ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022| ಬೆಂಗಳೂರು ಬಳಗಕ್ಕೆ ಗೆಲುವಿನ ತವಕ

ಆರ್‌ಸಿಬಿ ಬೌಲರ್‌ಗಳ ಮೇಲೆ ಕಣ್ಣು; ಆತ್ಮವಿಶ್ವಾಸದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ
Last Updated 29 ಮಾರ್ಚ್ 2022, 17:01 IST
ಅಕ್ಷರ ಗಾತ್ರ

ನವೀ ಮುಂಬೈ : ಮೊದಲ ಪಂದ್ಯದಲ್ಲಿ ಕಳಪೆ ಬೌಲಿಂಗ್‌ನಿಂದಾಗಿ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬುಧವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಕಣಕ್ಕಿಳಿಯಲಿದೆ.

ಟೂರ್ನಿಯ ಉದ್ಘಾಟನೆ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ಶುಭಾರಂಭ ಮಾಡಿರುವ ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತ ಭರ್ತಿ ಆತ್ಮವಿಶ್ವಾಸದಲ್ಲಿದೆ. ಆದರೆ, ಪಂಜಾಬ್ ಕಿಂಗ್ಸ್ ತಂಡಕ್ಕೆ 206 ರನ್‌ಗಳ ಕಠಿಣ ಗುರಿ ನೀಡುವಲ್ಲಿ ಯಶಸ್ವಿಯಾಗಿದ್ದ ಫಫ್ ಡುಪ್ಲೆಸಿ ನಾಯಕತ್ವದ ಬೆಂಗಳೂರು ತಂಡವು ಸೋಲನುಭವಿಸಿತ್ತು.

ಮೊದಲ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ್ದ ಫಫ್ ಭರ್ಜರಿ 88 ರನ್‌ಗಳನ್ನು ಗಳಿಸಿದ್ದರು. ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ಕೂಡ ಮಹತ್ವದ ಕಾಣಿಕೆ ಕೊಟ್ಟಿದ್ದರು. ಫಫ್ ಜೊತೆಗೆ ಇನಿಂಗ್ಸ್ ಆರಂಭಿಸಿದ್ದ ಅನುಜ್ ರಾವತ್ ಕೂಡ ಭರವಸೆ ಮೂಡಿಸಿರುವ ಆಟಗಾರ. ಬ್ಯಾಟಿಂಗ್‌ನಲ್ಲಿ ಈ ನಾಲ್ವರೇ ಈಗ ಪ್ರಮಖ ಶಕ್ತಿಯಾಗಿದ್ದಾರೆ.

ಆದರೆ, ಹೋದ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ್ದ ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ತಮ್ಮ ಲಯಕ್ಕೆ ಮರಳಿದರೆ ಮಾತ್ರ ತಂಡದ ಗೆಲುವು ಸಾಧ್ಯವಾಗಬಹುದು. ಹೋದ ಪಂದ್ಯದಲ್ಲಿ ಸಿರಾಜ್ 59 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಶ್ರೀಲಂಕಾ ಸ್ಪಿನ್ನರ್ ವಣಿಂದು ಹಸರಂಗಾ ಕೂಡ ಬೌಲಿಂಗ್‌ನಲ್ಲಿ ಮಿಂಚಿದರೆ ಮಾತ್ರ ಕೋಲ್ಕತ್ತದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಲು ಸಾಧ್ಯ.

ಅನುಭವಿ ಅಜಿಂಕ್ಯ ರಹಾನೆ ಆರಂಭಿಕ ಬ್ಯಾಟರ್ ಆಗಿ ಲಯ ಕಂಡುಕೊಂಡಿದ್ದಾರೆ. ವೆಂಟಕೇಶ್ ಅಯ್ಯರ್, ಶ್ರೇಯಸ್, ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ಕೂಡ ಪಂದ್ಯದ ಜಯವನ್ನು ತಮ್ಮತ್ತ ಸೆಳೆಯಬಲ್ಲ ಬ್ಯಾಟರ್‌ಗಳು. ಬೌಲಿಂಗ್‌ನಲ್ಲಿ ಉಮೇಶ್ ಯಾದವ್ ಮೊದಲ ಪಂದ್ಯದಲ್ಲಿ ತಮ್ಮ ಪ್ರತಾಪ ತೋರಿಸಿದ್ದಾರೆ. ಆದ್ದರಿಂದ ಆರ್‌ಸಿಬಿ ಬಳಗಕ್ಕೂ ಸವಾಲೊಡ್ಡಲು ಸಿದ್ಧರಾಗಿದ್ದಾರೆ.

ಮುಸ್ಸಂಜೆಯ ವಾತಾವರಣದಲ್ಲಿ ತಾವಾಂಶ ಜಾಸ್ತಿ ಇರುವುದರಿಂದ ಟಾಸ್ ಗೆದ್ದವರು ತೆಗೆದುಕೊಳ್ಳುವ ನಿರ್ಧಾರವೂ ಪ್ರಮುಖವಾಗಲಿದೆ.

ತಂಡಗಳು: ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಫ್ ಡುಪ್ಲೆಸಿ (ನಾಯಕ), ವಿರಾಟ್ ಕೊಹ್ಲಿ, ಅನುಜ್ ರಾವತ್, ವಣಿಂದು ಹಸರಂಗಾ, ಹರ್ಷಲ್ ಪಟೇಲ್, ದಿನೇಶ್ ಕಾರ್ತಿಕ್, ಜೋಶ್ ಹ್ಯಾಜಲ್‌ವುಡ್, ಶಾಬಾಜ್ ಅಹಮದ್, ಆಕಾದೀಪ್, ಮಹಿಪಾಲ್ ಲೊಮ್ರೊರ್, ಫಿನ್ ಅಲೆನ್, ಶೆರ್ಫೆನ್ ರುದರ್‌ಫೋರ್ಡ್, ಜೇಸನ್ ಬೆಹ್ರನ್‌ಡಾರ್ಫ್, ಸುಯಶ್ ಪ್ರಭುದೇಸಾಯಿ, ಚಮಾ ಮಿಲಿಂದ, ಅನೀಶ್ವರ್ ಗೌತಮ್, ಕರ್ಣ ಶರ್ಮಾ, ಡೇವಿಡ್ ವಿಲ್ಲಿ, ಲವನೀತ್ ಸಿಸೋಡಿಯಾ, ಸಿದ್ಧಾರ್ಥ್ ಕೌಲ್.

ಕೋಲ್ಕತ್ತ ನೈಟ್ ರೈಡರ್ಸ್: ಶ್ರೇಯಸ್ ಅಯ್ಯರ್ (ನಾಯಕ), ಆ್ಯರನ್ ಫಿಂಚ್, ವೆಂಕಟೇಶ್ ಅಯ್ಯರ್, ಅಭಿಜಿತ್ ತೋಮರ್, ಅಜಿಂಕ್ಯ ರಹಾನೆ, ಬಾಬಾ ಇಂದ್ರಜೀತ್, ನಿತೀಶ್ ರಾಣಾ, ಪ್ರಥಮ್ ಸಿಂಗ್, ರಿಂಕು ಸಿಂಗ್, ಅಶೋಕ್ ಶರ್ಮಾ, ಪ್ಯಾಟ್ ಕಮಿನ್ಸ್, ರಸಿಕ್ ದಾರ್, ಶಿವಂ ಮಾವಿ, ಟಿಮ್ ಸೌಥಿ, ಉಮೇಶ್ ಯಾದವ್, ವರುಣ ಚಕ್ರವರ್ತಿ, ಅಮನ್ ಖಾನ್, ಆ್ಯಂಡ್ರೆ ರಸೆಲ್, ಅನುಕೂಲ್ ರಾಯ್, ಚಮಿಕಾ ಕರುಣರತ್ನೆ, ಮೊಹಮ್ಮದ್ ನಬಿ, ರಮೇಶ್ ಕುಮಾರ್, ಸುನೀಲ್ ನಾರಾಯಣ್, ಸ್ಯಾಮ್ ಬಿಲಿಂಗ್ಸ್, ಶೆಲ್ಡನ್ ಜಾಕ್ಸನ್

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT