ಗುರುವಾರ , ಮೇ 19, 2022
23 °C
ಇಬ್ಬರು ಮುಂಬೈಕರ್‌ಗಳ ಮುಖಾಮುಖಿ; ಉಮೇಶ್ ಯಾದವ್ –ಜಸ್‌ಪ್ರೀತ್ ಬೂಮ್ರಾ ಜಿದ್ದಾಜಿದ್ದಿ

IPL 2022 MI vs KKR: ಜಯಕ್ಕಾಗಿ ಹಾತೊರೆದಿರುವ ಮುಂಬೈಗೆ ಕೋಲ್ಕತ್ತ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪುಣೆ: ಆಡಿರುವ ಎರಡೂ ಪಂದ್ಯಗಳಲ್ಲಿ ಸೋತಿರುವ ಮುಂಬೈ ಇಂಡಿಯನ್ಸ್ ತಂಡವು ಬುಧವಾರ ಕೋಲ್ಕತ್ತ ನೈಟ್ ರೈಡರ್ಸ್ ಎದುರು ಕಣಕ್ಕಿಳಿಯಲಿದೆ.  

ತನ್ನ ತವರು ಮುಂಬೈನ ಅಂಗಳಗಳಲ್ಲಿಯೇ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಎದುರು ರೋಹಿತ್ ಶರ್ಮಾ ಬಳಗವು ಪರಾಭವಗೊಂಡಿತ್ತು. ಇದೀಗ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ತನ್ನ ಅದೃಷ್ಟವನ್ನು ಪರೀಕ್ಷೆಗೊಡ್ಡಲಿದೆ. ಇಬ್ಬರು ಮುಂಬೈಕರ್‌ ಇಲ್ಲಿ ಮುಖಾಮುಖಿಯಾಗುತ್ತಿರುವುದು ವಿಶೇಷ. ಮುಮಬೈ ತಂಡದ ನಾಯಕ ರೋಹಿತ್ ಮತ್ತು ಕೋಲ್ಕತ್ತ ಬಳಗದ ನಾಯಕ ಶ್ರೇಯಸ್ ಅಯ್ಯರ್ ಇಬ್ಬರೂ ಮುಂಬೈನವರಾಗಿದ್ದಾರೆ.

ಬ್ಯಾಟಿಂಗ್ ಮತ್ತು ಬೌಲಿಂಗ್‌ ವಿಭಾಗಗಳಲ್ಲಿ ಅನುಭವಿಗಳು ಮತ್ತು ಪ್ರತಿಭಾವಂತ ಯುವ ಆಟಗಾರರಿದ್ದರೂ ಮುಂಬೈ ತಂಡವು ಗೆಲುವಿನ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಇಶಾನ್ ಕಿಶನ್ ಒಬ್ಬರೇ ಎರಡೂ ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ್ದಾರೆ. ಆದರೆ ರೋಹಿತ್ ಸೇರಿದಂತೆ ಉಳಿದ ಬ್ಯಾಟರ್‌ಗಳು ನಿರೀಕ್ಷೆಗೆ ತಕ್ಕಂತೆ ಆಡಿಲ್ಲ. ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯಲು ಫಿಟ್ ಆದರೆ ತಂಡದ ಬಲ ಹೆಚ್ಚಬಹುದು.

ಬೌಲಿಂಗ್‌ನಲ್ಲಿಯೂ ಎರಡನೇ ಪಂದ್ಯದಲ್ಲಿ ಜಸ್‌ಪ್ರೀತ್ ಬೂಮ್ರಾ ಮತ್ತು ಟೈಮಲ್ ಮಿಲ್ಸ್‌ ಮಿಂಚಿದ್ದರು. ಬಾಸಿಲ್  ಥಂಪಿ ಮತ್ತು ಮುರುಗನ್ ಅಶ್ವಿನ್ ತುಟ್ಟಿಯಾಗಿದ್ದರು. ಅದರಿಂದಾಗಿ ಬೌಲಿಂಗ್ ವಿಭಾಗದಲ್ಲಿ ಕೆಲವು ಬದಲಾವಣೆಗಳೊಂದಿಗೆ ಮುಂಬೈ ಕಣಕ್ಕಿಳಿಯುವ ಸಾಧ್ಯತೆ ಇದೆ.

ಆದರೆ ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವಿನ ರುಚಿ ಕಂಡಿರುವ ಕೋಲ್ಕತ್ತ ತಂಡವನ್ನು ಎದುರಿಸಲು ರೋಹಿತ್ ಬಳಗವು ಸಂಘಟಿತ ಹೋರಾಟ ಮಾಡುವ ಅನಿವಾರ್ಯತೆ ಇದೆ. ತಂಡದ ಮಧ್ಯಮವೇಗಿ ಉಮೇಶ್ ಯಾದವ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಒಟ್ಟು ಎಂಟು ವಿಕೆಟ್‌ಗಳನ್ನು ಗಳಿಸಿರುವ ಅವರು ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ತಮ್ಮ ಲಯಕ್ಕೆ ಮರಳಿರುವುದು ಕೋಲ್ಕತ್ತ ತಂಡಕ್ಕೆ ನೂರಾನೆ ಬಲ ತುಂಬಿದಂತಾಗಿದೆ. ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ರಸೆಲ್ ಸಿಕ್ಸರ್‌ಗಳ ಮಳೆಗರೆದಿದ್ದರು.

ಆದರೆ, ಅಗ್ರಕ್ರಮಾಂಕದ ಜೋಡಿ ಅಜಿಂಕ್ಯ ರಹಾನೆ ಮತ್ತು ವೆಂಕಟೇಶ್ ಅಯ್ಯರ್ ಇನ್ನೂ ಲಯ ಕಂಡುಕೊಳ್ಳಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು