ಬುಧವಾರ, ಮೇ 25, 2022
31 °C

IPL 2022 LSG vs KKR: ಕೆಕೆಆರ್‌ ವಿರುದ್ಧ 75 ರನ್ ಜಯ; ಅಗ್ರಸ್ಥಾನಕ್ಕೇರಿದ ಲಖನೌ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಪುಣೆ: ಕ್ವಿಂಟನ್ ಡಿ ಕಾಕ್ ಆಕರ್ಷಕ ಅರ್ಧಶತಕ (50) ಮತ್ತು ಆವೇಶ್ ಖಾನ್ (19ಕ್ಕೆ 3) ಸೇರಿದಂತೆ ಬೌಲರ್‌ಗಳ ಮಾರಕ ದಾಳಿ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡವು ಐಪಿಎಲ್ 2022 ಟೂರ್ನಿಯಲ್ಲಿ ಶನಿವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 75 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 

ಇದರೊಂದಿಗೆ ಐಪಿಎಲ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಆಡುತ್ತಿರುವ ಲಖನೌ, ಗುಜರಾತ್ ಟೈಟನ್ಸ್ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ. ಅಲ್ಲದೆ 11 ಪಂದ್ಯಗಳಲ್ಲಿ ಎಂಟನೇ ಗೆಲುವಿನೊಂದಿಗೆ ಒಟ್ಟು 16 ಅಂಕ ಸಂಪಾದಿಸಿದೆ. 

ಅತ್ತ ಕೆಕೆಆರ್ 11 ಪಂದ್ಯಗಳಲ್ಲಿ ಏಳನೇ ಸೋಲಿಗೆ ಶರಣಾಗಿದೆ. ಈ ಮೂಲಕ ಎಂಟನೇ ಸ್ಥಾನದಲ್ಲೇ ಉಳಿದುಕೊಂಡಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಲಖನೌ ಏಳು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು. ಬಳಿಕ ಗುರಿ ಬೆನ್ನಟ್ಟಿದ ಕೋಲ್ಕತ್ತ 14.3 ಓವರ್‌ಗಳಲ್ಲಿ 101 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.  

ಸವಾಲಿನ ಮೊತ್ತ ಬೆನ್ನಟ್ಟಿದ ಕೆಕೆಆರ್ ಆರಂಭ ಉತ್ತಮವಾಗಿರಲಿಲ್ಲ. ತಂಡವು 25 ರನ್ ಗಳಿಸುವಷ್ಟರಲ್ಲಿ ಬಾಬಾ ಇಂದ್ರಜಿತ್ (0), ಆ್ಯರನ್ ಫಿಂಚ್ (14) ನಾಯಕ ಶ್ರೇಯಸ್ ಅಯ್ಯರ್ (6) ಹಾಗೂ ನಿತೀಶ್ ರಾಣಾ (2) ವಿಕೆಟ್‌ಗಳನ್ನು ಕಳೆದುಕೊಂಡಿತು. 

ಬಳಿಕ ಆ್ಯಂಡ್ರೆ ರಸೆಲ್ ಅಲ್ಪ ಹೊತ್ತು ಹೋರಾಟ ತೋರಿದರೂ ಯಾವುದೇ ಪ್ರಯೋಜನ ಉಂಟಾಗಲಿಲ್ಲ. 19 ಎಸೆತಗಳನ್ನು ಎದುರಿಸಿದ ರಸೆಲ್ ಐದು ಸಿಕ್ಸರ್ ಹಾಗೂ ಮೂರು ಬೌಂಡರಿ ನೆರವಿನಿಂದ 45 ರನ್ ಗಳಿಸಿದರು. 

ಅಂತಿಮವಾಗಿ 14.3 ಓವರ್‌ಗಳಲ್ಲಿ 101 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಇನ್ನುಳಿದಂತೆ ಸುನಿಲ್ ನಾರಾಯಣ್ 22 ರನ್ ಗಳಿಸಿದರು. 

ಲಖನೌ ಪರ ಆವೇಶ್ ಖಾನ್ ಹಾಗೂ ಜೇಸನ್ ಹೋಲ್ಡರ್ ತಲಾ ಮೂರು ವಿಕೆಟ್ ಕಿತ್ತು ಮಿಂಚಿದರು. ಮೊಹಸಿನ್ ಖಾನ್ (6ಕ್ಕೆ 1) ಹಾಗೂ ದುಶ್ಮಿಂತ ಚಮೀರ (14ಕ್ಕೆ 1) ಸಹ ಪ್ರಭಾವಿ ದಾಳಿ ಸಂಘಟಿಸಿದರು. 

ಕ್ವಿಂಟನ್ ಫಿಫ್ಟಿ, ಸವಾಲಿನ ಮೊತ್ತ ಪೇರಿಸಿದ ಲಖನೌ...

ಕ್ವಿಂಟನ್ ಡಿ ಕಾಕ್ ಬಿರುಸಿನ ಅರ್ಧಶತಕದ (50) ನೆರವಿನಿಂದ ಲಖನೌ ಏಳು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು.

ಲಖನೌ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ನಾಯಕ ಕೆ.ಎಲ್. ರಾಹುಲ್ ಖಾತೆ ತೆರೆಯುವ ಮುನ್ನವೇ ರನೌಟ್ ಆದರು. ಈ ಮೂಲಕ ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಮೂರನೇ ಬಾರಿಗೆ ಸೊನ್ನೆ ಸುತ್ತಿದರು. 

ಎರಡನೇ ವಿಕೆಟ್‌ಗೆ ಕ್ವಿಂಟನ್ ಡಿ ಕಾಕ್ ಹಾಗೂ ದೀಪಕ್ ಹೂಡಾ ಅರ್ಧಶತಕದ (71) ಜೊತೆಯಾಟ ಕಟ್ಟಿದರು. ಇವರಿಬ್ಬರು ಕೆಕೆಆರ್ ಬೌಲರ್‌ಗಳನ್ನು ದಂಡಿಸಿದರು. 

ಡಿ ಕಾಕ್ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಆದರೆ ಫಿಫ್ಟಿ ಬೆನ್ನಲ್ಲೇ ವಿಕೆಟ್ ಒಪ್ಪಿಸಿದರು. 29 ಎಸೆತಗಳನ್ನು ಎದುರಿಸಿದ ಡಿ ಕಾಕ್ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 50 ರನ್ ಗಳಿಸಿದರು. 

ಹೂಡಾ ಕೂಡ 41 ರನ್‌ಗಳ (27 ಎಸೆತ, 4 ಬೌಂಡರಿ, 2 ಸಿಕ್ಸರ್) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. 

ಇನ್ನಿಂಗ್ಸ್‌ನ ಕೊನೆಯಲ್ಲಿ ಕೃಣಾಲ್ ಪಾಂಡ್ಯ (25) ಹಾಗೂ ಮಾರ್ಕಸ್ ಸ್ಟೋಯಿನಿಸ್ (28 ರನ್, 14 ಎಸೆತ) ಉಪಯುಕ್ತ ಬ್ಯಾಟಿಂಗ್ ಪ್ರದರ್ಶಿಸಿದರು. 

ಶಿವಂ ಮಾವಿ ಅವರ ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಸ್ಟೋಯಿನಿಸ್ ನಾಲ್ಕನೇ ಎಸೆತದಲ್ಲಿ ಔಟ್ ಆದರು. ಅದೇ ಓವರ್‌ನ ಕೊನೆಯ ಎರಡು ಎಸೆತಗಳನ್ನು ಜೇಸನ್ ಹೋಲ್ಡರ್ ಸಿಕ್ಸರ್‌ಗೆ ಅಟ್ಟಿದರು. ಈ ಮೂಲಕ ಒಂದು ವಿಕೆಟ್ ಪಡೆದರೂ ಒಂದೇ ಓವರ್‌ನಲ್ಲಿ 30 ರನ್ ತೆತ್ತು ಮಾವಿ ದುಬಾರಿಯೆನಿಸಿದರು. 

ಅಂತಿಮವಾಗಿ ಲಖನೌ ಏಳು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಹೋಲ್ಡರ್ 13 ರನ್ ಗಳಿಸಿದರು. ಕೆಕೆಆರ್ ಪರ ಆ್ಯಂಡ್ರೆ ರಸೆಲ್ ಎರಡು ಹಾಗೂ ಸುನಿಲ್ ನಾರಾಯಣ್ ಒಂದು ವಿಕೆಟ್ ಕಬಳಿಸಿದರು. 
 

ಕೆಕೆಆರ್ ಫೀಲ್ಡಿಂಗ್ ಆಯ್ಕೆ...

 

ಈ ಮೊದಲು ಟಾಸ್ ಗೆದ್ದ ಕೋಲ್ಕತ್ತ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. 

ಐಪಿಎಲ್‌ನಲ್ಲಿ ಇದೇ ಮೊದಲ ಬಾರಿ ಆಡುತ್ತಿರುವ ಲಖನೌ, ಇದುವೆರೆಗೆ 10 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು ಮೂರು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ. ಈ ಮೂಲಕ ಒಟ್ಟು 14 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದೆ. 

ಅತ್ತ ಕೋಲ್ಕತ್ತ 10 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಆರು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು, ಎಂಟು ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ. 

ಈ ಹಿನ್ನೆಲೆಯಲ್ಲಿ ಕೆಕೆಆರ್ ಪಾಲಿಗೆ ಈ ಪಂದ್ಯ ಮಹತ್ವದೆನಿಸಿದೆ. ಅಲ್ಲದೆ ಮಗದೊಂದು ರೋಚಕ ಪಂದ್ಯವನ್ನು ನಿರೀಕ್ಷಿಸಲಾಗುತ್ತಿದೆ.

ಹನ್ನೊಂದರ ಬಳಗ: 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು