ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 LSG vs RR: ಲಖನೌ ಮಣಿಸಿ 2ನೇ ಸ್ಥಾನಕ್ಕೇರಿದ ರಾಜಸ್ಥಾನ್

ಅಕ್ಷರ ಗಾತ್ರ

ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 24 ರನ್ ಅಂತರದ ಗೆಲುವು ದಾಖಲಿಸಿದೆ.

ಇದರೊಂದಿಗೆ ಅಂಕಪಟ್ಟಿಯಲ್ಲಿ ಲಖನೌ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿರುವ ರಾಜಸ್ಥಾನ್, ಪ್ಲೇ-ಆಫ್‌ನತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.

ಭಾನುವಾರ ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್, ಆರು ವಿಕೆಟ್ ನಷ್ಟಕ್ಕೆ 178 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಬಳಿಕ ಟ್ರೆಂಟ್ ಬೌಲ್ಟ್ (18ಕ್ಕೆ 2) ಹಾಗೂ ರವಿಚಂದ್ರನ್ ಅಶ್ವಿನ್ (24ಕ್ಕೆ 1) ಸೇರಿದಂತೆ ರಾಜಸ್ಥಾನ್ ಬೌಲರ್‌ಗಳ ದಾಳಿಗೆ ನಲುಗಿದ ಲಖನೌ ಎಂಟು ವಿಕೆಟ್ ನಷ್ಟಕ್ಕೆ 154 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಈ ಗೆಲುವಿನೊಂದಿಗೆ ರಾಜಸ್ಥಾನ್, ಆಡಿರುವ 13 ಪಂದ್ಯಗಳಲ್ಲಿ ಎಂಟನೇ ಜಯದೊಂದಿಗೆ ಒಟ್ಟು 16 ಅಂಕ ಗಳಿಸಿದೆ. ಲಖನೌ ಸಹ 13 ಪಂದ್ಯಗಳಲ್ಲಿ 16 ಅಂಕ ಹೊಂದಿದೆ.

ಲಖನೌ ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಕ್ವಿಂಟನ್ ಡಿ ಕಾಕ್ (7) ಹಾಗೂ ಕೆ.ಎಲ್. ರಾಹುಲ್ (0) ಹೊರದಬ್ಬಿದ ಟ್ರೆಂಟ್ ಬೌಲ್ಟ್ ಡಬಲ್ ಆಘಾತ ನೀಡಿದರು.

ನಾಯಕ ಕೆ.ಎಲ್. ರಾಹುಲ್ (10) ಅವರನ್ನು ಪ್ರಸಿದ್ಧ ಕೃಷ್ಣ ಹೊರದಬ್ಬಿದರು. ಇದರಿಂದಾಗಿ 29ಕ್ಕೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲಿ ಜೊತೆ ಸೇರಿದ ದೀಪಕ್ ಹೂಡಾ ಹಾಗೂ ಕೃಣಾಲ್ ಪಾಂಡ್ಯ ಆಕ್ರಮಣಕಾರಿ ಆಟವಾಡುವ ಮೂಲಕ ತಿರುಗೇಟು ನೀಡಿದರು.

ಅಂತಿಮ 10 ಓವರ್‌ಗಳಲ್ಲಿ ಲಖನೌ ಗೆಲುವಿಗೆ 113 ರನ್ ಬೇಕಾಗಿತ್ತು. ಹೂಡಾ ಹಾಗೂ ಕೃಣಾಲ್ ನಾಲ್ಕನೇ ವಿಕೆಟ್‌ಗೆ 65 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಇದರಿಂದಾಗಿ ರಾಜಸ್ಥಾನ್ ಪಾಳಯದಲ್ಲಿ ಆತಂಕ ಸೃಷ್ಟಿಯಾಯಿತು. ಆರ್.ಅಶ್ವಿನ್ ಅವರ ಇನ್ನಿಂಗ್ಸ್‌ನ 13ನೇ ಓವರ್‌ನಲ್ಲಿ ಬೌಂಡರಿ ಗೆರೆ ಸಮೀಪದಲ್ಲಿ ಜೋಸ್ ಬಟ್ಲರ್ ಹಾಗೂ ರಿಯಾನ್ ಪರಾಗ್ ಜೊತೆಯಾಗಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಕೃಣಾಲ್ ಪಾಂಡ್ಯರನ್ನು (25) ಹೊರದಬ್ಬಿದರು.

ಅತ್ತ ದಿಟ್ಟ ಹೋರಾಟ ತೋರಿದ ಹೂಡಾ ಕೇವಲ 33 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.

ಅಂತಿಮ 30 ಎಸೆತಗಳಲ್ಲಿ 72 ರನ್ ಅಗತ್ಯವಿತ್ತು. ಆದರೆ ಉತ್ತಮವಾಗಿ ಆಡುತ್ತಿದ್ದ ಹೂಡಾ ವಿಕೆಟ್ ಪತನದೊಂದಿಗೆ ಲಖನೌ ಗೆಲುವಿನ ಆಸೆ ಕಮರಿತು. 39 ಎಸೆತಗಳನ್ನು ಎದುರಿಸಿದ ಹೂಡಾ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 59 ರನ್ ಗಳಿಸಿದರು.

ಅಂತಿಮವಾಗಿ ಲಖನೌ ಎಂಟು ವಿಕೆಟ್ ನಷ್ಟಕ್ಕೆ 154 ರನ್ ಗಳಿಸಲಷ್ಟೇ ಶಕ್ತವಾಯಿತು. ಇನ್ನುಳಿದಂತೆ ಮಾರ್ಕಸ್ ಸ್ಟೋಯಿನಿಸ್ 27, ಜೇಸನ್ ಹೋಲ್ಡರ್ 1, ದುಶ್ಮಂತ ಚಮೀರ 0 ಹಾಗೂ ಮೊಹಸಿನ್ ಖಾನ್ 9* ರನ್ ಗಳಿಸಿದರು.

ರಾಜಸ್ಥಾನ್ ಪರ ಬೌಲ್ಟ್, ಪ್ರಸಿದ್ಧ ಹಾಗೂ ಮೆಕಾಯ್ ತಲಾ ಎರಡು ಮತ್ತು ಚಹಲ್ ಹಾಗೂ ಅಶ್ವಿನ್ ತಲಾ ಒಂದು ವಿಕೆಟ್ ಗಳಿಸಿದರು.

ಜೈಸ್ವಾಲ್, ಪಡಿಕ್ಕಲ್, ಸಂಜು ಉತ್ತಮ ಆಟ...

ಈ ಮೊದಲು ಯಶಸ್ವಿ ಜೈಸ್ವಾಲ್ (41) ಹಾಗೂ ದೇವದತ್ತ ಪಡಿಕ್ಕಲ್ (39) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಆರು ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು.

ರಾಜಸ್ಥಾನ್‌ಗೆ ಆರಂಭದಲ್ಲೇ ಹಿನ್ನಡೆ ಎದುರಾಗಿತ್ತು. ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಜೋಸ್ ಬಟ್ಲರ್ ಕೇವಲ 2 ರನ್ ಗಳಿಸಿ ಔಟ್ ಆದರು.

ಈ ಹಂತದಲ್ಲಿ ಜೊತೆ ಸೇರಿದ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಸಂಜು ಸ್ಯಾಮ್ಸನ್ 64 ರನ್‌ಗಳ ಜೊತೆಯಾಟ ಕಟ್ಟಿದರು.

ಉತ್ತಮವಾಗಿ ಆಡುತ್ತಿದ್ದ ಸಂಜು 32 ರನ್ (24 ಎಸೆತ, 6 ಬೌಂಡರಿ) ಗಳಿಸಿ ಔಟ್ ಆಗಿ ಮಗದೊಮ್ಮೆ ನಿರಾಸೆ ಮೂಡಿಸಿದರು.

ಬಳಿಕ ಕ್ರೀಸಿಗಿಳಿದ ಪಡಿಕ್ಕಲ್ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಆದರೆ ಜೈಸ್ವಾಲ್ ಬೆನ್ನಲ್ಲೇ ಪಡಿಕ್ಕಲ್ ಕೂಡ ಪೆವಿಲಿಯನ್‌ಗೆ ಮರಳಿರುವುದು ಹಿನ್ನಡೆಗೆ ಕಾರಣವಾಯಿತು.

ಜೈಸ್ವಾಲ್ 41 (29 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಪಡಿಕ್ಕಲ್ 39 ರನ್ (18 ಎಸೆತ, 5 ಬೌಂಡರಿ, 2 ಸಿಕ್ಸರ್) ಗಳಿಸಿ ನಿರ್ಗಮಿಸಿದರು.

ಅಂತಿಮವಾಗಿ ರಾಜಸ್ಥಾನ್ ಆರು ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. ರಿಯಾನ್ ಪರಾಗ್ 17, ಜೇಮ್ಸ್ ನೀಶಮ್ 14, ಟ್ರೆಂಟ್ ಬೌಲ್ಟ್ 17* ಹಾಗೂ ಆರ್. ಅಶ್ವಿನ್ 10* ರನ್ ಗಳಿಸಿದರು.

ಟಾಸ್ ಗೆದ್ದ ರಾಜಸ್ಥಾನ್ ಬ್ಯಾಟಿಂಗ್...

ಈ ಮೊದಲು ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.

ಕೆ.ಎಲ್. ರಾಹುಲ್ ನಾಯಕತ್ವದ ಲಖನೌ, ಈಗಾಗಲೇ ಪ್ಲೇ-ಆಫ್ ಹಂತವನ್ನು ಪ್ರವೇಶಿಸಿದೆ. ಇದುವರೆಗೆ ಆಡಿರುವ 12 ಪಂದ್ಯಗಳಲ್ಲಿ ಎಂಟು ಗೆಲುವಿನೊಂದಿಗೆ ಒಟ್ಟು 16 ಅಂಕ ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಮೂರನೇ ಸ್ಥಾನದಲ್ಲಿರುವ ರಾಜಸ್ಥಾನ್ 12 ಪಂದ್ಯಗಳಲ್ಲಿ ಏಳು ಗೆಲುವಿನೊಂದಿಗೆ ಒಟ್ಟು 14 ಅಂಕ ಗಳಿಸಿದೆ.

ಪ್ಲೇ-ಆಫ್ ಪ್ರವೇಶವನ್ನು ಖಚಿತಪಡಿಸಲು ಸಂಜು ಸ್ಯಾಮ್ಸನ್ ಬಳಗಕ್ಕೆ ಇನ್ನೊಂದು ಗೆಲುವಿನ ಅಗತ್ಯವಿದೆ. ಹಾಗೊಂದು ವೇಳೆ ಈ ಪಂದ್ಯದಲ್ಲಿ ಸೋತರೆ ಫ್ಲೇ-ಆಫ್ ಹಾದಿ ಮತ್ತಷ್ಟು ಕಠಿಣವೆನಿಸಲಿದೆ.

ಹನ್ನೊಂದರ ಬಳಗ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT