ಮಂಗಳವಾರ, ನವೆಂಬರ್ 24, 2020
22 °C
ವರುಣನ ಆರ್ಭಟಕ್ಕೆ ನಲುಗಿದ ಡೆಲ್ಲಿ

IPL-2020 | DC vs KKR: ಬಲಿಷ್ಠ ಅಯ್ಯರ್ ಬಳಗಕ್ಕೆ ಆಘಾತ ನೀಡಿದ ಕೋಲ್ಕತ್ತ

ಪಿಟಿಐ Updated:

ಅಕ್ಷರ ಗಾತ್ರ : | |

ಅಬುಧಾಬಿ: ಲೆಗ್‌ಸ್ಪಿನ್ನರ್ ವರುಣ ಚಕ್ರವರ್ತಿ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಆಘಾತ ನೀಡಿದರು.

ವಿಕೆಟ್‌ಗಳ ಪಂಚಗುಚ್ಛ ಗಳಿಸಿದ ವರುಣ (20ಕ್ಕೆ5) ಕೋಲ್ಕತ್ತ ನೈಟ್ ರೈಡರ್ಸ್‌ ತಂಡಕ್ಕೆ 59 ರನ್‌ಗಳ ಜಯದ ಕಾಣಿಕೆ ನೀಡಿದರು. ತಮಿಳುನಾಡು ರಣಜಿ ತಂಡಕ್ಕೆ ಆಡುವ ಚಕ್ರವರ್ತಿ ಜನಿಸಿದ್ದು ಕರ್ನಾಟದ ಬೀದರ್‌ನಲ್ಲಿ.

ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡೆಲ್ಲಿ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ನಿತೀಶ್ ರಾಣಾ (81; 53ಎಸೆತ, 13ಬೌಂಡರಿ, 1ಸಿಕ್ಸರ್) ಮತ್ತು ಸುನೀಲ್ ನಾರಾಯಣ (64; 32ಎ, 6ಬೌಂ, 4ಸಿ) ಅವರಿಬ್ಬರ ಭರ್ಜರಿ ಅರ್ಧಶತಕಗಳ ನೆರವಿನಿಂದ ತಂಡವು 6 ವಿಕೆಟ್‌ಗಳಿಗೆ 194 ರನ್ ಗಳಿಸಿತು.  ಈ ಗುರಿಯನ್ನು ಬೆನ್ನತ್ತಿದ ಅಯ್ಯರ್ ಬಳಗವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 135 ರನ್ ಗಳಿಸಿ ಸೋತಿತು.

ಡೆಲ್ಲಿ ಆರಂಭಿಕ ಜೋಡಿ ಅಜಿಂಕ್ಯ ರಹಾನೆ ಮತ್ತು ಶಿಖರ್ ಧವನ್ ಇಬ್ಬರೂ ವೈಫಲ್ಯ ಅನುಭವಿಸಿದ್ದು ತಂಡಕ್ಕೆ ಮುಳುವಾಯಿತು. ಹೋದ ಎರಡೂ ಪಂದ್ಯಗಳಲ್ಲಿ ಶತಕ ಬಾರಿಸಿದ್ದ ಶಿಖರ್ ದಾಖಲೆ ಬರೆದಿದ್ದರು. ಅವರಿಬ್ಬರನ್ನೂ ಪ್ಯಾಟ್ ಕಮಿನ್ಸ್‌ ಪೆವಿಲಿಯನ್‌ಗೆ ಕಳಿಸಿದರು.

ನಾಯಕ ಶ್ರೇಯಸ್ (47 ರನ್) ಮತ್ತು ರಿಷಭ್ ಪಂತ್ (27ರನ್) ಸ್ವಲ್ಪಮಟ್ಟಿನ ಹೋರಾಟ ತೋರಿದರು. ಆದರೆ, ತಮಿಳುನಾಡಿನ ಚಕ್ರವರ್ತಿಯ ಸ್ಪಿನ್ ಮೋಡಿಗೆ ಶ್ರೇಯಸ್, ರಿಷಭ್, ಶಿಮ್ರೊನ್ ಹೆಟ್ಮೆಯರ್, ಮಾರ್ಕಸ್‌ ಸ್ಟೋಯಿನಿಸ್ ಮತ್ತು ಅಕ್ಷರ್ ಪಟೇಲ್ ತಲೆಬಾಗಿದರು.  ಈ ಸಲದ ಟೂರ್ನಿಯಲ್ಲಿ ಐದು ವಿಕೆಟ್ ಗೊಂಚಲು ಪಡೆದ ಮೊದಲ ಬೌಲರ್ ಹೆಗ್ಗಳಿಕೆಗೆ ಚಕ್ರವರ್ತಿ ಪಾತ್ರರಾದರು. ಇನ್ನುಳಿದ ಕೆಲಸವನ್ನು ಕಮಿನ್ಸ್ ಮತ್ತು ಲಾಕಿ ಫರ್ಗ್ಯುಸನ್ ಮಾಡಿದರು.

ಹೋದ ಪಂದ್ಯದಲ್ಲಿ ಆರ್‌ಸಿಬಿ ಎದುರು ನೂರು ರನ್‌ ಗಳಿಸಲು ಕೂಡ ಸಾಧ್ಯವಾಗದೇ ಪರದಾಡಿದ್ದ ಕೆಕೆಆರ್ ಇಲ್ಲಿ ಮರಳಿ ಅರಳಿದ ರೀತಿ ಆಕರ್ಷಕವಾಗಿತ್ತು. ಈ ಜಯದೊಂದಿಗೆ ಒಟ್ಟು 12 ಅಂಕಗಳನ್ನು ಕೋಲ್ಕತ್ತ ಗಳಿಸಿದೆ. ನಾಲ್ಕನೇ ಸ್ಥಾನಕ್ಕೇರಿದೆ. ತಂಡವು ಟೂರ್ನಿಯಲ್ಲಿ ಇನ್ನೂ ಮೂರು ಪಂದ್ಯಗಳನ್ನು ಆಡಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು