ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲಿಮಿನೇಟರ್‌ ಪಂದ್ಯದಲ್ಲಿ ಗೆದ್ದ ಮುಂಬೈ ಇಂಡಿಯನ್ಸ್: ಹೊರಬಿದ್ದ ಲಖನೌ ಸೂಪರ್ ಜೈಂಟ್ಸ್

Published 24 ಮೇ 2023, 20:07 IST
Last Updated 24 ಮೇ 2023, 20:07 IST
ಅಕ್ಷರ ಗಾತ್ರ

ಚೆನ್ನೈ: ಮುಂಬೈ ಇಂಡಿಯನ್ಸ್ ತಂಡದ ಬಲಗೈ ಮಧ್ಯಮವೇಗಿ ಆಕಾಶ್ ಮಧ್ವಾಲ್‌ ಅವರ ಬೌಲಿಂಗ್ ದಾಳಿಯ ಮುಂದೆ ಲಖನೌ ಸೂಪರ್ ಜೈಂಟ್ಸ್ ತಂಡ ದೂಳಿಪಟವಾಯಿತು.

3.3 ಓವರ್ ಬೌಲ್ ಮಾಡಿ ಐದು ವಿಕೆಟ್‌ ಕಬಳಿಸಿದ ಆಕಾಶ್‌, ಮುಂಬೈ ತಂಡವು ಐಪಿಎಲ್ ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ಜಯ ಗಳಿಸುವಲ್ಲಿ ಪಾತ್ರ ವಹಿಸಿದರು. ಕೇವಲ ಐದು ರನ್ ನೀಡಿದ ಅವರು ಎದುರಾಳಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ಕ್ಯಾಮರಾನ್‌ ಗ್ರೀನ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಕೂಡ ಉಪಯುಕ್ತ ಬ್ಯಾಟಿಂಗ್ ಮೂಲಕ ಮುಂಬೈ ಗೆಲುವಿಗೆ ನೆರವಾದರು.

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮುಂಬೈ 81 ರನ್‌ಗಳಿಂದ ಲಖನೌ ವಿರುದ್ಧ ಗೆದ್ದಿತು. ಈ ಸೋಲಿನೊಂದಿಗೆ ಲಖನೌ ತಂಡವು ಟೂರ್ನಿಯಿಂದ ಹೊರಬಿದ್ದಿತು.

ಮುಂಬೈ ಇದೇ 26 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ‘ಕ್ವಾಲಿಫೈಯರ್‌–2’ ಪಂದ್ಯದಲ್ಲಿ ಗುಜರಾತ್ ತಂಡವನ್ನು ಎದುರಿಸಲಿದೆ.

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ರೋಹಿತ್‌ ಶರ್ಮಾ ನಾಯಕತ್ವದ ಮುಂಬೈ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 182 ರನ್‌ ಗಳಿಸಿತು. ಲಖನೌ ತಂಡವು 16.3 ಓವರ್‌ಗಳಲ್ಲಿ 101 ರನ್ ಗಳಿಸಿ ಎಲ್ಲ ವಿಕೆಟ್‌ ಕಳೆದುಕೊಂಡಿತು.

ಸವಾಲಿನ ಗುರಿ ಬೆನ್ನತ್ತಿದ ಲಖನೌ ತಂಡವು ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ತಂಡದ ಮೊತ್ತ 23 ರನ್‌ ಆಗುವಷ್ಟರಲ್ಲಿ ಪ್ರೇರಕ್ ಮಂಕಡ್‌ (3) ಹಾಗೂ ಕೈಲ್ ಮೇಯರ್ಸ್ (18) ಪೆವಿಲಿಯನ್ ಸೇರಿದ್ದರು.ಕೃಣಾಲ್ ಪಾಂಡ್ಯ (8) ಹಾಗೂ ಮಾರ್ಕಸ್‌ ಸ್ಟೊಯಿನಿಸ್‌ (40) ಮೂರನೇ ವಿಕೆಟ್‌ಗೆ 46 ರನ್ ಸೇರಿಸಿದ್ದೇ ಗರಿಷ್ಠ ಜೊತೆಯಾಟವಾಯಿತು. ಆ ಬಳಿಕ ತಂಡವು ಚೇತರಿಸಿಕೊಳ್ಳಲಿಲ್ಲ.

ಪ್ರೇರಕ್‌, ಆಯುಷ್‌ ಬಡೋಣಿ, ನಿಕೊಲಸ್‌ ಪೂರನ್‌, ರವಿ ಬಿಷ್ಣೋಯಿ, ಮೊಹಸಿನ್ ಅವರ ವಿಕೆಟ್‌ಗಳು ಮಧ್ವಾಲ್ ಪಾಲಾದವು.

ಮುಂಬೈ ಹೋರಾಟದ ಮೊತ್ತ:  ಲಖನೌ ತಂಡದ ನವೀನ್ ಉಲ್‌ ಹಕ್‌ (38ಕ್ಕೆ 4) ಮತ್ತು ಯಶ್‌ ಠಾಕೂರ್‌ (34ಕ್ಕೆ 3) ಅವರ ಪರಿಣಾಮಕಾರಿ ಬೌಲಿಂಗ್‌ ನಡುವೆಯೂ ಎದುರಾಳಿ ಬ್ಯಾಟರ್‌ಗಳು ಛಲದ ಆಟವಾಡಿದರು. 

ಗ್ರೀನ್‌ (41 ರನ್‌, 23 ಎ.) ಗರಿಷ್ಠ ಸ್ಕೋರರ್‌ ಎನಿಸಿಕೊಂಡ‌ರೆ, ಸೂರ್ಯ ಕುಮಾರ್‌ 33 ರನ್‌ ಗಳಿಸಿದರು. ತಿಲಕ್‌ ವರ್ಮಾ ಮತ್ತು ನೇಹಲ್‌ ವಧೇರಾ ಅವರೂ ತಂಡದ ಮೊತ್ತ ಹೆಚ್ಚಲು ಕಾರಣರಾದರು. 

ಟಾಸ್‌ ಗೆದ್ದು ಬ್ಯಾಟ್‌ ಮಾಡಲು ನಿರ್ಧರಿಸಿದ ಮುಂಬೈ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಸ್ಕೋರ್‌ 38 ಆಗುವಷ್ಟರಲ್ಲಿ ಇಶಾನ್‌ ಕಿಶನ್‌ (15) ಮತ್ತು ರೋಹಿತ್‌ (11) ಪೆವಿಲಿಯನ್‌ ಸೇರಿದ್ದರು. ಇಶಾನ್‌ ಅವರು ಯಶ್‌ ಠಾಕೂರ್‌ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್‌ ನಿಕೊಲಸ್‌ ಪೂರನ್‌ಗೆ ಕ್ಯಾಚ್‌ ಕೊಟ್ಟರು. ರೋಹಿತ್‌ ಅವರು ನವೀನ್ ಬೌಲಿಂಗ್‌ನಲ್ಲಿ ಬಡೋಣಿಗೆ ಕ್ಯಾಚ್‌ ನೀಡಿದರು.

ಎರಡು ವಿಕೆಟ್‌ಗಳು ಬೇಗನೇ ಬಿದ್ದರೂ, ಸೂರ್ಯಕುಮಾರ್‌ ಮತ್ತು ಗ್ರೀನ್‌ ಬಿರುಸಿನ ಆಟಕ್ಕಿಳಿದು ರನ್‌ರೇಟ್‌ ತಗ್ಗದಂತೆ ನೋಡಿಕೊಂಡರು. ಇದರಿಂದ 10 ಓವರ್‌ಗಳು ಕೊನೆಗೊಂಡಾಗ ಸ್ಕೋರ್‌ 98 ಆಗಿತ್ತು. ಇವರಿಬ್ಬರು ಮೂರನೇ ವಿಕೆಟ್‌ಗೆ 66 ರನ್‌ ಸೇರಿಸಿದರು. 

ಆದರೆ 11ನೇ ಓವರ್‌ನಲ್ಲಿ ನವೀನ್‌ ಅವರು ಸೂರ್ಯಕುಮಾರ್‌ ಮತ್ತು ಗ್ರೀನ್‌ ಅವರನ್ನು ಪೆವಿಲಿಯನ್‌ಗಟ್ಟಿ, ಮುಂಬೈಗೆ ಅವಳಿ ಆಘಾತ ನೀಡಿದರು.

ಪರಿಸ್ಥಿತಿಗೆ ಚೆನ್ನಾಗಿ ಹೊಂದಿ ಕೊಂಡಿದ್ದ ಇಬ್ಬರು ಬ್ಯಾಟರ್‌ಗಳು ಮೂರು ಎಸೆತಗಳ ಅಂತರದಲ್ಲಿ ಮರಳಿದ್ದರಿಂದ ಮುಂಬೈನ ರನ್‌ ವೇಗ ತಗ್ಗಿತು. ಆದರೆ ಕೊನೆಯಲ್ಲಿ ತಿಲಕ್‌ ವರ್ಮಾ ಮತ್ತು ನೇಹಲ್‌ ವಧೇರಾ ಅವರ ಬೀಸಾಟದ ನೆರವಿನಿಂದ 180ರ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಅಂತಿಮ ಐದು ಓವರ್‌ಗಳಲ್ಲಿ 51 ರನ್‌ಗಳು ಬಂದವು.

ಸೂರ್ಯಕುಮಾರ್ ಜಾಗದಲ್ಲಿ ‘ಇಂಪ್ಯಾಕ್ಟ್‌ ಪ್ಲೇಯರ್‌’ ಆಗಿ ಬಂದ ವಧೇರಾ 12 ಎಸೆತಗಳಲ್ಲಿ 23 ರನ್‌ ಗಳಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT