ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಇಂಡಿಯನ್ಸ್‌ಗೆ ರೋಚಕ ಗೆಲುವು

10 ಸಿಕ್ಸರ್ ಸಿಡಿಸಿದ ಪೊಲಾರ್ಡ್‌, ಏಳು ಸಿಕ್ಸರ್ ಗಳಿಸಿದ ಕ್ರಿಸ್‌ ಗೇಲ್: ವಾಂಖೆಡೆಯಲ್ಲಿ ರಾಹುಲ್ ಶತಕ ವೈಭವ
Last Updated 10 ಏಪ್ರಿಲ್ 2019, 19:39 IST
ಅಕ್ಷರ ಗಾತ್ರ

ಮುಂಬೈ: ಸೋಲಿನ ಸುಳಿಯಿಂದ ತಂಡವನ್ನು ಮೇಲೆತ್ತಿದ ವೆಸ್ಟ್ ಇಂಡೀಸ್‌ನ ದೈತ್ಯ ಬ್ಯಾಟ್ಸ್‌ಮನ್‌ ಕೀರನ್ ಪೊಲಾರ್ಡ್‌ ವಾಂಖೆಡೆ ಕ್ರೀಡಾಂಗಣದಲ್ಲಿ ಸಿಕ್ಸರ್ ಮಳೆ ಸುರಿಸಿದರು. 10 ಸಿಕ್ಸರ್ ಒಳಗೊಂಡಂತೆ 31 ಎಸೆತಗಳಲ್ಲಿ 83 ರನ್ ಗಳಿಸಿದ ಅವರು ಮುಂಬೈ ಇಂಡಿಯನ್ಸ್‌ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್‌.ರಾಹುಲ್‌ (100; 64 ಎಸೆತ, 6 ಸಿಕ್ಸರ್‌, 6 ಬೌಂಡರಿ) ಅವರ ಅಬ್ಬರದ ಆಟದ ನೆರವಿನಿಂದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 197 ರನ್‌ ಗಳಿಸಿತ್ತು. ಕಠಿಣ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ ಆರಂಭದಿಂದಲೇ ರನ್ ಗಳಿಕೆಗೆ ಒತ್ತು ನೀಡಿತು. ಆದರೆ ವಿಕೆಟ್‌ಗಳು ಕಳೆದುಕೊಂಡ ಕಾರಣ ಒಂದು ಹಂತದಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಈ ಸಂದರ್ಭದಲ್ಲಿ ಪೊಲಾರ್ಡ್‌ ಛಲದಂಕ ಮಲ್ಲನಂತೆ ಕ್ರೀಸ್‌ನಲ್ಲಿ ತಳವೂರಿದರು. ಅಂತಿಮ ಓವರ್‌ನಲ್ಲಿ ಅವರು ಔಟಾದರು. ಆದರೆ ವೆಸ್ಟ್ ಇಂಡೀಸ್‌ನ ಮತ್ತೊಬ್ಬ ಆಟಗಾರ ಅಲ್ಜಾರಿ ಜೋಸೆಫ್‌ ಗೆಲುವಿನ ರನ್ ಗಳಿಸಿ ಸಂಭ್ರಮ ಉಕ್ಕಿಸಿದರು.

ರಾಹುಲ್ ಅಬ್ಬರದ ಆಟ: ಕನ್ನಡಿಗ ಕೆ.ಎಲ್. ರಾಹುಲ್ ಶತಕದ ಅಬ್ಬರ ಮತ್ತು ಕ್ರಿಸ್ ಗೇಲ್ ಅರ್ಧಶತಕದ ಮಿಂಚಿನ ಆಟದ ಬಲದಿಂದ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡ ಉತ್ತಮ ಮೊತ್ತ ಕಲೆ ಹಾಕಿತು. ಮುಂಬೈ ತಂಡದ ಬಲಿಷ್ಟ ಬೌಲರ್‌ಗಳ ಎಸೆತಗಳನ್ನು ರಾಹುಲ್ ಪುಡಿಗಟ್ಟಿದರು.

ರಾಹುಲ್ ಮತ್ತು ಗೇಲ್ 12.5 ಓವರ್‌ಗಳವರೆಗೆ ಬ್ಯಾಟಿಂಗ್ ಮಾಡಿದರು. ಗೇಲ್ ಎತ್ತಿದ ಏಳು ಸಿಕ್ಸರ್‌ಗಳು ಮತ್ತು ಮೂರು ಬೌಂಡರಿಗಳಿಂದಾಗಿ ಮುಂಬೈ ತಂಡದಲ್ಲಿ ಚಿಂತೆಯ ಕಾರ್ಮೋಡ ಆವರಿಸಿತ್ತು. ರಾಹುಲ್ ಆಕರ್ಷಕ ಶೈಲಿಯ ಬ್ಯಾಟಿಂಗ್ ಮೂಲಕ ಮಿಂಚಿದರು. ಹೋದ ಪಂದ್ಯದಲ್ಲಿ ಅವರು ಮಯಂಕ್ ಅಗರವಾಲ್ ಜೊತೆಗೂಡಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದ್ದರು. ಅವರು ಶತಕ ಪೂರೈಸಿದ ಸಂದರ್ಭದಲ್ಲಿ ಮುಂಬೈ ತಂಡದಲ್ಲಿರುವ ಅವರ ‘ಗೆಳೆಯ’ ಹಾರ್ದಿಕ್ ಪಾಂಡ್ಯ ಓಡಿ ಬಂದು ಅಭಿನಂದಿಸಿದರು. ಮೊದಲ ವಿಕೆಟ್‌ಗೆ ರಾಹುಲ್ ಮತ್ತು ಗೇಲ್ 116 ರನ್‌ಗಳನ್ನು ಸೇರಿಸಿದರು. 13ನೇ ಓವರ್‌ನಲ್ಲಿ ಕ್ರಿಸ್‌ ಗೇಲ್ ಔಟಾದ ನಂತರ ಬಂದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಆಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT