ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2023: ಫಫ್ ಬಳಗಕ್ಕೆ ಪ್ಲೇಆಫ್ ಕನಸು

ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಬಲಾಢ್ಯ ಗುಜರಾತ್ ಟೈಟನ್ಸ್ ಸವಾಲು; ವಿರಾಟ್, ಮ್ಯಾಕ್ಸ್‌ವೆಲ್ ಮೇಲೆ ನಿರೀಕ್ಷೆ
Published 20 ಮೇ 2023, 16:17 IST
Last Updated 20 ಮೇ 2023, 16:17 IST
ಅಕ್ಷರ ಗಾತ್ರ

ಬೆಂಗಳೂರು: ಫಫ್ ಡುಪ್ಲೆಸಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಗವು ಇಪ್ಪತ್ತನಾಲ್ಕು ದಿನಗಳ ನಂತರ ತವರಿನಂಗಳಕ್ಕೆ ಮರಳಿದೆ.

ಈ ಅವಧಿಯಲ್ಲಿ ಬೇರೆ ಬೇರೆ ತಾಣಗಳಲ್ಲಿ ಆಡಿದ ಐದು ಪಂದ್ಯಗಳಲ್ಲಿ ಮೂರರಲ್ಲಿ ಜಯಿಸಿ ಎರಡರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ಸದ್ಯ ನಾಲ್ಕನೇ ಸ್ಥಾನದಲ್ಲಿದೆ. ಆದರೂ ಪ್ಲೇ ಆಫ್‌ ಪ್ರವೇಶ ಇನ್ನೂ ಖಚಿತವಾಗಿಲ್ಲ. ಅದರಿಂದಾಗಿ ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿಯು ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ವಿರುದ್ಧ ಜಯಿಸುವುದು ಮಹತ್ವದ್ದಾಗಿದೆ. ಇದೇ ಕಾರಣಕ್ಕೆ ಈ ಪಂದ್ಯವು ಕುತೂಹಲದ ಕಣಜವಾಗಿದೆ.

ಈ ಕೌತುಕವನ್ನು ಕಣ್ತುಂಬಿಕೊಳ್ಳಲು ಆರ್‌ಸಿಬಿ ಅಭಿಮಾನಿಗಳ ದಂಡು ಕ್ರೀಡಾಂಗಣದತ್ತ ಚಿತ್ತ ನೆಟ್ಟಿದೆ. ಗ್ಯಾಲರಿಗಳು ಭರ್ತಿಯಾಗುವ ನಿರೀಕ್ಷೆ ಇದೆ. ಆದರೆ, ಆರ್‌ಸಿಬಿ ಬಳಗದಲ್ಲಿ ಒತ್ತಡವಿರುವುದಂತೂ ದಿಟ. ಏಕೆಂದರೆ, ಈಗಾಗಲೇ ನಾಲ್ಕರ ಹಂತಕ್ಕೆ ಲಗ್ಗೆ ಇಟ್ಟಿರುವ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಬಳಗವನ್ನು ಸೋಲಿಸಿದರೆ ಪ್ಲೇ ಆಫ್ ಹಾದಿ ಸುಗಮವಾಗಲಿದೆ.  ಆದರೆ ಇದು ಸುಲಭವಲ್ಲ.

ಬೆಂಗಳೂರು ತಂಡವು ಕಳೆದ 13 ಪಂದ್ಯಗಳಲ್ಲಿ ಮೂವರು ಬ್ಯಾಟರ್‌ಗಳ ಆಟದ ಮೇಲೆಯೇ ಅವಲಂಬಿತವಾಗಿದೆ. ನಾಯಕ ಫಫ್ (702 ರನ್), ಹೋದ ಪಂದ್ಯದಲ್ಲಿ ಶತಕ ಗಳಿಸಿದ ವಿರಾಟ್ ಕೊಹ್ಲಿ (538 ರನ್) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (389 ರನ್) ಅವರೇ ತಂಡದ ನೊಗವನ್ನು ಎಳೆದಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಭರವಸೆಯ ಆಟವನ್ನು ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿಸುವುದು ಕಷ್ಟ.

’ಟೂರ್ನಿಯುದ್ದಕ್ಕೂ ಅಗ್ರ ಮೂವರು ಹೆಚ್ಚು ಹೊತ್ತು ಕ್ರಿಸ್‌ನಲ್ಲಿದ್ದು, ರನ್‌ಗಳನ್ನು ಗಳಿಸಿದ್ದಾರೆ. ಅದರಿಂದಾಗಿ ಮಧ್ಯಮ ಕ್ರಮಾಂಕದವರಿಗೆ ಹೆಚ್ಚು ಬ್ಯಾಟಿಂಗ್ ಅವಕಾಶ ಸಿಕ್ಕಿಲ್ಲ. ಆದ್ದರಿಂದ ಇದನ್ನು ತಂಡದ ದೌರ್ಬಲ್ಯವೆಂದು ಹೇಳಲಾಗದು’ ಅರ್‌ಸಿಬಿ ನಿರ್ದೇಶಕ ಮೈಕ್ ಹೆಸನ್ ಹೇಳಿದರು.

ಆರಂಭಿಕ ಪಂದ್ಯಗಳಲ್ಲಿ ಮಿಂಚಿದ್ದ ವೇಗಿ ಮೊಹಮ್ಮದ್ ಸಿರಾಜ್ ಕಳೆದ ಕೆಲವು ಪಂದ್ಯಗಳಲ್ಲಿ ಮಂಕಾಗಿದ್ದಾರೆ. ಆದರೆ, ವೇಯ್ನ್ ಪಾರ್ನೆಲ್, ಮಿಚೆಲ್ ಬ್ರೇಸ್‌ವೆಲ್ ಹಾಗೂ ವಣಿಂದು ಹಸರಂಗಾ ಕೆಲವು ಪಂದ್ಯಗಳಲ್ಲಿ ಆಸರೆಯಾಗಿದ್ದಾರೆ. ಗುಜರಾತ್ ತಂಡದಲ್ಲಿ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ (576 ರನ್) ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ವೃದ್ಧಿಮಾನ್ ಸಹಾ, ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್ ಹಾಗೂ ವಿಜಯಶಂಕರ್ ಅವರು ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರರಾಗಿದ್ದಾರೆ. ಸ್ಪಿನ್ನರ್ ರಶೀದ್ ಖಾನ್ ಎದುರಾಳಿ ಬ್ಯಾಟರ್‌ಗಳಿಗೆ ಸಿಂಹಸ್ವಪ್ನರಾಗಿದ್ದಾರೆ. ಅಲ್ಲದೇ ಬ್ಯಾಟಿಂಗ್‌ನಲ್ಲಿಯೂ ಅಬ್ಬರಿಸುತ್ತಿದ್ದಾರೆ. ಇದರಿಂದಾಗಿ ತಂಡದ ಬಲ ಮತ್ತಷ್ಟು ಹೆಚ್ಚಿದೆ. ಇವರೆಲ್ಲರೂ ಆತಿಥೇಯ ಬೌಲರ್‌ಗಳಿಗೆ ಕಠಿಣ ಸವಾಲೊಡ್ಡುವ ಸಾಧ್ಯತೆ ಇದೆ.

ಹೋದ ತಿಂಗಳು ತವರಿನಂಗಳದಲ್ಲಿ ಆರ್‌ಸಿಬಿಯು ಆರು ಪಂದ್ಯಗಳನ್ನು ಆಡಿತ್ತು. ಅದರಲ್ಲಿ ಮೂರು ಗೆದ್ದು, ಮೂರು ಸೋತಿತ್ತು. ಇದೀಗ ಕೊನೆಯ ಪಂದ್ಯದಲ್ಲಿ ತನ್ನ ಅಭಿಮಾನಿಗಳಿಗೆ ಜಯದ ಕಾಣಿಕೆ ನೀಡುವ ಜೊತೆಗೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಆರ್‌ಸಿಬಿಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT