ವಾರ್ನರ್‌–ಬೇಸ್ಟೊ ಕಟ್ಟಿಹಾಕುವ ಯೋಜನೆ ನಮ್ಮದಾಗಿತ್ತು: ಅಂಕಿತ್‌ ರಜಪೂತ್‌

ಶನಿವಾರ, ಏಪ್ರಿಲ್ 20, 2019
27 °C
ಕಿಂಗ್ಸ್‌ ಇಲೆವನ್‌ ತಂಡದ ಆಟಗಾರ ಹೇಳಿಕೆ

ವಾರ್ನರ್‌–ಬೇಸ್ಟೊ ಕಟ್ಟಿಹಾಕುವ ಯೋಜನೆ ನಮ್ಮದಾಗಿತ್ತು: ಅಂಕಿತ್‌ ರಜಪೂತ್‌

Published:
Updated:
Prajavani

ಮೊಹಾಲಿ: ‘ಡೇವಿಡ್‌ ವಾರ್ನರ್‌ ಮತ್ತು ಜಾನಿ ಬೇಸ್ಟೊ ಅಪಾಯಕಾರಿ ಎಂಬುದನ್ನು ಅರಿತಿದ್ದೆವು. ಹೆಚ್ಚು ರನ್‌ ಗಳಿಸದಂತೆ ಅವರನ್ನು ನಿಯಂತ್ರಿಸುವ ಯೋಜನೆ ನಮ್ಮದಾಗಿತ್ತು. ಅದನ್ನು ಕಾರ್ಯಗತಗೊಳಿಸಲು ಶ್ರಮಿಸಿದೆವು’ ಎಂದು ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಬೌಲರ್‌ ಅಂಕಿತ್‌ ರಜಪೂತ್‌ ತಿಳಿಸಿದರು.

ಐ.ಎಸ್‌.ಬಿಂದ್ರಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದಿದ್ದ ಪಂದ್ಯದಲ್ಲಿ ಕಿಂಗ್ಸ್‌ ಇಲೆವನ್‌ 6 ವಿಕೆಟ್‌ಗಳಿಂದ ಸನ್‌ರೈಸರ್ಸ್‌ ತಂಡವನ್ನು ಮಣಿಸಿತ್ತು.

ಪಂದ್ಯದ ನಂತರ ಮಾತನಾಡಿದ ಅಂಕಿತ್‌ ‘ಬಿಂದ್ರಾ ಕ್ರೀಡಾಂಗಣದ ಪಿಚ್‌ನಲ್ಲಿ ಹಸಿರು ನಳನಳಿಸುತ್ತಿತ್ತು. ವೇಗಿಗಳಿಗೆ ಪಿಚ್‌ ಸಹಕಾರಿಯಾಗಿದ್ದರಿಂದ ನನಗೆ ಆಡುವ ಬಳಗದಲ್ಲಿ ಸ್ಥಾನ ನೀಡಲಾಗಿತ್ತು. ನಿಖರ ಲೈನ್‌ ಮತ್ತು ಲೆಂಗ್ತ್‌ನಲ್ಲಿ ಚೆಂಡನ್ನು ಹಾಕಿ ವಾರ್ನರ್‌ ಅವರನ್ನು ನಿಯಂತ್ರಿಸುವಲ್ಲಿ ಸಫಲನಾದೆ’ ಎಂದರು.

‘ಮೊದಲ ಹತ್ತು ಓವರ್‌ಗಳಲ್ಲಿ ನಾವು ಎದುರಾಳಿಗಳನ್ನು 50ರನ್‌ಗಳಿಗೆ ನಿಯಂತ್ರಿಸಿದ್ದೆವು. ಆದರೆ ನಂತರದ ಹತ್ತು ಓವರ್‌ಗಳಲ್ಲಿ 100 ರನ್‌ ಕೊಟ್ಟೆವು. ಇದು ಬೇಸರದ ಸಂಗತಿ’ ಎಂದು ಕಿಂಗ್ಸ್‌ ಇಲೆವನ್‌ ನಾಯಕ ರವಿಚಂದ್ರನ್‌ ಅಶ್ವಿನ್‌ ಹೇಳಿದರು.

‘ಮುಜೀಬ್ ಉರ್‌ ರಹಮಾನ್‌ ಪ್ರತಿಭಾನ್ವಿತ ಸ್ಪಿನ್ನರ್‌. ಮೊಹಾಲಿ ಅಂಗಳದಲ್ಲಿ ಹೇಗೆ ಬೌಲ್ ಮಾಡಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಯಾವ ಲೆಂಗ್ತ್‌ನಲ್ಲಿ, ಎಷ್ಟು ವೇಗದಲ್ಲಿ ಚೆಂಡನ್ನು ಎಸೆಯಬೇಕು ಎಂಬುದನ್ನೂ ಅವರು ಅರಿತಿದ್ದಾರೆ. ಕೆಲವೊಮ್ಮೆ ನಮ್ಮ ಯೋಜನೆಗಳು ಫಲ ನೀಡುವುದಿಲ್ಲ. ಹಾಗಂತ ಬೌಲರ್‌ ಅನ್ನು ದೂಷಿಸಲು ಆಗುವುದಿಲ್ಲ’ ಎಂದು ಮುಜೀಬ್‌ ಅವರನ್ನು ಸಮರ್ಥಿಸಿಕೊಂಡರು.

‘ಈ ಹಿಂದೆ ಅಫ್ಗಾನಿಸ್ತಾನದ ಪರ ಹಲವು ಪಂದ್ಯಗಳಲ್ಲಿ ಮುಜೀಬ್ ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡಿ ಗಮನ ಸೆಳೆದಿದ್ದರು. ಹೀಗಾಗಿ ಇನಿಂಗ್ಸ್‌ನ ಎರಡನೇ ಓವರ್‌ ಬೌಲ್ ಮಾಡಲು ಅವರಿಗೆ ಚೆಂಡು ನೀಡಿದೆ. ನಾಲ್ಕನೇ ಎಸೆತದಲ್ಲಿ ಜಾನಿ ಬೇಸ್ಟೊ ವಿಕೆಟ್‌ ಪಡೆದು ನನ್ನ ನಿರ್ಧಾರವನ್ನು ಸಮರ್ಥಿಸಿದರು. ರಾತ್ರಿ ಇಬ್ಬನಿ ಬೀಳುತ್ತಿದ್ದುದರಿಂದ ಯಾರ್ಕರ್‌ ಮತ್ತು ನಿಧಾನ‌ಗತಿಯ ಎಸೆತಗಳನ್ನು ಹಾಕುವುದು ಸವಾಲಿನದ್ದಾಗಿತ್ತು. ಹೀಗಿದ್ದರೂ ನಮ್ಮ ಬೌಲರ್‌ಗಳು ಯೋಜನೆಯನ್ನು ಕಾರ್ಯಗತಗೊಳಿಸಲು ಶ್ರಮಿಸಿದರು’ ಎಂದು ಅಶ್ವಿನ್‌, ಬೌಲರ್‌ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

 ‘ಆರಂಭದ ಕೆಲ ಪಂದ್ಯಗಳಲ್ಲಿ ಅಂದುಕೊಂಡಂತೆ ಆಡಲು ಆಗಿರಲಿಲ್ಲ. ಸನ್‌ರೈಸರ್ಸ್‌ ಎದುರು ಅರ್ಧಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದು ಸಂತಸ ನೀಡಿದೆ’ ಎಂದು ಕಿಂಗ್ಸ್‌ ಇಲೆವನ್‌ ಆಟಗಾರ ಕೆ.ಎಲ್‌.ರಾಹುಲ್‌ ಹೇಳಿದರು.

ಸೋಮವಾರದ ಹೋರಾಟದಲ್ಲಿ ಅಜೇಯ 71ರನ್‌ ಗಳಿಸಿದ್ದ ರಾಹುಲ್‌, ‘ಪಂದ್ಯಶ್ರೇಷ್ಠ’ ಗೌರವಕ್ಕೆ ಭಾಜನರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !