ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ತಂಡಕ್ಕೆ ಬೂಮ್ರಾ ಚಾಲೆಂಜ್?

ದಾಖಲೆಯ ಕನಸಲ್ಲಿ ವಿರಾಟ್‌ ಕೊಹ್ಲಿ: ಮುಂಬೈ ತಂಡದ ವೇಗದ ಬೌಲರ್‌ ಲಸಿತ್ ಮಾಲಿಂಗ ಫಿಟ್; ಪಿಚ್‌ ಮೇಲೆ ಎಲ್ಲರ ಕಣ್ಣು: ಯುವರಾಜ್‌ ಆಕರ್ಷಣೆ
Last Updated 27 ಮಾರ್ಚ್ 2019, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ಬ್ಯಾಟ್ಸ್‌ಮನ್‌ಗಳಿಗೆ ಸ್ನೇಹಿಯಾಗಿರುವಂತೆ ಕಾಣುತ್ತಿದೆ ಇಲ್ಲಿಯ ಪಿಚ್. ಉತ್ತಮ ಮೊತ್ತ ಗಳಿಸುವ ವಿಶ್ವಾಸವಿದೆ’

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್‌ ಅವರ ವಿಶ್ವಾಸದ ನುಡಿಗಳಿವು. ಆರ್‌ಸಿಬಿ ತಂಡವು ಗುರುವಾರ ಮುಂಬೈ ಇಂಡಿಯನ್ಸ್ ತಂಡದ ಎದುರು ಆಡಲಿರುವ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಬಗ್ಗೆ ಅವರಿಗೆ ಅಪಾರ ಭರವಸೆ ಇದೆ.

ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಹೋದ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಐಪಿಎಲ್‌ನಲ್ಲಿ ರನ್‌ಗಳ ಹೊಳೆ ಹರಿಸಲು ಉತ್ಸುಕರಾಗಿದ್ದಾರೆ. ಆದರೆ ಚೆನ್ನೈನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಎಬಿಡಿ, ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲ ಪ್ರಮುಖ ದಾಂಡಿಗರು ನೆಲಕಚ್ಚಿದ್ದರು. ಕೇವಲ 70 ರನ್‌ಗಳಿಗೆ ತಂಡ ಆಲೌಟ್ ಆಗಿತ್ತು. ಆದರೆ ಸೂಪರ್ ಕಿಂಗ್ಸ್‌ ಬಳಗವೇನೂ ಸುಲಭವಾಗಿ ಗೆದ್ದಿರಲಿಲ್ಲ. 17.4 ಓವರ್‌ಗಳಲ್ಲಿ ಗುರಿ ಮುಟ್ಟಲು ಬೆವರು ಹರಿಸಿತ್ತು. ಅದರಿಂದಾಗಿ ಅಲ್ಲಿಯ ಪಿಚ್ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು.

ಆದರೆ, ಕಳೆದ ನಾಲ್ಕು ದಿನಗಳಿಂದ ಬಿರುಬಿಸಿಲಿನಲ್ಲಿ ಪಿಚ್‌ ನಿರ್ಮಿಸಿರುವ ಬಿಸಿಸಿಐ–ಕೆಎಸ್‌ಸಿಎ ಸಿಬ್ಬಂದಿಯು ಸ್ಪರ್ಧಾತ್ಮಕ ಆಟಕ್ಕೆ ಒತ್ತು ನೀಡುವ ಪ್ರಯತ್ನ ಮಾಡಿದ್ದಾರೆ ಎನ್ನುವ ವಿಶ್ವಾಸ ಎಬಿಡಿ ಮಾತುಗಳ ಲ್ಲಿತ್ತು. ಐಪಿಎಲ್‌ನಲ್ಲಿ 142 ಪಂದ್ಯಗಳನ್ನು ಆಡಿರುವ ಅವರು ಇನ್ನು 38 ರನ್‌ ಗಳಿಸಿದರೆ, ನಾಲ್ಕು ಸಾವಿರ ರನ್‌ಗಳ ಸರ ದಾರನಾಗಲಿದ್ದಾರೆ. ‘ಫೋರ್‌ ಥೌಸಂಡ್ ಕ್ಲಬ್‌’ಗೆ ಹತ್ತನೇ ಸದಸ್ಯನಾಗಲಿದ್ದಾರೆ. ಅವರ ಗೆಳೆಯ ಮತ್ತು ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಐದು ಸಾವಿರ ರನ್‌ಗಳ ಮೈಲಿಗಲ್ಲು ತಲುಪುವ ಹೊಸ್ತಿಲಲ್ಲಿದ್ದಾರೆ. ಅವರಿಗೆ ಇನ್ನು 46 ರನ್‌ಗಳ ಅವಶ್ಯಕತೆ ಇದೆ.

ವಿಂಡೀಸ್‌ನ ಸಿಡಿಲುಮರಿ ಶಿಮ್ರೊನ್ ಹೆಟ್ಮೆಯರ್‌ ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದರು. ಆದರೆ ಎರಡನೇ ಪಂದ್ಯವನ್ನು ಅವಿಸ್ಮರಣೀಯಗೊಳಿಸುವ ಕಾತರದಲ್ಲಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ ಒಬ್ಬರೇ ಚೆನ್ನೈ ಎದುರು ದಿಟ್ಟತನದಿಂದ ಆಡಿ ಎರಡಂಕಿ ಮೊತ್ತ ಗಳಿಸಿದ್ದರು. ಈ ಪಂದ್ಯದಲ್ಲಿಯೂ ಅವರೊಂದಿಗೆ ಕೊಹ್ಲಿ ಇನಿಂಗ್ಸ್‌ ಆರಂಭಿಸುವರೇ ನೋಡಬೇಕಿದೆ.

ರೋಹಿತ್ ನಾಯಕತ್ವದ ಮುಂಬೈ ಬಳಗದಲ್ಲಿ ಜಸ್‌ಪ್ರೀತ್ ಬೂಮ್ರಾ ಮತ್ತು ಲಸಿತ್ ಮಾಲಿಂಗ್ ಅವರ ಪುನರಾಗಮನವಾಗಿದೆ. ಇವರಿಬ್ಬರೂ ಇಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಲಸಿತ್ ಹೊಸ ಚೆಂಡಿನಲ್ಲಿ ವಿಕೆಟ್ ಕಬಳಿಸುವ ಅನುಭವಿ ವೇಗಿ. ಬೂಮ್ರಾ ಡೆತ್‌ ಓವರ್‌ನಲ್ಲಿ ಬ್ಯಾಟಿಂಗ್ ಪಡೆಯ ಬಾಲ ಕತ್ತರಿಸುವ ಚಾಣಾಕ್ಷ. ಇಬ್ಬರೂ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಬುಧವಾರ ಸಂಜೆ ನೆಟ್ಸ್‌ನಲ್ಲಿ ಬೂಮ್ರಾ ಚುರುಕಾಗಿಯೇ ಬೌಲಿಂಗ್ ಮಾಡಿದರು. ರಿವರ್ಸ್ ಸ್ವಿಂಗ್ ಕೂಡ ಪ್ರಯೋಗಿಸಿದ್ದರು. ಒಂದೊಮ್ಮೆ ಇವರಿಬ್ಬರೂ ಕಣಕ್ಕೆ ಇಳಿದರೆ ಆತಿಥೇಯ ಬ್ಯಾಟಿಂಗ್ ಪಡೆಗೆ ಕಠಿಣ ಸವಾಲು ಎದುರಾಗುವುದು ಖಚಿತ.

ಮುಂಬೈ ತಂಡವು ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ಎದುರು ಸೋಲಲು ಬೌಲಿಂಗ್ ವೈಫಲ್ಯವೇ ಕಾರಣವಾಗಿತ್ತು. ಮಾಲಿಂಗ ಮತ್ತು ಬೂಮ್ರಾ ಅನುಪಸ್ಥಿತಿಯಲ್ಲಿ ಮುಂಬೈ ಮಂಕಾಗಿತ್ತು. ಡೆಲ್ಲಿ ತಂಡವು 213 ರನ್‌ಗಳ ದೊಡ್ಡ ಗುರಿ ನೀಡಿತ್ತು. ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್ ಬೇಗನೆ ಔಟಾಗಿದ್ದರು.

ಆದರೆ, ಅನುಭವಿ ಆಲ್‌ರೌಂಡರ್ ಯುವ ರಾಜ್ ಸಿಂಗ್ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು. ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ, ಬೆನ್ ಕಟಿಂಗ್, ಕೃಣಾಲ್ ಪಾಂಡ್ಯ ಅವರು ಇರುವುದರಿಂದ ಮುಂಬೈ ಬ್ಯಾಟಿಂಗ್ ಬಲ ದೊಡ್ಡದಿದೆ. ಅದನ್ನು ಕಟ್ಟಿ ಹಾಕಲು ಯಜು ವೇಂದ್ರ ಚಾಹಲ್ ನೇತೃತ್ವದ ಬೌಲಿಂಗ್ ಪಡೆಯು ಚೆನ್ನೈನಲ್ಲಿ ಆಡಿ ದಂತೆ ಆಡಿದರೂ ಸಾಕು.

ಪ್ರಮುಖ ಅಂಶಗಳು

* ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡವು ಆರ್‌ಸಿಬಿಯನ್ನು 24ನೇ ಬಾರಿ ಎದುರಿಸುತ್ತಿದೆ. ಇದರೊಂದಿಗೆ ಮುಂಬೈ ತಂಡವು ಒಂದೇ ತಂಡದ ವಿರುದ್ಧ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ತಂಡವಾಗಲಿದೆ. ಬೆಂಗಳೂರು ಮತ್ತು ಚೆನ್ನೈ ತಂಡಗಳು ಇದುವರೆಗೆ 23 ಬಾರಿ ಮುಖಾಮುಖಿಯಾಗಿವೆ.

* ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ಐಪಿಎಲ್‌ನಲ್ಲಿ ಐದು ಸಾವಿರ ರನ್ ಗಡಿ ಮುಟ್ಟಲು 46 ರನ್‌ಗಳ ಅವಶ್ಯಕತೆ ಇದೆ. ಒಂದೇ ತಂಡದ ಪರ ಆಡಿ ಈ ಸಾಧನೆ ಮಾಡಿದ ಮೊದಲ ಆಟಗಾರನೆಂಬ ಶ್ರೇಯಕ್ಕೆ ಅವರು ಪಾತ್ರರಾಗಲಿದ್ದಾರೆ. ಸಿಎಸ್‌ಕೆಯ ಸುರೇಶ್ ರೈನಾ ಈಚೆಗೆ ಐದು ಸಾವಿರ ರನ್ ಗಳಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

* ಆರ್‌ಸಿಬಿಯ ಎಬಿ ಡಿವಿಲಿಯರ್ಸ್ ಅವರು ಇನ್ನು 38 ರನ್‌ ಗಳಿಸಿದರೆ ನಾಲ್ಕು ಸಾವಿರ ರನ್‌ಗಳ ಗಡಿ ತಲುಪುವರು.

* ವಿರಾಟ್ ಕೊಹ್ಲಿ ಅವರು 29 ರನ್‌ ಗಳಿಸಿದರೆ ಮುಂಬೈ ತಂಡದ ಎದುರು 600 ರನ್‌ಗಳನ್ನು ಗಳಿಸಿದ ಸಾಧನೆ ಮಾಡಲಿದ್ದಾರೆ. ಸುರೇಶ್ ರೈನಾ (787), ಶಿಖರ್ ಧವನ್ (629) ಮತ್ತು ಮಹೇಂದ್ರಸಿಂಗ್ ಧೋನಿ (612) ಅವರ ನಂತರದ ಸ್ಥಾನ ಪಡೆಯುವರು.

* ಆರ್‌ಸಿಬಿ ಎದುರು ರೋಹಿತ್ ಶರ್ಮಾ ಈಗಾಗಲೇ 24 ಪಂದ್ಯಗಳನ್ನು ಆಡಲಿದ್ದಾರೆ. ಗುರುವಾರ ಕಣಕ್ಕಿಳಿದರೆ ಆರ್‌ಸಿಬಿ ವಿರುದ್ಧ ಅತಿ ಹೆಚ್ಚು (25) ಪಂದ್ಯಗಳನ್ನು ಆಡಿದ ಮೂರನೇ ಬ್ಯಾಟ್ಸ್‌ಮನ್ ಆಗಲಿದ್ದಾರೆ. ಸುರೇಶ್ ರೈನಾ (27), ಮಹೇಂದ್ರಸಿಂಗ್ ಧೋನಿ (26) ಮೊದಲೆರಡು ಸ್ಥಾನಗಳಲಿದ್ದಾರೆ. ರೋಹಿತ್ ಮುಂಬೈ ತಂಡ ಸೇರುವ ಮೊದಲು ಡೆಕ್ಕನ್ ಚಾರ್ಜರ್ಸ್‌ನಲ್ಲಿ ಆಡಿದ್ದರು.

ತಂಡಗಳು ಇಂತಿವೆ

ರಾಯಲ್ ಚಾಲೆಂಜರ್ಸ್‌ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ಪಾರ್ಥಿವ್ ಪಟೇಲ್ (ವಿಕೆಟ್‌ಕೀಪರ್), ಎಬಿ ಡಿವಿಲಿಯರ್ಸ್, ಮೊಯಿನ್ ಅಲಿ, ಶಿವಂ ದುಬೆ, ಶಿಮ್ರೊನ್ ಹೆಟ್ಮೆಯರ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕುಲವಂತ್ ಖೆಜ್ರೊಲಿಯಾ, ಉಮೇಶ್ ಯಾದವ್, ನೇಥನ್ ಕೌಲ್ಟರ್ ನೈಲ್, ಪವನ್ ನೇಗಿ, ಟಿಮ್ ಸೌಥಿ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಮಾರ್ಕಸ್ ಸ್ಟೊಯಿನಿಸ್, ಅಕ್ಷದೀಪ್ ನಾಥ್, ಗುರುಕೀರತ್ ಸಿಂಗ್ ಮಾನ್, ನವದೀಪ್ ಸೈನಿ, ಟಿಮ್ ಸೌಥಿ, ಮಿಲಿಂದ್ ಕುಮಾರ್.

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಜೇಸನ್ ಬೆಹ್ರೆನ್‌ಡಾರ್ಫ್, ಜಸ್‌ಪ್ರೀತ್ ಬೂಮ್ರಾ, ರಾಹುಲ್ ಚಾಹರ್, ಬೆನ್ ಕಟಿಂಗ್, ಪಂಕಜ್ ಜೈಸ್ವಾಲ್, ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ಇಶಾನ್ ಕಿಶನ್ (ವಿಕೆಟ್‌ಕೀಪರ್), ಸಿದ್ಧಾರ್ಥ್ ಲಾಡ್, ಎವಿನ್ ಲೂಯಿಸ್, ಲಸಿತ್ ಮಾಲಿಂಗ್, ಮಯಂಕ್ ಮಾರ್ಕಂಡೆ, ಮಿಚೆಲ್ ಮೆಕ್ಲೆಂಗಾನ್, ಆ್ಯಡಂ ಮಿಲ್ನೆ, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಕೀರನ್ ಪೊಲಾರ್ಡ್, ಅನುಕೂಲ್ ರಾಯ್, ರಸಿಕ್ ಸಲಾಂ, ಯುವರಾಜ್ ಸಿಂಗ್, ಅನಮೋಲ್ ಪ್ರೀತ್ ಸಿಂಗ್, ಬರಿಂದರ್ ಸರನ್, ಆದಿತ್ಯ ತಾರೆ, ಸೂರ್ಯಕುಮಾರ್ ಯಾದವ್, ಜಯಂತ್ ಯಾದವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT