ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ipl 2023: ರಾಹುಲ್‌ –ವಾರ್ನರ್‌ ಪೈಪೋಟಿ

ಮಿಚೆಲ್‌ ಮಾರ್ಷ್‌ ಮೇಲೆ ಎಲ್ಲರ ಚಿತ್ತ
Last Updated 31 ಮಾರ್ಚ್ 2023, 19:21 IST
ಅಕ್ಷರ ಗಾತ್ರ

ಲಖನೌ (ಪಿಟಿಐ): ಕೆ.ಎಲ್‌.ರಾಹುಲ್‌ ನಾಯಕತ್ವದ ಲಖನೌ ಸೂಪರ್‌ ಜೈಂಟ್ಸ್‌ ತಂಡ ಐಪಿಎಲ್‌ ಟೂರ್ನಿಯಲ್ಲಿ ಪ್ರಶಸ್ತಿಯೆಡೆಗಿನ ಅಭಿಯಾನವನ್ನು ಶನಿವಾರ ಆರಂಭಿಸಲಿದೆ.

ಇಲ್ಲಿನ ಇಕಾನಾ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಲಖನೌ ತಂಡ ಡೇವಿಡ್ ವಾರ್ನರ್‌ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸವಾಲು ಎದುರಿಸಲಿದ್ದು, ಶುಭಾರಂಭದ ನಿರೀಕ್ಷೆಯಲ್ಲಿದೆ.

ಬ್ಯಾಟಿಂಗ್‌ನಲ್ಲಿ ಲಯ ಕಳೆದುಕೊಂಡಿರುವ ರಾಹುಲ್‌ ಅವರು ಒತ್ತಡವನ್ನು ಹೇಗೆ ನಿಭಾಯಿಸುವರು ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಹಳೆಯ ಫಾರ್ಮ್‌ಗೆ ಮರಳುವ ಜತೆಯಲ್ಲೇ ತಂಡವನ್ನು ಗೆಲುವಿನತ್ತ ಮುನ್ನಡೆಸುವ ಸವಾಲು ಅವರ ಮುಂದಿದೆ.

ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಅವರು ಈ ಪಂದ್ಯಕ್ಕೆ ಲಭ್ಯರಿಲ್ಲ. ಆದ್ದರಿಂದ ನಾಯಕ ರಾಹುಲ್‌ ಅವರು ನಿಕೋಲಸ್ ಪೂರನ್, ಆಲ್‌ರೌಂಡರ್‌ಗಳಾದ ದೀಪಕ್ ಹೂಡಾ, ಕೃಣಾಲ್ ಪಾಂಡ್ಯ, ಕನ್ನಡಿಗ ಕೆ.ಗೌತಮ್, ಕೈಲ್ ಮೇಯರ್ಸ್ ಅವರಂತಹ ಆಟಗಾರರನ್ನು ನೆಚ್ಚಿಕೊಂಡು ಗೆಲುವಿಗೆ ತಂತ್ರ ರೂಪಿಸಬೇಕಿದೆ. ಡಿ ಕಾಕ್‌ ಅನುಪಸ್ಥಿತಿಯಲ್ಲಿ ಮೇಯರ್ಸ್‌ ಅವರ ಜವಾಬ್ದಾರಿ ಹೆಚ್ಚಿದೆ.

ವಾರ್ನರ್‌– ಮಾರ್ಷ್‌ ಮೇಲೆ ಚಿತ್ತ: ಮತ್ತೊಂದೆಡೆ ಡೆಲ್ಲಿ ತಂಡ ಆಸ್ಟ್ರೇಲಿಯಾದ ಇಬ್ಬರು ಆಟಗಾರರಾದ ವಾರ್ನರ್‌ ಮತ್ತು ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಮಾರ್ಷ್‌ ಅತ್ಯುತ್ತಮ ಫಾರ್ಮ್‌ನಲ್ಲಿರುವುದು ತಂಡದ ಬಲ ಹೆಚ್ಚಿಸಿದೆ.

ಪೃಥ್ವಿ ಶಾ, ರೊವ್ಮನ್‌ ಪೊವೆಲ್‌ ಮತ್ತು ಸರ್ಫರಾಜ್‌ ಖಾನ್‌ ಅವರೂ ಅಬ್ಬರದ ಆಟವಾಡುವ ತಾಕತ್ತು ಹೊಂದಿದ್ದಾರೆ. ಬೌಲಿಂಗ್‌ನಲ್ಲಿ ಅಕ್ಷರ್‌ ಪಟೇಲ್‌ ಮತ್ತು ಕುಲದೀಪ್‌ ಯಾದವ್‌ ಪ್ರಮುಖ ಪಾತ್ರ ವಹಿಸಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ
ಸರಣಿಯಲ್ಲಿ ಬ್ಯಾಟಿಂಗ್‌ನಲ್ಲೂ ಮಿಂಚಿದ್ದ ಅಕ್ಷರ್‌, ಅದೇ ಫಾರ್ಮ್‌ಅನ್ನುಇಲ್ಲೂ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

ಇಶಾಂತ್‌ ಶರ್ಮ ಫಾರ್ಮ್‌ ಕಳೆದುಕೊಂಡಿರುವುದು ಮತ್ತು ಪ್ರಮುಖ ವೇಗದ ಬೌಲರ್‌ಗಳು ಇಲ್ಲದಿರುವುದು ಡೆಲ್ಲಿ ತಂಡಕ್ಕೆ ಅಲ್ಪ ಹಿನ್ನಡೆ ಉಂಟುಮಾಡಿದೆ.

ಪಂದ್ಯ ಆರಂಭ: ರಾತ್ರಿ 7.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT