೆಗೆ ನಾಯಕ ಹಾರ್ದಿಕ್ ಪಾಂಡ್ಯರನ್ನು (10) ಪೆವಿಲಿಯನ್‌ಗೆ ಅಟ್ಟಿದರು.

ಅತ್ತ ಬಿರುಸಿನ ಆಟವಾಡಿದ ಸಹಾ 28 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅವರಿಗೆ ಡೇವಿಡ್ ಮಿಲ್ಲರ್ ಅವರಿಂದ ಉತ್ತಮ ಬೆಂಬಲ ದೊರಕಿತು.

ಇನ್ನಿಂಗ್ಸ್‌ನ 14ನೇ ಓವರ್‌ನಲ್ಲಿ ಮಗದೊಮ್ಮೆ ದಾಳಿಗಿಳಿದ ಮಲಿಕ್, ಅಪಾಯಕಾರಿ ಸಹಾ ಅವರನ್ನು ಗಂಟೆಗೆ 153 ಕಿ.ಮೀ. ವೇಗದಲ್ಲಿ ಯಾರ್ಕರ್ ಎಸೆದು ಕ್ಲೀನ್ ಬೌಲ್ಡ್ ಮಾಡಿ ಮೋಡಿ ಮಾಡಿದರು.

38 ಎಸೆತಗಳನ್ನು ಎದುರಿಸಿದ ಸಹಾ 11 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 68 ರನ್ ಗಳಿಸಿದರು.

ಅಂತಿಮ ಐದು ಓವರ್‌ನಲ್ಲಿ ಗುಜರಾತ್ ಗೆಲುವಿಗೆ 61 ರನ್ ಬೇಕಾಗಿತ್ತು. ಆದರೆ ಡೇವಿಡ್ ಮಿಲ್ಲರ್ (17) ಹಾಗೂ ಅಭಿನವ್ ಮನೋಹರ್ (0) ಕ್ಲೀನ್ ಬೌಲ್ಡ್ ಮಾಡಿದ ಉಮ್ರಾನ್, ಗುಜರಾತ್ ಓಟಕ್ಕೆ ಕಡಿವಾಣ ಹಾಕಿದರು.

ಈ ಮೂಲಕ ಐದು ವಿಕೆಟ್ ಸಾಧನೆ ಮಾಡಿದರು. ಈ ಪೈಕಿ ನಾಲ್ವರು ಆಟಗಾರರನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಯಶಸ್ವಿಯಾದರು.

ಗಂಟೆಗೆ ಸರಾಸರಿ 145ರಿಂದ 150 ಕಿ.ಮೀ. ವೇಗದ ಎಸೆತದಿಂದಲೇ ಮೋಡಿ ಮಾಡಿರುವ ಉಮ್ರಾನ್ ಮಲಿಕ್, ಐಪಿಎಲ್‌ನಲ್ಲಿ ಚೊಚ್ಚಲ ಐದು ವಿಕೆಟ್ ಸಾಧನೆ ಮಾಡುವ ಮೂಲಕ ಉಜ್ವಲ ಭವಿಷ್ಯವನ್ನು ಸಾರಿದರು.

ಅಂತಿಮ ಹಂತದಲ್ಲಿ ಅಬ್ಬರಿಸಿದ ತೆವಾಟಿಯಾ ಹಾಗೂ ರಶೀದ್ ಪಂದ್ಯದ ಫಲಿತಾಂಶವನ್ನೇ ಬದಲಿಸಿದರು. ತೆವಾಟಿಯಾ 21 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 40 ರನ್ ಗಳಿಸಿ ಔಟಾಗದೆ ಉಳಿದರು.

ಅತ್ತ ಕೇವಲ 11 ಎಸೆತಗಳನ್ನು ಎದುರಿಸಿದ ರಶೀದ್, ನಾಲ್ಕು ಸಿಕ್ಸರ್ ನೆರವಿನಿಂದ 31 ರನ್ ಗಳಿಸಿ ಅಜೇಯರಾಗುಳಿದರು. ಅಂತಿಮ ಎಸೆತದಲ್ಲಿ ಸಿಕ್ಸರ್ ಬಾರಿಸಿದ ರಶೀದ್ ತನ್ನ ಮಾಜಿ ತಂಡದ ವಿರುದ್ಧ ಗುಜರಾತ್‌ಗೆ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು.

ಹೈದರಾಬಾದ್ 195/6

ಅಭಿಷೇಕ್ ಶರ್ಮಾ (65) ಹಾಗೂ ಅನುಭವಿ ಏಡನ್ ಮಾರ್ಕರಮ್ ಆಕರ್ಷಕ ಅರ್ಧಶತಕಗಳ (56) ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆರು ವಿಕೆಟ್ ನಷ್ಟಕ್ಕೆ 195 ರನ್ ಪೇರಿಸಿತ್ತು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಹೈದರಾಬಾದ್ ತಂಡಕ್ಕೆ ಆರಂಭದಲ್ಲೇ ನಾಯಕ ಕೇನ್ ವಿಲಿಯಮ್ಸನ್ (5) ವಿಕೆಟ್ ನಷ್ಟವಾಗಿತ್ತು. ಉತ್ತಮ ಲಯದಲ್ಲಿದ್ದ ರಾಹುಲ್ ತ್ರಿಪಾಠಿ (16) ಅವರಿಗೂ ಮಿಂಚಲು ಸಾಧ್ಯವಾಗಲಿಲ್ಲ.

ಈ ಹಂತದಲ್ಲಿ ಜೊತೆಗೂಡಿದ ಅಭಿಷೇಕ್ ಹಾಗೂ ಏಡನ್ ತಂಡವನ್ನು ಮುನ್ನಡೆಸಿದರು. ಮೂರನೇ ವಿಕೆಟ್‌ಗೆ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದ ಈ ಜೋಡಿ, ಆಸರೆಯಾದರು.

ಕಲಾತ್ಮಕ ಇನ್ನಿಂಗ್ಸ್ ಕಟ್ಟಿದ ಅಭಿಷೇಕ್ 33 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಆದರೆ ಅರ್ಧಶತಕದ ಬಳಿಕ ಔಟ್ ಆದರು. 42 ಎಸೆತಗಳನ್ನು ಎದುರಿಸಿದ ಅಭಿಷೇಕ್ ಆರು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 65 ರನ್ ಗಳಿಸಿದರು.

ಅಲ್ಲದೆ ಮಾರ್ಕರಮ್ ಜೊತೆ ಮೂರನೇ ವಿಕೆಟ್‌ಗೆ 96 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಈ ನಡುವೆ ನಿಕೋಲಸ್ ಪೂರನ್ (3) ಪ್ರಭಾವಿ ಎನಿಸಲಿಲ್ಲ.

ಅತ್ತ ಗುಜರಾತ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಮಾರ್ಕರಮ್, 35 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.

ಅಂತಿಮವಾಗಿ ಎಸ್‌ಆರ್‌ಎಚ್ ಆರು ವಿಕೆಟ್ ನಷ್ಟಕ್ಕೆ ರನ್ 195 ಗಳಿಸಿತು. 40 ಎಸೆತಗಳನ್ನು ಎದುರಿಸಿದ ಮಾರ್ಕರಮ್ 56 ರನ್ (3 ಸಿಕ್ಸರ್, 2 ಬೌಂಡರಿ) ಗಳಿಸಿದರು.

ಕೊನೆಯಲ್ಲಿ ಕೇವಲ 6 ಎಸೆತಗಳಲ್ಲಿ ಅಜೇಯ 25 ರನ್ (3 ಸಿಕ್ಸರ್, 1 ಬೌಂಡರಿ) ಗಳಿಸಿದ ಶಶಾಂಕ್ ಸಿಂಗ್ ಅಬ್ಬರಿಸಿದರು. ಗುಜರಾತ್ ಪರ ಮೊಹಮ್ಮದ್ ಶಮಿ ಮೂರು ವಿಕೆಟ್ ಕಬಳಿಸಿದರು.

ಟಾಸ್ ಗೆದ್ದ ಗುಜರಾತ್ ಫೀಲ್ಡಿಂಗ್...
ಈ ಮೊದಲುಟಾಸ್ ಗೆದ್ದ ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಈ ಮೂಲಕಎಸ್‌ಆರ್‌ಎಚ್ ನಾಯಕ ಕೇನ್ ವಿಲಿಯಮ್ಸನ್, ಪ್ರಸಕ್ತ ಸಾಲಿನಲ್ಲಿ ಮೊದಲ ಬಾರಿಗೆ ಟಾಸ್ ಕಳೆದುಕೊಂಡಿದ್ದಾರೆ.

ಏಪ್ರಿಲ್ 11ರಂದು ಇತ್ತಂಡಗಳು ಮುಖಾಮುಖಿಯಾದಾಗ ಸನ್‌ರೈಸರ್ಸ್ ಹೈದರಾಬಾದ್ ಎಂಟು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು. ಟೂರ್ನಿಯಲ್ಲಿ ಗುಜರಾತ್ ಎದುರಿಸಿದ ಏಕೈಕ ಸೋಲು ಇದಾಗಿದೆ.

ಈಗ ಇತ್ತಂಡಗಳುಅಗ್ರಸ್ಥಾನಕ್ಕಾಗಿ ಸೆಣಸಲಿವೆ. ಹಾಗಾಗಿ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಹೆಚ್ಚು ರೋಚಕತೆಗೆ ಕಾರಣವಾಗಿದೆ.

ಹನ್ನೊಂದರ ಬಳಗ:

ಐಪಿಎಲ್‌ಗೆ ಇದೇ ಮೊದಲ ಬಾರಿಪದಾರ್ಪಣೆ ಮಾಡಿರುವ ಗುಜರಾತ್ ಏಳು ಪಂದ್ಯಗಳಲ್ಲಿ ಆರರಲ್ಲಿ ಗೆದ್ದು ಎರಡನೇ ಸ್ಥಾನದಲ್ಲಿದೆ. ನಾಯಕ ಹಾರ್ದಿಕ್ ಪಾಂಡ್ಯ ಅಮೋಘ ಲಯದಲ್ಲಿದ್ದಾರೆ.

ಅತ್ತ ಸನ್‌ರೈಸರ್ಸ್ ಏಳು ಪಂದ್ಯಗಳಲ್ಲಿ ಐದರಲ್ಲಿ ಗೆದ್ದು 10 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಕೇನ್ ವಿಲಿಯಮ್ಸನ್ ನಾಯಕತ್ವದ ಎಸ್‌ಆರ್‌ಎಚ್ ಬೌಲಿಂಗ್ ಪಡೆಯನ್ನು ಎದುರಿಸುವುದು ಗುಜರಾತ್ ಪಾಲಿಗೆ ಸವಾಲೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT