ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 MI vs RCB | ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಜಯದ ‘ಹ್ಯಾಟ್ರಿಕ್’

Last Updated 9 ಏಪ್ರಿಲ್ 2022, 20:49 IST
ಅಕ್ಷರ ಗಾತ್ರ

ಪುಣೆ:ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಅನುಜ್ ರಾವತ್ ಮತ್ತು ವಿರಾಟ್ ಕೊಹ್ಲಿಯ ಸುಂದರ ಬ್ಯಾಟಿಂಗ್ ಕಳೆಗಟ್ಟಿತು.

ಇದರಿಂದಾಗಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಗೆಲುವಿನ ಹ್ಯಾಟ್ರಿಕ್ ಸಾಧಿಸಿತು. ಮುಂಬೈ ಇಂಡಿಯನ್ಸ್ ತಂಡವು ಸತತ ನಾಲ್ಕನೇ ಸೋಲಿನ ಕಹಿಯುಂಡಿತು.

ಆರ್‌ಸಿಬಿ ಏಳು ವಿಕೆಟ್‌ನಿಂದ ಗೆದ್ದಿತು.

ಟಾಸ್ ಗೆದ್ದ ಆರ್‌ಸಿಬಿ ತಂಡದ ನಾಯಕ ಫಫ್ ಡುಪ್ಲೆಸಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.ಬೆಂಗಳೂರು ತಂಡದ ಸ್ಪಿನ್ನರ್ ವಣಿಂದು ಹಸರಂಗಾ ಮತ್ತು ಮಧ್ಯಮವೇಗಿ ಹರ್ಷಲ್ ಪಟೇಲ್ ಅವರ ದಾಳಿಗೆ ಅಲ್ಪಮೊತ್ತಕ್ಕೆ ಕುಸಿಯಬೇಕಿದ್ದ ಮುಂಬೈ ಇಂಡಿಯನ್ಸ್ ತಂಡವು ಗೌರವಾರ್ಹ ಮೊತ್ತ ಪೇರಿಸಲು ಸೂರ್ಯ (ಔಟಾಗದೆ 68; 37ಎ) ಕಾರಣರಾದರು. ಅದರಿಂದಾಗಿ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 151 ರನ್ ಗಳಿಸಿತು. ಇದಕ್ಕುತ್ತರವಾಗಿ ಬೆಂಗಳೂರು ತಂಡವು 18.3 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 152 ರನ್ ಗಳಿಸಿತು. ಆರ್‌ಸಿಬಿಯು ಆಡಿದ ನಾಲ್ಕನೇ ಪಂದ್ಯ ಇದಾಗಿತ್ತು.

ಗುರಿ ಬೆನ್ನಟ್ಟಿದ ಬೆಂಗಳೂರು ತಂಡಕ್ಕೆ ಫಫ್ ಡುಪ್ಲೆಸಿ ಮತ್ತು ಅನುಜ್ ರಾವತ್ ಜೋಡಿಯು ಉತ್ತಮ ಆರಂಭ ನೀಡಿತು. ಎಂಟು ಓವರ್‌ಗಳಲ್ಲಿ 50 ರನ್‌ಗಳನ್ನು ಸೇರಿಸಿದರು. ಜಯದೇವ್ ಉನದ್ಕತ್ ಬೌಲಿಂಗ್‌ನಲ್ಲಿ ಫಫ್ ಔಟಾದ ನಂತರ ಅನುಜ್ ಮತ್ತು ವಿರಾಟ್ ಜೊತೆಗೂಡಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 80 ರನ್‌ ಸೇರಿಸಿದರು. 17ನೇ ಓವರ್‌ನಲ್ಲಿ ಫೀಲ್ಡರ್ ರಮಣದೀಪ್ ಸಿಂಗ್ ನಿಖರ ಥ್ರೋಗೆ ರನ್‌ಔಟ್ ಆಗುವ ಮುನ್ನ ಅನುಜ್ ಆರು ಸಿಕ್ಸರ್, ಎರಡು ಬೌಂಡರಿಗಳಿದ್ದ 66 ರನ್‌ಗಳನ್ನು ಗಳಿಸಿದರು.

ಬಹುದಿನಗಳ ನಂತರ ತಮ್ಮನೈಜ ಶೈಲಿಯ ಬ್ಯಾಟಿಂಗ್ ಸೌಂದರ್ಯ ಉಣಬಡಿಸಿದ ವಿರಾಟ್, ಅರ್ಧಶತಕದ ಅಂಚಿನಲ್ಲಿ ಎಡವಿದರು. 19ನೇ ಓವರ್‌ನಲ್ಲಿ ಬ್ರೆವಿಸ್ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಆದರೆ 36 ಎಸೆತಗಳಲ್ಲಿ ಅವರು ಗಳಿಸಿದ 48 ರನ್‌ಗಳು ತಂಡವನ್ನು ಗೆಲುವಿನ ಗಡಿಗೆ ತಂದು ನಿಲ್ಲಿಸಿದ್ದವು. ಅದರಲ್ಲಿ ಐದು ಬೌಂಡರಿಗಳಿದ್ದವು.

ಕ್ರೀಸ್‌ನಲ್ಲಿದ್ದ ದಿನೇಶ್ ಕಾರ್ತಿಕ್ ಮತ್ತು ಈ ಟೂರ್ನಿಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್‌ವೆಲ್ ತಂಡವನ್ನು ಗೆಲುವಿನ ಗಡಿ ಮುಟ್ಟಿಸಿದರು. ಗ್ಲೆನ್ ತಾವೆದುರಿಸಿದ ಎರಡೂ ಎಸೆತಗಳಲ್ಲಿ ಸತತ ಬೌಂಡರಿ ಸಿಡಿಸಿದರು.

ಹೊಳೆದ ಸೂರ್ಯ: ಮುಂಬೈ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತ್ತು. ಆದರೆ, ಸೂರ್ಯಕುಮಾರ್ ಯಾದವ್ ತಂಡದ ಗೌರವ ಉಳಿಸಿದರು. ಏಕಾಂಗಿ ಹೋರಾಟ ನಡೆಸಿದ ಅವರು. 32 ಎಸೆತಗಳಲ್ಲಿ ಅರ್ಧಶತಕದ ಗಡಿ ಮುಟ್ಟಿದರು. ಒಟ್ಟು ಐದು ಬೌಂಡರಿಗಳು ಮತ್ತು ಅರ್ಧ ಡಜನ್ ಸಿಕ್ಸರ್‌ಗಳನ್ನು ಅವರು ಸಿಡಿಸಿದರು. 183.78ರ ಸ್ಟ್ರೈಕ್‌ರೇಟ್‌ನಲ್ಲಿ ಔಟಾಗದೆ 68 ರನ್‌ಗಳನ್ನು ಸೂರೆ ಮಾಡಿದರು. ಜಯದೇವ್ ಉನದ್ಕತ್ (ಔಟಾಗದೆ 13) ಎಚ್ಚರಿಕೆಯಿಂದ ಆಡಿ ಸೂರ್ಯಕುಮಾರ್‌ಗೆ ಉತ್ತಮ ಜೊತೆ ಕೊಟ್ಟರು.ಆದರೆ ಉಳಿದ ಬ್ಯಾಟರ್‌ಗಳು ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾದರು. ಅದರಲ್ಲೂ ತಿಲಕ್ ವರ್ಮಾ ಮತ್ತು ಪೊಲಾರ್ಡ್‌ ಖಾತೆಯನ್ನೇ ತೆರೆಯಲಿಲ್ಲ. ರಮಣದೀಪ್ ಮತ್ತು ಬ್ರೆವಿಸ್ ಕೂಡ ಎರಡಂಕಿ ಮುಟ್ಟಲಿಲ್ಲ.

ಅದರಿಂದಾಗಿ ಆರಂಭಿಕ ಜೋಡಿ ರೋಹಿತ್ ಮತ್ತು ಇಶಾನ್ ಕಿಶನ್ ಮೊದಲ ವಿಕೆಟ್‌ಗೆ 50 ರನ್‌ ಸೇರಿಸಿ ಉತ್ತಮ ಅಡಿಪಾಯ ಹಾಕಿದರೂ ತಂಡಕ್ಕೆ ದೊಡ್ಡ ಮೊತ್ತ ಗಳಿಸಲು ಆಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT