ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | ಧೋನಿಗೆ ಇಂದು 200ನೇ ಪಂದ್ಯ: ಒಲಿಯುವುದೇ ಜಯ?

Last Updated 18 ಅಕ್ಟೋಬರ್ 2020, 19:21 IST
ಅಕ್ಷರ ಗಾತ್ರ

ಅಬುಧಾಬಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಸೋಮವಾರ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯಲ್ಲಿ ‘ದ್ವಿಶತಕ’ ಸಾಧನೆ ಮಾಡಿದ ಮೊದಲ ಆಟಗಾರನಾಗಲಿದ್ದಾರೆ!

ಇಲ್ಲಿ ನಡೆಯಲಿರುವ ರಾಜಸ್ಥಾನ ರಾಯಲ್ಸ್‌ ತಂಡದ ಎದುರಿನ ಹಣಾಹಣಿಯು ಧೋನಿಗೆ 200ನೇ ಪಂದ್ಯವಾಗಲಿದೆ. ಈ ಟೂರ್ನಿಯಲ್ಲಿ ಉಭಯ ತಂಡಗಳು ಇಲ್ಲಿಯವರೆಗಿನ ಸೋಲು–ಗೆಲುವುಗಳಲ್ಲಿ ಸಮಾನ ಸ್ಥಿತಿಯಲ್ಲಿವೆ. ಆದರೆ ತಮ್ಮ ಇನ್ನೂರನೇ ಪಂದ್ಯವನ್ನು ಗೆದ್ದು ಅವಿಸ್ಮರಣೀಯಗೊಳಿಸಿಕೊಳ್ಳಲು ಧೋನಿ ಚಿತ್ತ ನೆಟ್ಟಿದ್ದಾರೆ. ಅಲ್ಲದೇ ಪ್ಲೇ ಆಫ್‌ ಪ್ರವೇಶಿಸಬೇಕಾದರೆ ಇನ್ನುಳಿದಿರುವ ಐದು ಪಂದ್ಯಗಳಲ್ಲಿ ಜಯಿಸುವ ಒತ್ತಡವೂ ಅವರ ಮೇಲಿದೆ.

ಈ ಎರಡೂ ತಂಡಗಳು ತಲಾ ಒಂಬತ್ತು ಪಂದ್ಯಗಳನ್ನು ಆಡಿವೆ. ಮುಂದಿನ ಹಾದಿಯು ತಂತಿ ಮೇಲಿನ ನಡಿಗೆಯಂತಿದೆ. ಸಿಎಸ್‌ಕೆ ಆರು ಮತ್ತು ರಾಜಸ್ಥಾನ ಏಳನೇ ಸ್ಥಾನಗಳಲ್ಲಿವೆ. ಮೊದಲ ಸುತ್ತಿನ ಪಂದ್ಯದಲ್ಲಿ ಚೆನ್ನೈ ರಾಜಸ್ಥಾನ ಎದುರು ಸೋತಿತ್ತು. ಇದೀಗ ಆ ಸೇಡು ತೀರಿಸಿಕೊಳ್ಳುವ ಅವಕಾಶ ತಂಡಕ್ಕೆ ಇದೆ. ಎರಡು ದಿನಗಳ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್‌ ಎದುರಿನ ಪಂದ್ಯದಲ್ಲಿ ಫಾಫ್ ಡುಪ್ಲೆಸಿ, ರವೀಂದ್ರಜಡೇಜ ಮತ್ತು ಅಂಬಟಿ ರಾಯುಡು ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು.

ಆದರೆ, ಬೌಲಿಂಗ್‌ ಯೋಜನೆಯಲ್ಲಿ ಚೆನ್ನೈ ಪೆಟ್ಟು ತಿಂದಿತ್ತು. ಪಂದ್ಯದ ಕೊನೆಯ ಓವರ್‌ ಬೌಲಿಂಗ್ ಮಾಡಲು ರವೀಂದ್ರ ಜಡೇಜ ಅವರಿಗೆ ನೀಡಿದ್ದ ಧೋನಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಟೀಕೆಗಳು ವ್ಯಕ್ತವಾಗಿವೆ. ಆಲ್‌ರೌಂಡರ್‌ ಡ್ವೇನ್ ಬ್ರಾವೊ ತೊಡೆಯ ಗಾಯದಿಂದಾಗಿ ಈ ಪಂದ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ. ಆದ್ದರಿಂದ ಅವರ ಬದಲಿಗೆ ಜೋಶ್ ಹ್ಯಾಜಲ್‌ವುಡ್ ಸ್ಥಾನ ಪಡೆಯಬಹುದು. ದೀಪಕ್ ಚಾಹರ್, ಸ್ಯಾಮ್ ಕರನ್, ಕರ್ಣ ಶರ್ಮಾ ಮತ್ತು ಶಾರ್ದೂಲ್ ಠಾಕೂರ್ ಅವರ ಬೌಲಿಂಗ್ ಪಡೆ ಹೆಚ್ಚು ನಿಖರ ಎಸೆತಗಳನ್ನು ಪ್ರಯೋಗಿಸಬೇಕಿದೆ.

ಏಕೆಂದರೆ ಸ್ಟೀವನ್ ಸ್ಮಿತ್, ರಾಬಿನ್ ಉತ್ತಪ್ಪ, ಸಂಜು ಸ್ಯಾಮ್ಸನ್, ರಾಹುಲ್ ತೆವಾಟಿಯಾ, ಜೋಸ್ ಬಟ್ಲರ್ ಮತ್ತು ಬೆನ್ ಸ್ಟೋಕ್ಸ್ ಅವರ ಬ್ಯಾಟಿಂಗ್‌ ನಿಯಂತ್ರಿಸುವುದು ಸುಲಭವಲ್ಲ. ಹಾಗೆಯೇ ರಾಯಲ್ಸ್‌ನ ವೇಗಿ ಜೋಫ್ರಾ ಆರ್ಚರ್, ಕಾರ್ತಿಕ್ ತ್ಯಾಗಿ ಮತ್ತು ಶ್ರೇಯಸ್ ಗೋಪಾಲ್ ಅವರನ್ನು ಎದುರಿಸಲು ಚೆನ್ನೈ ಬ್ಯಾಟಿಂಗ್ ಪಡೆ ಹೆಚ್ಚು ಶ್ರಮಪಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT