ಭಾನುವಾರ, ನವೆಂಬರ್ 1, 2020
19 °C

IPL-2020 | DC vs CSK: ಚೆನ್ನೈಗೆ 6ನೇ ಸೋಲು; ಡೆಲ್ಲಿಗೆ 7ನೇ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾರ್ಜಾ: ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 180 ರನ್‌ಗಳ ಸವಾಲಿನ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಇನ್ನೂ 1 ಎಸೆತ ಬಾಕಿ ಇರುವಂತೆಯೇ ತಲುಪಿತು. ಇದರೊಂದಿಗೆ ಟೂರ್ನಿಯಲ್ಲಿ ಆಡಿರುವ 9 ಪಂದ್ಯಗಳಲ್ಲಿ ಡೆಲ್ಲಿ 7ನೇ ಗೆಲುವು ಸಾಧಿಸಿದರೆ, ಚೆನ್ನೈ 6ನೇ ಸೋಲು ಅನುಭವಿಸಿತು.

ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 179 ರನ್‌ ಗಳಿಸಿತ್ತು. ಅರ್ಧಶತಕ ಗಳಿಸಿದ ಫಾಫ್‌ ಡು ಪ್ಲೆಸಿ (58), ಕೊನೆಯಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಅಂಬಟಿ ರಾಯುಡು (42) ಮತ್ತು ರವಿಂದ್ರ ಜಡೇಜಾ (33) ಸವಾಲಿನ ಮೊತ್ತ ಕಲೆಹಾಕಲು ನೆರವಾಗಿದ್ದರು.

ಈ ಗುರಿ ಎದುರು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ಖಾತೆ ತೆರೆಯುವ ಮೊದಲೇ ಆರಂಭಿಕ ಪೃಥ್ವಿ ಶಾ ವಿಕೆಟ್ ಕಳೆದುಕೊಂಡಿತು. ಬಳಿಕ ಬಂದ ಅಜಿಂಕ್ಯ ರಹಾನೆ (8) ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ ಬಳಿಕ ನಾಯಕ ಶ್ರೇಯಸ್‌ ಅಯ್ಯರ್‌ (23) ಹಾಗೂ ಮಾರ್ಕಸ್‌ ಸ್ಟೋಯಿನಸ್‌ (24) ಜೊತೆಗೂಡಿದ ಧವನ್‌ ಇನಿಂಗ್ಸ್‌ ಬೆಳೆಸಿದರು.

ಮೂರನೇ ವಿಕೆಟ್‌ಗೆ ಅಯ್ಯರ್‌ ಜೊತೆ 68 ರನ್‌ ಕೂಡಿಸಿದ ಧವನ್‌, 4ನೇ ವಿಕೆಟ್‌ಗೆ ಸ್ಟೋಯಿನಸ್‌ ಜೊತೆ 43 ರನ್‌ ಕಲೆಹಾಕಿದರು. ನಂತರ ಬಂದ ಕಾರಿ ಕೇವಲ 4 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ಎದೆಗುಂದದೆ ಆಡಿದ ಧವನ್‌ ಐಪಿಎಲ್‌ನಲ್ಲಿ ತಮ್ಮ ಮೊದಲ ಶತಕವನ್ನು ದಾಖಲಿಸಿದರು.

ಕೇವಲ 58 ಎಸೆತಗಳನ್ನು ಎದುರಿಸಿದ ಅವರು‌, 14 ಬೌಂಡರಿ ಮತ್ತು 1 ಸಿಕ್ಸರ್‌ ಸಹಿತ 101 ರನ್‌ ಬಾರಿಸಿ ಅಜೇಯರಾಗಿ ಉಳಿದರು.

ಜಯ ತಂದ ಅಕ್ಷರ್ ‘ಸಿಕ್ಸರ್’
ಡೆಲ್ಲಿ ತಂಡ ಕೊನೆಯ ಓವರ್‌ನಲ್ಲಿ 17 ರನ್‌ ಗಳಿಸಬೇಕಿತ್ತು. ಬೌಲಿಂಗ್ ಮಾಡಿದ ರವೀಂದ್ರ ಜಡೇಜಾ ಮೊದಲ ಎಸೆತದ ವೈಡ್‌ ಹಾಕಿದರು. ಸ್ಟೈಕ್‌ನಲ್ಲಿದ್ದ ಧವನ್‌ ನಂತರದ ಎಸೆತದಲ್ಲಿ ಒಂದು ರನ್‌ ತೆಗೆದುಕೊಂಡರು. ನಂತರದ ಎರಡು ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದ ಅಕ್ಷರ್ ಪಟೇಲ್‌, ನಾಲ್ಕನೇ ಎಸೆತದಲ್ಲಿ 2 ರನ್‌ ಗಳಿಸಿಕೊಂಡರು. ಐದನೇ ಎಸೆತವನ್ನು ಮತ್ತೆ ಸಿಕ್ಸರ್‌ ಕಳುಹಿಸುವ ಮೂಲಕ ತಮ್ಮ ತಂಡಕ್ಕೆ ಇನ್ನೂ ಒಂದು ಎಸೆತ ಬಾಕಿ ಇರುವಂತೆಯೇ ಗೆಲುವು ತಂದುಕೊಟ್ಟರು. ಇನಿಂಗ್ಸ್‌ನಲ್ಲಿ ಕೇವಲ 5 ಎಸೆತಗಳನ್ನು ಎದುರಿಸಿದ ಅವರು 21 ರನ್‌ ಚಚ್ಚಿದರು.

ಚೆನ್ನೈ: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 179 ರನ್‌
ಡೆಲ್ಲಿ: 19.5 ಓವರ್‌ಗಳಲ್ಲಿ 5 ವಿಕೆಟ್‌ಗೆ 185 ರನ್‌

ಈ ಜಯದೊಂದಿಗೆ ಡೆಲ್ಲಿ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು