ಬುಧವಾರ, ಅಕ್ಟೋಬರ್ 28, 2020
28 °C

IPL-2020 | KKR vs KXIP: ಕೆಎಲ್‌ ಪಡೆಗೆ ಸತತ 5ನೇ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಬುಧಾಬಿ: ಕೋಲ್ಕತ್ತ ನೈಟ್‌ರೈಡರ್ಸ್ ನೀಡಿದ ಸ್ಪರ್ಧಾತ್ಮಕ ಗುರಿ ಎದುರು ಆರಂಭದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ, ಕೊನೆಯಲ್ಲಿ ಎಡವಿದ ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡ ಕೇವಲ 2 ರನ್‌ ಅಂತರದ ಸೋಲೊಪ್ಪಿಕೊಂಡಿತು. ಇದರೊಂದಿಗೆ ಈ ತಂಡ ಟೂರ್ನಿಯಲ್ಲಿ ಸತತ ಐದನೇ ಸೋಲು ಅನುಭವಿಸಿತು.

ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ ತಂಡ ನಾಯಕ ದಿನೇಶ್‌ ಕಾರ್ತಿಕ್‌ ಮತ್ತು ಆರಂಭಿಕ ಶುಭಮನ್‌ ಗಿಲ್‌ ಬಾರಿಸಿದ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 164 ರನ್‌ ಗಳಿಸಿತ್ತು. ಕಿಂಗ್ಸ್‌ ಶಿಸ್ತಿನ ದಾಳಿ ಎದುರು ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಶುಭಮನ್‌ 47 ಎಸೆತಗಳಲ್ಲಿ 53 ರನ್‌ ಗಳಿಸಿದರೆ, ಬಿರುಸಾಗಿ ಬ್ಯಾಟ್‌ ಬೀಸಿದ ದಿನೇಶ್‌ 29 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ ಸಹಿತ 58 ರನ್‌ ಬಾರಿಸಿದ್ದರು.

ಈ ಗುರಿ ಎದುರು ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಮಯಂಕ್‌ ಅಗರವಾಲ್‌ ಮತ್ತು ಕೆಎಲ್‌ ರಾಹುಲ್‌ ಜೋಡಿ 14.2 ಓವರ್‌ಗಳಲ್ಲಿ 115 ರನ್‌ ಗಳಿಸಿತು. ಇದರೊಂದಿಗೆ ಈ ಆರಂಭಿಕ ಜೋಡಿ, ಟೂರ್ನಿಯಲ್ಲಿ ಎರಡನೇ ಬಾರಿಗೆ ಶತಕದ‌ ಜೊತೆಯಾಟವಾಡಿತು. ಮಯಂಕ್‌ 39 ಎಸೆತಗಳಲ್ಲಿ 56 ರನ್‌ ಗಳಿಸಿ ಔಟಾದರು. ಬಳಿಕ ನಾಯಕನಿಗೆ ಜೊತೆಯಾದ ನಿಕೋಲಸ್‌ ಪೂರನ್‌ 16 ರನ್‌ ಗಳಿಸಿ 18ನೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದರು.

ತಿರುವು ನೀಡಿದ ಪ್ರಸಿದ್ಧ
ಕಿಂಗ್ಸ್‌ ತಂಡ 18 ಓವರ್‌ ಮುಕ್ತಾಯವಾದಾಗ ಕೇವಲ 2 ವಿಕೆಟ್‌ ಕಳೆದುಕೊಂಡು 145 ರನ್‌ ಗಳಿಸಿತ್ತು. ಆದರೆ 19ನೇ ಓವರ್  ಬೌಲಿಂಗ್‌ ಮಾಡಿದ ಪ್ರಸಿದ್ಧ ಕೃಷ್ಣ ಪಂದ್ಯಕ್ಕೆ ತಿರುವು ನೀಡಿದರು. 58 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 74 ರನ್‌ ಬಾರಿಸಿದ್ದ ರಾಹುಲ್‌ ಮತ್ತು ಪ್ರಬ್ಸಿಮ್ರನ್‌ ಸಿಂಗ್‌ (5) ಅವರು ಈ ಓವರ್‌ನಲ್ಲಿ ವಿಕೆಟ್‌ ಕಳೆದುಕೊಂಡರು. ಇದು ಕಿಂಗ್ಸ್‌ ಪಾಲಿಗೆ ಮುಳುವಾಯಿತು.

ಕಿಂಗ್ಸ್‌ಗೆ ಗೆಲ್ಲಲು ಕೊನೆಯ ಓವರ್‌ನಲ್ಲಿ 14 ರನ್‌ ಬೇಕಾಗಿತ್ತು. ಗ್ಲೇನ್‌ ಮ್ಯಾಕ್ಸ್‌ವೆಲ್‌ ಮತ್ತು ಮನ್‌ದೀಪ್‌ ಸಿಂಗ್‌ ಕ್ರೀಸ್‌ನಲ್ಲಿದ್ದರು. ಸುನೀಲ್‌ ನರೇನ್‌ ಎಸೆದ 20ನೇ ಓವರ್‌ನಲ್ಲಿ ಈ ಜೋಡಿ ಕೇವಲ 11 ರನ್‌ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಕೆಕೆಆರ್‌ ಕೇವಲ 2 ರನ್‌ ಅಂತರದ ಗೆಲುವು ಸಾಧಿಸಿತು.

ಕೆಕೆಆರ್‌ ಪರ ಪ್ರಸಿದ್ಧ ಕೃಷ್ಣ ಮೂರು ವಿಕೆಟ್ ಪಡೆದರೆ, ಸುನೀಲ್‌ ರೇನ್‌ 2 ವಿಕೆಟ್‌ ಕಬಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು