ಬೌಲರ್‌ಗಳ ಭರಾಟೆ: ಗೆದ್ದ ಸೂಪರ್ ಕಿಂಗ್ಸ್‌

ಸೋಮವಾರ, ಏಪ್ರಿಲ್ 22, 2019
29 °C
ಆರ್‌ಸಿಬಿ ಬ್ಯಾಟಿಂಗ್ ಫೇಲ್; ಬೌಲಿಂಗ್ ಪಾಸ್; ಚೆನ್ನೈ ಸ್ಪಿನ್ನರ್‌ಗಳು ಸೂಪರ್

ಬೌಲರ್‌ಗಳ ಭರಾಟೆ: ಗೆದ್ದ ಸೂಪರ್ ಕಿಂಗ್ಸ್‌

Published:
Updated:

ಚೆನ್ನೈ: ರಾಯಲ್ ಚಾಲೆಂಜರ್ಸ್‌ ಬೆಂಗ ಳೂರು ತಂಡದ ಬ್ಯಾಟಿಂಗ್‌ ಪಡೆಯ ಆತ್ಮವಿಶ್ವಾಸದ ಬಲೂನು ಮೊದಲ ಪಂದ್ಯದಲ್ಲಿಯೇ ಠುಸ್ ಆಯಿತು. ಅದರಿಂದಾಗಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸೋಲಿನ ಕಹಿಯೊಂದಿಗೆ ಆರಂಭ ಮಾಡಿತು. ಆದರೆ, ಆರ್‌ಸಿಬಿ ಬೌಲರ್‌ಗಳ ಆಟ ಮೆಚ್ಚುಗೆ ಗಳಿಸಿತು.

ಶನಿವಾರ ರಾತ್ರಿ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಅನುಭವಿ ಸ್ಪಿನ್ನರ್ ಹರಭಜನ್ ಸಿಂಗ್ ಮತ್ತು ದಕ್ಷಿಣ ಆಫ್ರಿಕಾದ ಲೆಗ್‌ಸ್ಪಿನ್ನರ್ ಇಮ್ರಾನ್ ತಾಹೀರ್ ಅವರ ಸ್ಪಿನ್ ತಿರುಗಣಿಯ ಮುಂದೆ ವಿರಾಟ್ ಕೊಹ್ಲಿ ಬಳಗವು ತರಗೆಲೆಯಾಯಿತು. 17.1 ಓವರ್‌ಗಳಲ್ಲಿ 70 ರನ್‌ ಗಳಿಸಿ ಆಲೌಟ್ ಆಯಿತು. ಈ ಅಲ್ಪಮೊತ್ತದ ಗುರಿ ಮುಟ್ಟಲು ಮಹೇಂದ್ರಸಿಂಗ್ ಧೋನಿ ಬಳಗವು ಆರ್‌ಸಿಬಿಗಿಂತ ಮೂರು ಎಸೆತಗಳನ್ನು ಹೆಚ್ಚು ತೆಗೆದುಕೊಂಡಿತು!

17.4 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು 71 ರನ್ ಗಳಿಸಿತು. ಅದಕ್ಕೆ ಕಾರಣರಾಗಿದ್ದು ಆರ್‌ಸಿಬಿ ಸ್ಪಿನ್ನರ್ ಯಜುವೇಂದ್ರ ಚಾಹಲ್, ಮೋಯಿನ್ ಅಲಿ ಮತ್ತು ಮಧ್ಯಮವೇಗಿ ಮೊಹಮ್ಮದ್ ಸಿರಾಜ್ ಆವರ ಬಿಗಿ ಬೌಲಿಂಗ್. ಮೂರನೇ ಓವರ್‌ನಲ್ಲಿಯೇ ಶೇನ್ ವಾಟ್ಸನ್‌ ವಿಕೆಟ್ ಪಡೆದ ಚಾಹಲ್ ಮಿಂಚಿದರು. ಆದರೆ, ಚೆಂಡು ನಿಧಾನವಾಗಿ ಪುಟಿದೆದ್ದು ತಿರುವು ಪಡೆಯುತ್ತಿದ್ದ ಪಿಚ್‌ನಲ್ಲಿ ಅಂಬಟಿ ರಾಯುಡು ಮತ್ತು ಸುರೇಶ್ ರೈನಾ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದರು. ರಾಯುಡು 42 ಎಸೆತಗಳಲ್ಲಿ 28 ರನ್ ಹೊಡೆದರು. ರೈನಾ ಕೂಡ ಸಹನೆಯಿಂದ  ಆಡಿದರು. 21 ಎಸೆತಗಳಲ್ಲಿ 19 ರನ್ ಹೊಡೆದರು. ಅವರ ನಂತರ ಕ್ರೀಸ್‌ಗೆ ಬಂದ ಕೇದಾರ್ ಜಾಧವ್ (ಔಟಾಗದೆ 13; 19ಎ) ಅವಸರ ಮಾಡಲಿಲ್ಲ. ನಂತರ ರವೀಂದ್ರ ಜಡೇಜ ಐದು ರನ್ ಗಳಿಸಲು ಹದಿನೈದು ಎಸೆತಗಳನ್ನು ಆಡಿದರೂ ತಂಡವನ್ನು ಗೆಲ್ಲಿಸಿದರು.

ಟಾಸ್ ಗೆದ್ದ ಧೋನಿ: ಟಾಸ್ ಗೆದ್ದ ಮಹೇಂದ್ರಸಿಂಗ್ ಧೋನಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆರ್‌ಸಿಬಿಯ ಇನಿಂಗ್ಸ್‌ ಆರಂಭಿಸಿದ ವಿರಾಟ್ ಕೊಹ್ಲಿ ಮತ್ತು ಪಾರ್ಥಿವ್ ಪಟೇಲ್ ಕ್ರೀಸ್‌ಗೆ ಕಾಲಿಟ್ಟಾಗ ಅಭಿಮಾನಿಗಳ ಗ್ಯಾಲರಿಯಿಂದ ಅಬ್ಬರದ ಸ್ವಾಗತ ದೊರೆಯಿತು. ಆದರೆ, ಬಹುಬೇಗನೇ ಅವರೆಲ್ಲ ಭ್ರಮನಿರಸನಗೊಂಡರು.

ಆತಿಥೇಯ ತಂಡದ ಅಭಿಮಾನಿಗಳ ಕೈಯಲ್ಲಿದ್ದ ‘ಯೆಲ್ಲೋ ಫಿವರ್‌’ ಬೋರ್ಡ್‌ಗಳು ರಾರಾಜಿಸಿದವು. ಆರ್‌ಸಿಬಿಯ ‘ಪ್ಲೇ ಬೋಲ್ಡ್‌’ ಪ್ಲೆಕಾರ್ಡ್‌ಗಳು ಕ್ಲೀನ್‌ಬೌಲ್ಡ್ ಆದವು.  ಆರ್‌ಸಿಬಿ ಬ್ಯಾಟಿಂಗ್‌ ಪಡೆಯ ಪೆವಿಲಿಯನ್ ಪರೇಡ್ ನಾಯಕ ಕೊಹ್ಲಿಯಿಂದಲೇ ಆರಂಭವಾಯಿತು. ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಹರಭಜನ್ ಸಿಂಗ್ ಎಸೆತವನ್ನು ಸಿಕ್ಸರ್‌ಗೆ ಎತ್ತುವ ಭರದಲ್ಲಿ ಕೊಹ್ಲಿ ಡೀಪ್‌ ಮಿಡ್‌ವಿಕೆಟ್‌ ಫೀಲ್ಡರ್ ರವೀಂದ್ರ ಜಡೇಜ  ಪಡೆದ ಆಕರ್ಷಕ ಕ್ಯಾಚ್‌ಗೆ ನಿರ್ಗಮಿಸಿದರು.

ಎರಡು ಓವರ್‌ಗಳ ನಂತರ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್ ಮೊಯಿನ್ ಅಲಿ ಅವರು ಹರಭಜನ್ ಎಸೆತದಲ್ಲಿ ಅವರಿಗೇ ಕ್ಯಾಚಿತ್ತರು.  ಹೋದ ಟೂರ್ನಿಯಲ್ಲಿ ಆಪದ್ಭಾಂದವನಾಗಿದ್ದ ಎಬಿ ಡಿವಿಲಿಯರ್ಸ್‌ ಕೂಡ ಇಲ್ಲಿ ವಿಶ್ವಾಸ  ಉಳಿಸಿಕೊಳ್ಳಲಿಲ್ಲ. ಎಂಟನೇ ಓವರ್‌ನಲ್ಲಿ ಅವರು ಕೂಡ ಜಡೇಜ ಪಡೆದ ಅದ್ಭುತ  ಕ್ಯಾಚ್‌ಗೆ ಔಟಾದರು. ಹರಭಜನ್ ಮೂರನೇ ವಿಕೆಟ್ ಪಡೆದು ಸಂಭ್ರಮಿಸಿದರು.  ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿರುವ ವಿಂಡೀಸ್ ಪ್ರತಿಭೆ ಶಿಮ್ರೊನ್ ಹೆಟ್ಮೆಯರ್‌ಗೂ  ಕಹಿನೆನಪು ಕಾಡಿತು. 

ಎಂಟನೇ ಓವರ್‌ನ ಕೊನೆಯ ಎಸೆತವನ್ನು ಪುಷ್‌ ಮಾಡಿ ರನ್ ಪಡೆಯಲು ಓಡಿ ತಪ್ಪು ಮಾಡಿದರು. ಚುರುಕಾದ ಫೀಲ್ಡಿಂಗ್ ಮಾಡಿದ ಸುರೇಶ್ ರೈನಾ ಎಸೆದ ಚೆಂಡು ಪಡೆದ ಧೋನಿ ಬೇಲ್ಸ್‌ ಎಗರಿಸಿದರು. ನಂತರದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೋರಾಟ ಮಾಡುವಲ್ಲಿ ವಿಫಲರಾದರು. ಆದರೆ, ಆರಂಭಿಕ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್, ಇನ್ನೊಂದು ಬದಿಯಲ್ಲಿ ವಿಕೆಟ್ ಗಳು ಉರುಳುತ್ತಿದ್ದರೂ  ಆತ್ಮವಿಶ್ವಾಸದಿಂದ ಬ್ಯಾಟ್ ಬೀಸಿದರು.  18ನೇ ಓವರ್‌ನಲ್ಲಿ ಡ್ವೇನ್ ಬ್ರಾವೊ ಹಾಕಿದ ಮೊದಲ ಎಸೆತದಲ್ಲಿ ಔಟಾದರು.

ಐದು ಸಹಸ್ರ ರನ್‌ಗಳ ಸರದಾರ ರೈನಾ

ಐಪಿಎಲ್‌ ಟೂರ್ನಿಯ ಇತಿಹಾಸದಲ್ಲಿ ಐದು ಸಾವಿರ ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಸೂಪರ್ ಕಿಂಗ್ಸ್‌ ತಂಡದ ಸುರೇಶ್ ರೈನಾ ಪಾತ್ರರಾದರು.  ಈ ಪಂದ್ಯಕ್ಕೂ ಮುನ್ನ ಅವರು 4985 ರನ್‌ ಗಳಿಸಿದ್ದರು. 15 ರನ್ ಗಳಿಸಿದ ಅವರು ಐದು ಸಾವಿರ ರನ್‌ ಗಡಿ ತಲುಪಿದರು. ಪಂದ್ಯದಲ್ಲಿ ಅವರು ಒಟ್ಟು 19 ರನ್ ಗಳಿಸಿ  ಔಟಾದರು. ಅವರ ನಂತರದ ಸ್ಥಾನದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಇದ್ದಾರೆ.


ಆಟಗಾರ ಇನಿಂಗ್ಸ್ ರನ್
ಸುರೇಶ್ ರೈನಾ 173 5004
ವಿರಾಟ್ ಕೊಹ್ಲಿ 156 4954
ರೋಹಿತ್ ಶರ್ಮಾ 168 4493
ಗೌತಮ್ ಗಂಭೀರ್ 152 4217
ರಾಬಿನ್ ಉತ್ತಪ್ಪ 159 4129

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !