ಭಾನುವಾರ, ಮೇ 22, 2022
22 °C
ಎರಡು ಸಿಕ್ಸರ್ ಸಿಡಿಸಿ ಪಂದ್ಯ ಗೆಲ್ಲಿಸಿದ ತೆವಾಟಿಯಾ: ಗಿಲ್ ಸುಂದರ ಬ್ಯಾಟಿಂಗ್

IPL 2022 GT vs PBKS: ಪಂಜಾಬ್ ವಿರುದ್ಧ ಗುಜರಾತ್ ಟೈಟನ್ಸ್‌ಗೆ ರೋಚಕ ಗೆಲುವು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಯುವ ಬ್ಯಾಟರ್ ಶುಭಮನ್ ಗಿಲ್ ನಾಲ್ಕು ರನ್‌ಗಳಿಂದ ಶತಕ ತಪ್ಪಿಸಿಕೊಂಡರು. ಅದರೆ ಅವರ ಸುಂದರ ಆಟವು ವ್ಯರ್ಥವಾಗದಂತೆ ರಾಹುಲ್ ತೆವಾಟಿಯಾ ನೋಡಿಕೊಂಡರು. ಅದರ ಫಲವಾಗಿ ಗುಜರಾತ್ ಟೈಟನ್ಸ್‌ ಗೆಲುವಿನ ‘ಹ್ಯಾಟ್ರಿಕ್‌’ ಸಾಧಿಸಿತು. 

ಕೊನೆಯ ಎಸೆತದವರೆಗೂ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಗುಜರಾತ್  ತಂಡವು 6 ವಿಕೆಟ್‌ಗಳಿಂದ ಪಂಜಾಬ್ ಕಿಂಗ್ಸ್ ಎದುರು ಜಯಿಸಲು ರಾಹುಲ್ ಕಾರಣರಾದರು.  190 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಗುಜರಾತ್ ತಂಡಕ್ಕೆ  ಇನಿಂಗ್ಸ್‌ನ ಕೊನೆಯ ಎರಡು ಎಸೆತಗಳಲ್ಲಿ 12 ರನ್‌ಗಳ ಅಗತ್ಯವಿತ್ತು. ಎಡಗೈ ಬ್ಯಾಟರ್ ರಾಹುಲ್ ಸತತ ಎರಡು ಸಿಕ್ಸರ್‌ ಸಿಡಿಸುವ ಮೂಲಕ ವಿಜಯೋತ್ಸವ ಆಚರಿಸಿದರು. ಬೌಲರ್ ಒಡೀನ್ ಸ್ಮಿತ್ ನಿರಾಶೆಯಿಂದ ತಲೆತಗ್ಗಿಸಿದರು.

IPL 2022 RCB vs MI: ಮುಂಬೈ ಗಾಯಕ್ಕೆ ಬರೆ ಎಳೆಯುವುದೇ ಬೆಂಗಳೂರು?

ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ಶುಕ್ರವಾರ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕಿಂಗ್ಸ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 189 ರನ್ ಗಳಿಸಿತ್ತು. ಈ ಕಠಿಣ ಗುರಿಯನ್ನು ಬೆನ್ನಟ್ಟಿದ ಗುಜರಾತ್ ತಂಡವು  20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಗೆದ್ದಿತು. ಇದರಿಂದಾಗಿ ಪಂಜಾಬ್ ತಂಡದ ಲಿಯಾಮ್ ಲಿವಿಂಗ್‌ಸ್ಟೋನ್ ಅರ್ಧಶತಕದ ಆಟ ವ್ಯರ್ಥವಾಯಿತು. 

ಶತಕ ತಪ್ಪಿಸಿಕೊಂಡ ಗಿಲ್: ಯುವಪ್ರತಿಭೆ ಶುಭಮನ್ ಚೆಂದದ ಬ್ಯಾಟಿಂಗ್ ಮಾಡಿದರು. ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಆರಂಭಿಕ ಬ್ಯಾಟರ್ ಮ್ಯಾಥ್ಯೂ ವೇಡ್ ಔಟಾದ ನಂತರ ಗಿಲ್ ಚೆಂದದ ಇನಿಂಗ್ಸ್ ಕಟ್ಟಿದರು. ‘ಪಂಜಾಬಿ ಹುಡುಗ’ ಗಿಲ್ 59 ಎಸೆತಗಳಲ್ಲಿ 96 ರನ್‌ ಗಳಿಸಿದರು. ಅದರಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಇದ್ದವು. ಐಪಿಎಲ್‌ನಲ್ಲಿ ಇದು ಅವರ ವೈಯಕ್ತಿಕ ಶ್ರೇಷ್ಠ ಮೊತ್ತವಾಗಿದೆ. 

ಸಾಯಿ ಸುದರ್ಶನ್ ಜೊತೆಗೆ ಗಿಲ್ ಎರಡನೇ ವಿಕೆಟ್‌ ಜೊತೆಯಾಟದಲ್ಲಿ 101 ರನ್‌ ಸೇರಿಸಿದರು. ಆದರೆ 15ನೇ ಓವರ್‌ನಲ್ಲಿ ಸ್ಪಿನ್ನರ್ ರಾಹುಲ್ ಚಾಹರ್ ಎಸೆತದಲ್ಲಿ ಮಯಂಕ್ ಅಗರವಾಲ್ ಪಡೆದ ಕ್ಯಾಚ್‌ಗೆ ಸುದರ್ಶನ್ ಔಟಾದರು. ಜೊತೆಯಾಟವೂ ಮುರಿದುಬಿತ್ತು.  ಗಿಲ್ ಜೊತೆಗೂಡಿದ ನಾಯಕ ಹಾರ್ದಿಕ್  ತಂಡವು ಜಯದ ಹಳಿ ತಪ್ಪದಂತೆ ನೋಡಿಕೊಂಡರು. ಇಬ್ಬರೂ ಮೂರನೇ ವಿಕೆಟ್‌ಗೆ 37 ರನ್‌ ಸೇರಿಸಿದರು. ತಮ್ಮ ಶತಕಕ್ಕೆ ನಾಲ್ಕು ರನ್‌ಗಳ ಅಗತ್ಯವಿದ್ದಾಗ ಗಿಲ್ ದುಡುಕಿದರು. ಮಯಂಕ್ ಅಗರವಾಲ್ ಪಡೆದ ಕ್ಯಾಚ್‌ಗೆ ಅವರ ಆಟ ಮುಗಿಯಿತು.

ಕೊನೆಯ ಒಂದು ಓವರ್‌ನಲ್ಲಿ ತಂಡದ ಜಯಕ್ಕೆ 19 ರನ್‌ಗಳ ಅಗತ್ಯವಿತ್ತು. ಬೌಲರ್ ಸ್ಮಿತ್ ಮೊದಲ ಎಸೆತವನ್ನು ವೈಡ್ ಹಾಕಿದರು. ನಂತರದ ಎಸೆತದಲ್ಲಿ ಹಾರ್ದಿಕ್ ರನ್‌ಔಟಾದರು. ಕ್ರೀಸ್‌ಗೆ ಬಂದ ರಾಹುಲ್, ಒಂದು ರನ್ ಹೊಡೆದರು. ಮೂರನೇ ಎಸೆತದಲ್ಲಿ ಡೇವಿಡ್ ಮಿಲ್ಲರ್ ಬೌಂಡರಿ ಬಾರಿಸಿದರು.  4ನೇ ಎಸೆತದಲ್ಲಿ ಮಿಲ್ಲರ್ ಒಂದು ರನ್ ಗಳಿಸಿದರು. ನಂತರದ ಎರಡು ಎಸೆತಗಳಿಗೆ ರಾಹುಲ್ ಬೌಂಡರಿಗೆರೆಯಾಚೆ ಕಳಿಸಿದರು.

    ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

    ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

    ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

    ಈ ವಿಭಾಗದಿಂದ ಇನ್ನಷ್ಟು