ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 SRH vs KKR: ಕೆಕೆಆರ್‌ಗೆ ಆಘಾತ; ಸನ್‌ರೈಸರ್ಸ್‌ಗೆ ಹ್ಯಾಟ್ರಿಕ್ ಗೆಲುವು

Last Updated 15 ಏಪ್ರಿಲ್ 2022, 17:59 IST
ಅಕ್ಷರ ಗಾತ್ರ

ಮುಂಬೈ: ರಾಹುಲ್ ತ್ರಿಪಾಠಿ (71) ಹಾಗೂ ಏಡೆನ್ ಮಾರ್ಕರಮ್ (68*) ಸಮಯೋಚಿತ ಅರ್ಧಶತಕಗಳ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಶುಕ್ರವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.

ಈ ಮೂಲಕ ಟೂರ್ನಿಯ ಆರಂಭದ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ಕೇನ್ ‌ವಿಲಿಯಮ್ಸನ್ ಪಡೆಯು ಸತತ ಮೂರನೇ ಗೆಲುವು ದಾಖಲಿಸುವ ಮೂಲಕ ಲಯಕ್ಕೆ ಮರಳಿದೆ.

ಇನ್ನೊಂದೆಡೆ ಕೋಲ್ಕತ್ತ ಸೋಲಿನ ಆಘಾತಕ್ಕೊಳಗಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್, ನಿತೀಶ್ ರಾಣಾ (54) ಹಾಗೂ ಆ್ಯಂಡ್ರೆ ರಸೆಲ್ (49*) ಬಿರುಸಿನ ಆಟದ ನೆರವಿನಿಂದ ಎಂಟು ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತ್ತು.

ಬಳಿಕ ಗುರಿ ಬೆನ್ನತ್ತಿದ ಹೈದರಾಬಾದ್ 17.5 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಚೇಸಿಂಗ್ ವೇಳೆ ಕೆಕೆಆರ್‌ತರಹನೇ ಹೈದರಾಬಾದ್ ತಂಡಕ್ಕೂ ಆರಂಭದಲ್ಲೇ ಓಪನರ್‌ಗಳ ವಿಕೆಟ್ ನಷ್ಟವಾಯಿತು. ತಂಡವು 39 ರನ್ ಗಳಿಸುವಷ್ಟರಲ್ಲಿ ಅಭಿಷೇಕ್ ಶರ್ಮಾ (3) ಹಾಗೂ ನಾಯಕ ಕೇನ್ ವಿಲಿಯಮ್ಸನ್ (17) ಪೆವಿಲಿಯನ್‌ಗೆ ಮರಳಿದರು.

ಈ ಸಂದರ್ಭದಲ್ಲಿ ಜೊತೆಗೂಡಿದ ರಾಹುಲ್ ತ್ರಿಪಾಠಿ ಹಾಗೂ ಏಡೆನ್ ಮಾರ್ಕರಮ್ ತಂಡವನ್ನು ಮುನ್ನಡೆಸಿದರು. ಏಡೆನ್ ರಕ್ಷಣಾತ್ಮಕ ಆಟದತಂತ್ರವನ್ನು ಅನುಸರಿಸಿದರೆ ತ್ರಿಪಾಠಿ ಕೌಂಟರ್ ಅಟ್ಯಾಕ್ ಮಾಡಿದರು.

ಕೇವಲ 21 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ತ್ರಿಪಾಠಿ ಅಬ್ಬರಿಸಿದರು. ಅಲ್ಲದೆ ಮೂರನೇ ವಿಕೆಟ್‌ಗೆ ಏಡೆನ್ ಜೊತೆಗೆ 54 ಎಸೆತಗಳಲ್ಲಿ 94 ರನ್‌ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು.

71 ಎಸೆತಗಳನ್ನು ಎದುರಿಸಿದ ತ್ರಿಪಾಠಿ ನಾಲ್ಕು ಬೌಂಡರಿ ಹಾಗೂ ಆರು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 71 ರನ್ ಗಳಿಸಿದರು.

ತ್ರಿಪಾಠಿ ಔಟ್ ಆದ ಬೆನ್ನಲ್ಲೇ ಬಿರುಸಿನ ಆಟವನ್ನು ಪ್ರದರ್ಶಿಸಿದ ಮಾರ್ಕರಮ್ 31 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಅಲ್ಲದೆ ತಂಡವನ್ನು ಗೆಲುವಿನ ದಡ ಸೇರಿಸಿದ್ದರಲ್ಲದೆ 68 ರನ್ ಗಳಿಸಿ ಔಟಾಗದೆ ಉಳಿದರು. 36 ಎಸೆತಗಳನ್ನು ಎದುರಿಸಿದ ಅವರ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳು ಸೇರಿದ್ದವು.

ಕೆಕೆಆರ್ ಪರ ರಸೆಲ್ ಎರಡು ವಿಕೆಟ್ ಗಳಿಸಿದರು.

ರಾಣಾ, ರಸೆಲ್ ಹೋರಾಟ ವ್ಯರ್ಥ...
ಕೆಕೆಆರ್ ಆರಂಭ ಉತ್ತಮವಾಗಿರಲಿಲ್ಲ. ತಂಡವು 25 ರನ್ ಗಳಿಸುವಷ್ಟರಲ್ಲಿ ಆರಂಭಿಕರಾದ ಆ್ಯರನ್ ಫಿಂಚ್ (7) ಹಾಗೂ ವೆಂಕಟೇಶ್ ಅಯ್ಯರ್ (6) ವಿಕೆಟ್ ನಷ್ಟವಾದವು.

ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ಸುನಿಲ್ ನಾರಾಯಣ್ ಒಂದು ಸಿಕ್ಸರ್ ಬಾರಿಸಿ ಪೆವಿಲಿಯನ್‌ಗೆ ಮರಳಿದರು. ನಾಯಕ ಶ್ರೇಯಸ್ ಅಯ್ಯರ್ (28) ಹೆಚ್ಚು ಹೊತ್ತು ನಿಲ್ಲಲಿಲ್ಲ.

ವಿಕೆಟ್ ಕೀಪರ್ ಶೆಲ್ಡನ್ ಜ್ಯಾಕ್ಸನ್ (7) ಪತನದೊಂದಿಗೆ 103 ರನ್ನಿಗೆ ಐದು ವಿಕೆಟ್ ಕಳೆದುಕೊಂಡಿತು.

ಒಂದೆಡೆ ವಿಕೆಟ್‌ಗಳು ಪತನಗೊಳ್ಳುತ್ತಿದ್ದರೂ ವಿಕೆಟ್‌ನ ಇನ್ನೊಂದು ತುದಿಯಿಂದ ದಿಟ್ಟ ಹೋರಾಟ ಪ್ರದರ್ಶಿಸಿದ ನಿತೀಶ್ ರಾಣಾ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಮಿಂಚಿದರು.

36 ಎಸೆತಗಳನ್ನು ಎದುರಿಸಿದ ರಾಣಾ 54 ರನ್ ಗಳಿಸಿ (6 ಬೌಂಡರಿ, 2 ಸಿಕ್ಸರ್) ಔಟ್ ಆದರು.

ಕೊನೆಯ ಹಂತದಲ್ಲಿ ಬಿರುಸಿನ ಆಟವಾಡಿದ ಆ್ಯಂಡ್ರೆ ರಸೆಲ್, ಕೆಕೆಆರ್ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಕೇವಲ 25 ಎಸೆತಗಳನ್ನು ಎದುರಿಸಿದ ರಸೆಲ್ ತಲಾ ನಾಲ್ಕು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 49 ರನ್ ಗಳಿಸಿ ಔಟಾಗದೆ ಉಳಿದರು.

ಹೈದರಾಬಾದ್ ಪರ ಟಿ. ನಟರಾಜನ್ ಮೂರು ಹಾಗೂ ಉಮ್ರಾನ್ ಮಲಿಕ್ ಎರಡು ವಿಕೆಟ್ ಕಬಳಿಸಿದರು.

ಹೈದರಾಬಾದ್ ಫೀಲ್ಡಿಂಗ್....

ಈ ಮೊದಲುಟಾಸ್ ಗೆದ್ದಸನ್‌ರೈಸರ್ಸ್ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಟೂರ್ನಿಯ ಆರಂಭದಲ್ಲಿ ಸತತ ಎರಡು ಸೋಲುಗಳ ನಂತರ ಪುಟಿದೆದ್ದಿರುವ ಸನ್‌ರೈಸರ್ಸ್ ಹೈದರಾಬಾದ್ ಬಳಿಕದ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು.

ಇನ್ನೊಂದೆಡೆ ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತ ತಂಡವು ಐದು ಪಂದ್ಯಗಳಲ್ಲಿ ಮೂರು ಗೆದ್ದು, ಎರಡರಲ್ಲಿ ಸೋತಿದೆ.

ಎರಡೂ ತಂಡಗಳಲ್ಲಿ ಸ್ಫೋಟಕ ಬ್ಯಾಟರ್‌ಗಳ ದಂಡು ಇದೆ. ಇದರಿಂದಾಗಿ ಬ್ರೆಬೊರ್ನ್‌ ಕ್ರೀಡಾಂಗಣದಲ್ಲಿ ರನ್‌ಗಳ ಹೊಳೆ ಹರಿಯುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT