ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2023: ಶಮಿಗೆ 4 ವಿಕೆಟ್; ಡೆಲ್ಲಿ ವಿರುದ್ಧ ಗುಜರಾತ್ ಗೆಲುವಿಗೆ 131 ರನ್ ಗುರಿ

Published 2 ಮೇ 2023, 15:51 IST
Last Updated 2 ಮೇ 2023, 15:51 IST
ಅಕ್ಷರ ಗಾತ್ರ

ಅಹಮದಾಬಾದ್: ಗುಜರಾತ್ ಟೈಟನ್ಸ್ ತಂಡದ ಆನುಭವಿ ವೇಗಿ ಮೊಹಮ್ಮದ್ ಶಮಿಯ ದಾಳಿಗೆ ಅಲ್ಪಮೊತ್ತಕ್ಕೆ ಕುಸಿಯಬೇಕಿದ್ದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಮನ್ ಹಕೀಂ ಖಾನ್ ಆಸರೆಯಾದರು.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಅಮನ್ (51; 44ಎ, 4X3, 6X3) ಅರ್ಧಶತಕದ ಬಲದಿಂದ ಡೆಲ್ಲಿ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 130 ರನ್‌ ಗಳಿಸಿತು.

ಟಾಸ್ ಗೆದ್ದ ಡೆಲ್ಲಿ ತಂಡದ ನಾಯಕ ಡೇವಿಡ್ ವಾರ್ನರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಶಮಿ (11ಕ್ಕೆ4) ಹಾಕಿದ ಮೊದಲ ಎಸೆತದಲ್ಲಿಯೇ ಬ್ಯಾಟರ್ ಫಿಲಿಪ್ ಸಾಲ್ಟ್ ಅವರು ಡೇವಿಡ್ ಮಿಲ್ಲರ್‌ಗೆ ಕ್ಯಾಚಿತ್ತರು. ನಂತರದ ಓವರ್‌ನಲ್ಲಿ ವಾರ್ನರ್ ರನೌಟ್ ಆದರು.

ಇನಿಂಗ್ಸ್‌ನ ಮೂರು ಮತ್ತು ಐದನೇ ಓವರ್‌ನಲ್ಲಿ ಸ್ವಿಂಗ್ ಎಸೆತಗಳ ಅಸ್ತ್ರ ಪ್ರಯೋಗಿಸಿದ ಶಮಿ ಡೆಲ್ಲಿ ತಂಡಕ್ಕೆ ದೊಡ್ಡ ಆಘಾತ ನೀಡಿದರು. ರಿಲೀ ರೊಸೊ, ಮನೀಷ್ ಪಾಂಡೆ ಹಾಗೂ ಪ್ರಿಯಂ ಗಾರ್ಗ್ ವಿಕೆಟ್‌ ತಮ್ಮದಾಗಿಸಿಕೊಂಡರು. ಈ ಮೂವರ ಕ್ಯಾಚ್‌ಗಳನ್ನು ವಿಕೆಟ್‌ ಕೀಪರ್ ವೃದ್ಧಿಮಾನ್ ಸಹಾ ಪಡೆದರು. ಇದರಿಂದಾಗಿ ತಂಡವು ಕೇವಲ 23 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಕಂಗಾಲಾಯಿತು. ಶಮಿ ಈ ಟೂರ್ನಿಯಲ್ಲಿ ಒಟ್ಟು 17 ವಿಕೆಟ್‌ಗಳನ್ನು ಗಳಿಸಿ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ಧಾರೆ.

ಆದರೆ ಈ ಹೊತ್ತಿನಲ್ಲಿ ಜೊತೆಗೂಡಿದ ಅಕ್ಷರ್ ಪಟೇಲ್ (27; 30ಎ) ಹಾಗೂ ಅಮನ್ ಇನಿಂಗ್ಸ್‌ಗೆ ಬಲ ತುಂಬಿದರು. ಆರನೇ ವಿಕೆಟ್ ಜೊತೆಯಾಟದಲ್ಲಿ 50 ರನ್‌ ಸೇರಿಸಿದರು. ಒಂದು ಸಿಕ್ಸರ್ ಮತ್ತು ಎರಡು ಬೌಂಡರಿ ಬಾರಿಸಿದ ಅಕ್ಷರ್ 14ನೇ ಓವರ್‌ನಲ್ಲಿ ಮೋಹಿತ್ ಶರ್ಮಾ ಎಸೆತಕ್ಕೆ ಔಟಾದರು.

ಇದರ ನಂತರ ತಮ್ಮ ಆಟದ ವೇಗ ಹೆಚ್ಚಿಸಿದ ಅಮನ್ 115.91ರ ಸರಾಸರಿಯಲ್ಲಿ ರನ್‌ ಗಳಿಸಿದರು. ಏಳನೇ ವಿಕೆಟ್ ಜೊತೆಯಾಟದಲ್ಲಿ ಅವರು ರಿಪಲ್ ಪಟೇಲ್ (23; 13ಎ) ಜೊತೆಗೂಡಿ 53 ರನ್‌ ಸೇರಿಸಿದರು. ಇದರಿಂದಾಗಿ ತಂಡವು ನೂರು ರನ್‌ಗಳ ಗಡಿಯನ್ನು ದಾಟಲು ಸಾಧ್ಯವಾಯಿತು.

ಡೆಲ್ಲಿ ತಂಡವು ಇನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿ ಹಾಗೂ ಐದು ಸಿಕ್ಸರ್‌ಗಳು ದಾಖಲಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT