ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL–2023 | ರೋಚಕ ಫೈನಲ್‌ನಲ್ಲಿ ಧೋನಿ ಬಳಗದ ಜಯಭೇರಿ; ಹಾರ್ದಿಕ್ ಪಾಂಡ್ಯ ಪಡೆಗೆ ನಿರಾಶೆ

Published 29 ಮೇ 2023, 21:20 IST
Last Updated 29 ಮೇ 2023, 21:20 IST
ಅಕ್ಷರ ಗಾತ್ರ

ಅಹಮದಾಬಾದ್: ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಸತತ ಎರಡನೇ ಪ್ರಶಸ್ತಿ ಗೆಲ್ಲುವ ಗುಜರಾತ್ ಟೈಟನ್ಸ್‌ ತಂಡದ ಕನಸು ಕಮರಿತು.

ಸೋಮವಾರ ತಡರಾತ್ರಿ ಮುಕ್ತಾಯವಾದ ಫೈನಲ್‌ನಲ್ಲಿ ಚೆನ್ನೈ ತಂಡವು 5 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. ಮಳೆ ಸುರಿದಿದ್ದರಿಂದ ಪರಿಷ್ಕತ ಗೊಂಡಿದ್ದ (ಡಕ್ವರ್ಥ್ ಲೂಯಿಸ್ ನಿಯಮ)  15 ಓವರ್‌ಗಳಲ್ಲಿ 171 ರನ್‌ಗಳ ಗುರಿ ಬೆನ್ನಟ್ಟಿದ್ದ ಚೆನ್ನೈ ತಂಡಕ್ಕೆ ಕೊನೆಯ ಎರಡು ಎಸೆತಗಳಲ್ಲಿ 10 ರನ್‌ಗಳ ಅಗತ್ಯ ಇತ್ತು.

ರವೀಂದ್ರ ಜಡೇಜ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಗಳಿಸಿದರು. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ  ಉಸಿರು ಬಿಗಿಹಿಡಿದು ಕುಳಿತಿದ್ದ ಚೆನ್ನೈ ಅಭಿಮಾನಿಗಳು ಸಂಭ್ರಮದಿಂದ ಪುಟಿದೆದ್ದರು. ಚೆನ್ನೈ ತಂಡವು ಐದನೇ ಬಾರಿ ಪ್ರಶಸ್ತಿ ಗೆದ್ದಿತು. ಗುಜರಾತ್ ತಂಡದ ಮೋಹಿತ್ ಶರ್ಮಾ (36ಕ್ಕೆ3) ಹಾಗೂ ಸಾಯಿ ಸುದರ್ಶನ್ (96 ರನ್) ಅವರ ಪ್ರಯತ್ನಗಳಿಗೆ ಗೆಲುವಿನ ಫಲ ಸಿಗಲಿಲ್ಲ.

ನಾಲ್ಕು ರನ್‌ಗಳ ಅಂತರದಿಂದ ಶತಕ ಕೈತಪ್ಪಿಸಿಕೊಂಡ ಸುದರ್ಶನ್ (96; 47ಎ) ಗುಜರಾತ್ ಟೈಟನ್ಸ್‌  ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 214 ರನ್‌ಗಳ  ಬೃಹತ್ ಮೊತ್ತ ಪೇರಿಸಲು ಕಾರಣರಾದರು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇನಿಂಗ್ಸ್‌ನಲ್ಲಿ ಮೊದಲ ಓವರ್‌ ಮೂರು ಎಸೆತಗಳು ಆದಾಗ ಮಳೆ ಸುರಿಯಲು ಆರಂಭಿಸಿತು.  ಇದರಿಂದಾಗಿ ಗುರಿಯನ್ನು ಪರಿಷ್ಕರಿಸಲಾಯಿತು. ತಡರಾತ್ರಿ 12.10ಕ್ಕೆ ಆಟ ಆರಂಭಿಸಲಾಯಿತು. ಆರಂಭಿಕ ಜೋಡಿ ಡೆವೊನ್ ಕಾನ್ವೆ ಹಾಗೂ ಋತುರಾಜ್ ಗಾಯಕವಾಡ್ 6.3 ಓವರ್‌ಗಳಲ್ಲಿ 74 ರನ್‌ ಸೇರಿಸಿದರು. ಶಿವಂ ದುಬೆ (32 ರನ್), ಅಜಿಂಕ್ಯ ರಹಾನೆ (27 ರನ್) ಹಾಗೂ ಅಂಬಟಿ ರಾಯುಡು (19 ರನ್) ಮಹತ್ವದ ಕಾಣಿಕೆ ನೀಡಿದರು.

ಸಹಾ, ಸುದರ್ಶನ್ ಮಿಂಚು: ಭಾನುವಾರ ಸುರಿದ ಮಳೆಯಿಂದಾಗಿ ಫೈನಲ್ ಪಂದ್ಯವನ್ನು ಸೋಮವಾರಕ್ಕೆ ಮುಂದೂಸುಡಲಾಗಿತ್ತು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಚೆನ್ನೈ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. 

ಆದರೆ, ಮೊದಲ ಪವರ್‌ ಪ್ಲೇನಲ್ಲಿ ದೀಪಕ್ ಚಾಹರ್ ಅವರ ಫೀಲ್ಡಿಂಗ್ ಲೋಪ ಮತ್ತು ಕಳಪೆ ಬೌಲಿಂಗ್‌ನಿಂದಾಗಿ ಗುಜರಾತ್ ತಂಡದ ಖಾತೆಗೆ ರನ್‌ಗಳು ಹರಿದವು. ಎರಡನೇ ಓವರ್‌ನಲ್ಲಿ ತುಷಾರ್ ದೇಶಪಾಂಡೆ ಎಸೆತದಲ್ಲಿ ಶುಭಮನ್ ಫ್ಲಿಕ್ ಮಾಡಿದ ಚೆಂಡನ್ನು ಕ್ಯಾಚ್‌ ಮಾಡುವಲ್ಲಿ ದೀಪಕ್ ವಿಫಲರಾದರು. ತಾವೇ ಹಾಕಿದ ಐದನೇ ಓವರ್‌ನಲ್ಲಿ ವೃದ್ಧಿಮಾನ್ ಸಹಾ ಅವರ ಕ್ಯಾಚ್‌ ಅನ್ನು ಪಡೆಯುವ ದೀಪಕ್ ಪ್ರಯತ್ನ ಕೈಗೂಡಲಿಲ್ಲ. ಇದರಿಂದಾಗಿ ಏಳೂ ಓವರ್‌ಗಳಲ್ಲಿ 67 ರನ್‌ಗಳು ಸೇರಿದವು.

ಇದರಿಂದಾಗಿ ಜಡೇಜ ಅವರನ್ನು ಕಣಕ್ಕಿಳಿಸಿದ ಧೋನಿ ಯೋಜನೆ ಕೈಗೂಡಿತು. ಸ್ಪಿನ್ ಎಸೆತವನ್ನು ಮುಂದೆ ಹೆಜ್ಜೆ ಇಟ್ಟು ಆಡಲು ಯತ್ನಿಸಿದ ಶುಭಮನ್ ಗಿಲ್ ಅವರನ್ನು ಮಿಂಚಿನ ವೇಗದಲ್ಲಿ ಸ್ಟಂಪ್ ಮಾಡಿದ ಧೋನಿ ಮೇಲುಗೈ ಸಾಧಿಸಿದರು. ಟೂರ್ನಿಯಲ್ಲಿ ಮೂರು ಶತಕ ಮತ್ತು ಅತಿ ಹೆಚ್ಚು ರನ್ ಗಳಿಸಿರುವ ಸಾಧನೆ ಮಾಡಿರುವ ಗಿಲ್ ಔಟಾಗಿದ್ದು ಚೆನ್ನೈ ತಂಡದಲ್ಲಿ ಸಮಾಧಾನ ಮೂಡಿಸಿತು. ಆದರೆ ಕ್ರೀಸ್‌ಗೆ ಬಂದ 21 ವರ್ಷದ ಸುದರ್ಶನ್  ಬೌಲರ್‌ಗಳನ್ನು ದಂಡಿಸಿದರು. 

14ನೇ ಓವರ್‌ನಲ್ಲಿ ಚಾಹರ್ ಎಸೆತವನ್ನು ಹೊಡೆಯುವ ಪ್ರಯತ್ನದಲ್ಲಿ ಧೋನಿ ಪಡೆದ ಕ್ಯಾಚ್‌ಗೆ ಸಹಾ (54; 39ಎ, 4X5, 6X1) ನಿರ್ಗಮಿಸಿದರು. ಜೊತೆಯಾಟ ಮುರಿದುಬಿತ್ತು. ಆದರೆ ಸಾಯಿ ಆಟದ ವೇಗ ಹೆಚ್ಚಾಯಿತು!

ಕೊನೆಯ ಆರು ಓವರ್‌ಗಳಲ್ಲಿ ಸುದರ್ಶನ ಅಬ್ಬರದ ಆಟದಿಂದಾಗಿ  81 ರನ್‌ಗಳು ತಂಡದ ಮೊತ್ತಕ್ಕೆ ಸೇರಿದವು. ಪಥಿರಾಣ, ತೀಕ್ಷಣ, ತುಷಾರ್ ದೇಶಪಾಂಡೆ ಅವರ ಎಸೆತಗಳನ್ನು ಸಿಕ್ಸರ್‌ಗೆ ಎತ್ತಿದ ಸುದರ್ಶನ್ ಮಿಂಚಿದರು.

204.26ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದ ಸುದರ್ಶನ್ ಆರು ಸಿಕ್ಸರ್ ಹಾಗೂ ಎಂಟು ಬೌಂಡರಿ ಬಾರಿಸಿದರು. ವೈಡ್‌ ಎಸೆತಗಳು, ಯಾರ್ಕರ್, ಸ್ವಿಂಗ್ ಎಸೆತಗಳಿಗೂ ಜಗ್ಗಲಿಲ್ಲ.  ಆದರೆ ಶತಕದಂಚಿನಲ್ಲಿ ಸುದರ್ಶನ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ಪಥಿರಾಣ ಸಂಭ್ರಮಿಸಿದರು.

ಧೋನಿ ದಾಖಲೆ
ಐಪಿಎಲ್‌ನಲ್ಲಿ ಅತಿ ಹೆಚ್ಚು ಫೈನಲ್‌ ಪಂದ್ಯಗಳನ್ನು ಆಡಿರುವ ಆಟಗಾರನೆಂಬ ಹೆಗ್ಗಳಿಕೆಗೆ ಮಹೇಂದ್ರಸಿಂಗ್ ಧೋನಿ ಪಾತ್ರರಾದರು. ಅವರು ಒಟ್ಟು 11 ಫೈನಲ್ ಆಡಿದ್ದಾರೆ.  ಅವರ ನಂತರದ ಸ್ಥಾನಗಳಲ್ಲಿ ಸುರೇಶ್ ರೈನಾ, ಅಂಬಟಿ ರಾಯುಡು ಹಾಗೂ ರವೀಂದ್ರ ಜಡೇಜ ಇದ್ದಾರೆ. ಮೂವರೂ ತಲಾ ಎಂಟು ಬಾರಿ ಫೈನಲ್‌ನಲ್ಲಿ ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT