ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌: ಪ್ಲಾಸ್ಟಿಕ್‌ ಕಸ ಹೆಕ್ಕಲು ‘ಪ್ಲಾಗ್‌ ರನ್‌’

ಎಲ್ಲ ಯುಗಾದಿ ಸಡಗರದಲ್ಲಿರುವಾಗ, ಇವರು ಕಸ ಹೆಕ್ಕುತ್ತಿದ್ದರು
Last Updated 7 ಏಪ್ರಿಲ್ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಜನರೆಲ್ಲ ಯುಗಾದಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರೆ, ಈ ತಂಡಗಳ ಸದಸ್ಯರು ಮಾತ್ರ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಪೌರಕಾರ್ಮಿಕರ ಜೊತೆ ಈ ಸ್ವಯಂಸೇವಕರು ಪ್ಲಾಸ್ಟಿಕ್‌ ಮತ್ತಿತರ ಕಸವನ್ನು ಹೆಕ್ಕುವ ಕಾರ್ಯದಲ್ಲಿ ನಿರತರಾಗಿದ್ದರು.

ಎಂ.ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದ ಹೊರಭಾಗದಲ್ಲಿ ಮತ್ತು ಕಬ್ಬನ್‌ ಉದ್ಯಾನದ ಪ್ರದೇಶದಲ್ಲಿ, ಐಪಿಎಲ್‌ ಕ್ರಿಕೆಟ್‌ ಪಂದ್ಯದ ಸಂದರ್ಭದಲ್ಲಿ ಉಂಟಾದ ಕಸವನ್ನು ಈ ಸ್ವಯಂಸೇವಕರ ತಂಡ ಸ್ವಚ್ಛಗೊಳಿಸಿತು.

‘ನನ್ನ ಕಸ– ಜನ್ನ ಜವಾಬ್ದಾರಿ’, ‘ಎಸೆಯುವ ಮುನ್ನ ಯೋಚಿಸಿ’ ಎಂಬ ಘೋಷವಾಕ್ಯಗಳನ್ನು ಇಟ್ಟುಕೊಂಡು ಬೆಂಗಳೂರು ಎಕೊ, ಗ್ರೀನ್‌ ರೋಡಿಸ್‌, ರನ್ನರ್ಸ್‌ 360, ರಾಬಿನ್‌ವುಡ್‌ ಆರ್ಮಿ ಸಂಸ್ಥೆಗಳು ಶನಿವಾರ ಹಮ್ಮಿಕೊಂಡಿದ್ದ 'ಪ್ಲಾಗ್‌ ರನ್‌– ಪೋಸ್ಟ್‌ ಐಪಿಎಲ್‌' ಅಭಿಯಾನದಲ್ಲಿ 50ಕ್ಕೂ ಅಧಿಕ ಜನ ಭಾಗವಹಿಸಿದರು.

ಕಸ ಹೆಕ್ಕುವ ಕಾರ್ಯ ಬೆಳಿಗ್ಗೆ 6.30ಕ್ಕೆ ಆರಂಭವಾಗಿ ಬೆಳಿಗ್ಗೆ 8.30ಕ್ಕೆ ಮುಕ್ತಾಯಗೊಂಡಿತು. ಸ್ವಯಂಸೇವಕರು 2 ಗಂಟೆ 15 ಬ್ಯಾಗ್‌ಗಳಷ್ಟು (ಒಂದು ಬ್ಯಾಗ್‌ನಲ್ಲಿ 8–10 ಕೆ.ಜಿ) ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸಿ ಪೌರಕಾರ್ಮಿಕರಿಗೆ ಒಪ್ಪಿಸಿದರು.

ಕಬ್ಬನ್‌ ಉದ್ಯಾನದ ಸುತ್ತಮುತ್ತ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದಲ್ಲಿ ಕ್ರಿಕೆಟ್‌ ಪಂದ್ಯ ವೀಕ್ಷಿಸಿದ ನಂತರ ಪ್ರೇಕ್ಷಕರು ಬಿಸಾಡಿದ್ದ ಪ್ಲಾಸ್ಟಿಕ್‌ ಕಸ ಸಂಗ್ರಹಿಸಿ ‘ಪ್ಲಾಸ್ಟಿಕ್‌ ಮುಕ್ತ’ ನಗರವನ್ನು ನಿರ್ಮಿಸುವ ಜಾಗೃತಿ ಮೂಡಿಸಿದರು.

‘ಕ್ರಿಕೆಟ್‌ ಪಂದ್ಯ ವೀಕ್ಷಿಸಲು ತಿಂಡಿ–ತಿನಿಸುಗಳನ್ನು ಒಯ್ಯುತ್ತಾರೆ. ಪಂದ್ಯದ ಬಳಿಕ ಅವೆಲ್ಲವನ್ನೂ ಎಲ್ಲೆಂದರಲ್ಲಿ ಎಸೆಯುತ್ತಾರೆ. ಹಸಿ ಮತ್ತು ಒಣ ಕಸಗಳನ್ನು ಬೇರ್ಪಡಿಸಿ ಕ್ರೀಡಾಂಗಣದ ಹೊರಭಾಗದ ಮತ್ತು ಒಳಭಾಗದ ಕಸದ ಡಬ್ಬಿಗಳಿಗೆ ಹಾಕುವುದೂ ಇಲ್ಲ. ಮನರಂಜನೆ ಪಡೆಯುವುದು ತಪ್ಪಲ್ಲ. ಆದರೆ, ಸ್ವಚ್ಛತೆಗೂ ಆದ್ಯತೆ ಕೊಡಬೇಕಲ್ಲವೇ’ ಎಂದು ಪ್ರಶ್ನಿಸುತ್ತಾರೆ ಸ್ವಯಂಸೇವಕರಾದ ನಾಗರಾಜು.

‘ದಿನೇ ದಿನೇ ಹೆಚ್ಚುತ್ತಿರುವ ಪ್ಲಾಸ್ಟಿಕ್‌ ಹಾವಳಿಯಿಂದ ಮಾನವನ ಆರೋಗ್ಯದ ದುಷ್ಪರಿಣಾಮ ಉಂಟಾಗುತ್ತಿದೆ. ಇಲ್ಲಿ ಪೌರಕಾರ್ಮಿಕರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಇಷ್ಟೆಲ್ಲ ಕಸ ಸಂಗ್ರಹಿಸಲು ಅವರಿಗೂ ಕಷ್ಟವಾಗುತ್ತಿದೆ. ಸಾರ್ವಜನಿಕರು ಕಸ ಬಿಸಾಡುವ ಮುನ್ನ ಎರಡು ನಿಮಿಷ ಯೋಚಿಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT