ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 RR vs DC: ಮಾರ್ಷ್ ಅಬ್ಬರ; ರಾಜಸ್ಥಾನ್ ವಿರುದ್ಧ ಡೆಲ್ಲಿಗೆ ಜಯ

ಅಕ್ಷರ ಗಾತ್ರ

ಮುಂಬೈ: ಮಿಚೆಲ್ ಮಾರ್ಷ್ (89) ಹಾಗೂ ಡೇವಿಡ್ ವಾರ್ನರ್ (52*) ಸ್ಫೋಟಕ ಅರ್ಧಶತಕಗಳ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ 2022 ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಎಂಟು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.

ಈ ಮೂಲಕ ಪ್ಲೇ-ಆಫ್ ಕನಸು ಜೀಂವತವಾಗಿರಿಸಿದೆ. 12 ಪಂದ್ಯಗಳಲ್ಲಿ ಆರನೇ ಗೆಲುವು ದಾಖಲಿಸಿರುವ ಡೆಲ್ಲಿ ಒಟ್ಟು 12 ಅಂಕಗಳೊಂದಿಗೆ ಐದನೇ ಸ್ಥಾನ ಕಾಯ್ದುಕೊಂಡಿದೆ.

ಅತ್ತ ರಾಜಸ್ಥಾನ್ 12ನೇ ಪಂದ್ಯದಲ್ಲಿ ಐದನೇ ಸೋಲಿಗೆ ಶರಣಾಗಿದೆ. ಆದರೆ ಈ ಸೋಲಿನ ಹೊರತಾಗಿಯೂ ಒಟ್ಟು 14 ಅಂಕಗಳೊಂದಿಗೆ ಮೂರನೇ ಸ್ಥಾನ ಕಾಯ್ದುಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್, ರವಿಚಂದ್ರನ್ ಅಶ್ವಿನ್ (50) ಹಾಗೂ ದೇವದತ್ತ ಪಡಿಕ್ಕಲ್ (48) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತ್ತು.

ಬಳಿಕ ಗುರಿ ಬೆನ್ನಟ್ಟಿದ ಡೆಲ್ಲಿ, ಮಾರ್ಷ್ ಹಾಗೂ ವಾರ್ನರ್ ಶತಕದ ಜೊತೆಯಾಟದ ನೆರವಿನಿಂದ 18.1 ಓವರ್‌ನಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಸವಾಲಿನ ಮೊತ್ತ ಬೆನ್ನಟ್ಟಿದ ಡೆಲ್ಲಿಗೆ ಮೊದಲ ಓವರ್‌ನಲ್ಲೇ ಆರ್‌ಆರ್ ವೇಗಿ ಟ್ರೆಂಟ್ ಬೌಲ್ಟ್ ಆಘಾತ ನೀಡಿದರು. ಶ್ರೀಕರ್ ಭರತ್ ಖಾತೆ ತೆರೆಯಲಾಗದೆ ಪೆವಿಲಿಯನ್‌ಗೆ ಮರಳಿದರು.

ಈ ಹಂತದಲ್ಲಿ ಜೊತೆ ಸೇರಿದ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು. ವಾರ್ನರ್ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರೆ ಮಾರ್ಷ್ ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದರು.

ರಾಜಸ್ಥಾನ್ ಬೌಲರ್‌ಗಳನ್ನು ಕಾಡಿದ ಮಾರ್ಷ್, 38 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅಲ್ಲದೆ ವಾರ್ನರ್ ಜೊತೆಗೆ ಶತಕದ ಜೊತೆಯಾಟ ಕಟ್ಟಿದರು.

ಗೆಲುವಿನ ಅಂಚಿನಲ್ಲಿ ವಿಕೆಟ್ ಒಪ್ಪಿಸಿದ ಮಾರ್ಷ್, ಶತಕ ವಂಚಿತರಾದರು. 62 ಎಸೆತಗಳನ್ನು ಎದುರಿಸಿದ ಮಾರ್ಷ್, ಏಳು ಸಿಕ್ಸರ್ ಹಾಗೂ ಐದು ಬೌಂಡರಿ ನೆರವಿನಿಂದ 89 ರನ್ ಗಳಿಸಿದರು.

ಅಲ್ಲದೆ ವಾರ್ನರ್ ಜೊತೆಗೆ ದ್ವಿತೀಯ ವಿಕೆಟ್‌ಗೆ 143 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿ ತಂಡದ ಗೆಲುವನ್ನು ಖಾತ್ರಿಪಡಿಸಿದರು.

ಅತ್ತ ಗೆಲುವಿನ ರನ್ ಬಾರಿಸಿದ ವಾರ್ನರ್ 41 ಎಸೆತಗಳಲ್ಲಿ 52 ರನ್ (5 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು. ನಾಲ್ಕು ಎಸೆತ ಎದುರಿಸಿದ ನಾಯಕ ರಿಷಭ್ ಪಂತ್ ಎರಡು ಸಿಕ್ಸರ್ ಬಾರಿಸಿ (ಅಜೇಯ 13) ಅಬ್ಬರಿಸಿದರು.

ಅಶ್ವಿನ್ ಚೊಚ್ಚಲ ಅರ್ಧಶತಕ ವ್ಯರ್ಥ...

ಈ ಮೊದಲು ರವಿಚಂದ್ರನ್ ಅಶ್ವಿನ್ ಚೊಚ್ಚಲ ಅರ್ಧಶತಕ (50) ಹಾಗೂ ದೇವದತ್ತ ಪಡಿಕ್ಕಲ್ (48) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವುಆರು ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಉತ್ತಮ ಲಯದಲ್ಲಿದ್ದ ಜೋಸ್ ಬಟ್ಲರ್ 7 ರನ್ ಗಳಿಸಿ ಔಟ್ ಆದರು.ಕಳೆದ ಪಂದ್ಯದ ಹೀರೊ ಯಶಸ್ವಿ ಜೈಸ್ವಾಲ್ 19 ರನ್ ಗಳಿಸಿ ಔಟ್ ಆದರು.

ಈ ನಡುವೆ ಮೂರನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ಅಶ್ವಿನ್ ಕಲಾತ್ಮಕ ಇನ್ನಿಂಗ್ಸ್ ಕಟ್ಟಿದರು. ಅವರಿಗೆ ದೇವದತ್ತ ಪಡಿಕ್ಕಲ್ ಅವರಿಂದ ಉತ್ತಮ ಬೆಂಬಲ ದೊರಕಿತು.

37 ಎಸೆತಗಳಲ್ಲಿ ಅಶ್ವಿನ್ ಐಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕ ಗಳಿಸಿದರು. ಆದರೆ ಫಿಫ್ಟಿ ಬೆನ್ನಲ್ಲೇ ವಿಕೆಟ್ ಒಪ್ಪಿಸಿದರು. 38 ಎಸೆತಗಳನ್ನು ಎದುರಿಸಿದ ಅಶ್ವಿನ್ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 50 ರನ್ ಗಳಿಸಿದರು.

ಆದರೆ ಕೊನೆಯ ಹಂತದಲ್ಲಿ ಪಡಿಕ್ಕಲ್‌ಗೆ ನಾಯಕ ಸಂಜು ಸ್ಯಾಮ್ಸನ್ (6) ಹಾಗೂ ರಿಯಾನ್ ಪರಾಗ್ (9) ಅವರಿಂದ ಉತ್ತಮ ಬೆಂಬಲ ದೊರಕಲಿಲ್ಲ.

ಅರ್ಧಶತಕದ ಅಂಚಿನಲ್ಲಿ ಪಡಿಕ್ಕಲ್ ಸಹ ಔಟ್ ಆಗುವುದರೊಂದಿಗೆ ಸವಾಲಿನ ಮೊತ್ತ ಪೇರಿಸುವ ರಾಜಸ್ಥಾನ್ ಪ್ರಯತ್ನಕ್ಕೆ ಹಿನ್ನಡೆಯಾಯಿತು. 30 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 48 ರನ್ ಗಳಿಸಿದರು.

ಅಂತಿಮವಾಗಿ ರಾಜಸ್ಥಾನ್‌ ಆರು ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಡೆಲ್ಲಿ ಪರ ಚೇತನ್ ಸಕರಿಯ, ಎನ್ರಿಚ್ ನಾಕಿಯಾ ಹಾಗೂ ಮಿಚೆಲ್ ಮಾರ್ಷ್ ತಲಾ ಎರಡು ವಿಕೆಟ್‌ಗಳನ್ನು ಗಳಿಸಿದರು.

ಟಾಸ್ ಗೆದ್ದ ಡೆಲ್ಲಿ ಫೀಲ್ಡಿಂಗ್...

ಈ ಮೊದಲು ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಪ್ಲೇ-ಆಫ್ ಪ್ರವೇಶದ ದೃಷ್ಟಿಕೋನದಲ್ಲಿ ಮುಂಬೈನ ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವು ಇತ್ತಂಡಗಳ ಪಾಲಿಗೂ ಮಹತ್ವದೆನಿಸಿದೆ.

ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ರಾಜಸ್ಥಾನ್, 11 ಪಂದ್ಯಗಳಲ್ಲಿ ಏಳು ಗೆಲುವಿನೊಂದಿಗೆ ಒಟ್ಟು 14 ಅಂಕ ಸಂಪಾದಿಸಿದೆ.

ಅತ್ತ ಐದನೇ ಸ್ಥಾನದಲ್ಲಿರುವ ಡೆಲ್ಲಿ, 11 ಪಂದ್ಯಗಳಲ್ಲಿ ಐದು ಗೆಲುವಿನೊಂದಿಗೆ 10 ಅಂಕ ಗಳಿಸಿದೆ.

ಹನ್ನೊಂದರ ಬಳಗ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT