ಆರ್‌ಸಿಬಿಗೆ ಮೊದಲ ಜಯದ ಕಾಣಿಕೆ ನೀಡಿದ ಎಬಿಡಿ

ಶನಿವಾರ, ಏಪ್ರಿಲ್ 20, 2019
27 °C
ಕ್ರಿಸ್‌ ಗೇಲ್ 99; ಕಿಂಗ್ಸ್‌ ಇಲೆವನ್ ಪಂಜಾಬ್ ತಂಡಕ್ಕೆ ಸೋಲು

ಆರ್‌ಸಿಬಿಗೆ ಮೊದಲ ಜಯದ ಕಾಣಿಕೆ ನೀಡಿದ ಎಬಿಡಿ

Published:
Updated:
Prajavani

ಮೊಹಾಲಿ: ಮರಳುಗಾಡಿನಲ್ಲಿ ಒಯಸಿಸ್‌ ಸಿಕ್ಕಂತೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಅಂತೂ ಜಯ ಲಭಿಸಿತು.

ಇಲ್ಲಿಯ ಐ.ಎಸ್. ಬಿಂದ್ರಾ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಆರ್‌ಸಿಬಿಯು ಎಂಟು ವಿಕೆಟ್‌ಗಳಿಂದ ಕಿಂಗ್ಸ್‌ ಇಲೆವನ್ ಪಂಜಾಬ್ ವಿರುದ್ಧ ಗೆದ್ದಿತು.

ಐಪಿಎಲ್ ಟೂರ್ನಿ ಆರಂಭವಾದ ಇಪ್ಪತ್ತು ದಿನಗಳಲ್ಲಿ ಮೊದಲ ಬಾರಿ ವಿರಾಟ್ ಬಳಗವು ಜಯದ ಕೇಕೆ ಹಾಕಿತು.  ಸತತ ಆರು ಸೋಲುಗಳ ಆವಮಾನ, ಹತಾಶೆಗಳ ಭಾರವನ್ನು ಕಿತ್ತೊಗೆದ ಸಂತಸದಲ್ಲಿ ಕೊಹ್ಲಿ ತಮ್ಮ ಕೋಚ್ ಗ್ಯಾರಿ ಕರ್ಸ್ಟನ್ ಅವರನ್ನು ಅಪ್ಪಿಕೊಂಡು ಸಂಭ್ರಮಿಸಿದರು.

ಕ್ರಿಸ್ ಗೇಲ್ (ಔಟಾಗದೆ 99; 64ಎಸೆತ, 10ಬೌಂಡರಿ, 5 ಸಿಕ್ಸರ್) ಅವರ ಅಬ್ಬರದ ಬಲದಿಂದ ಕಿಂಗ್ಸ್‌ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 173 ರನ್‌ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ  ಆರ್‌ಸಿಬಿಗೆ ನಾಯಕ ವಿರಾಟ್ ಮತ್ತು ಪಾರ್ಥಿವ್ ಪಟೇಲ್ ಉತ್ತಮ ಆರಂಭ ನೀಡಿದರು. ಕೇವಲ 3.5 ಓವರ್‌ಗಳಲ್ಲಿ 43 ರನ್‌ಗಳನ್ನು ಸೇರಿಸಿದರು. ಫಾರ್ಥಿವ್ ಔಟಾದ ನಂತರ ಕೊಹ್ಲಿಯೊಂದಿಗೆ ಸೇರಿಕೊಂಡ ಎಬಿ ಡಿವಿಲಿಯರ್ಸ್‌ ಮತ್ತೊಮ್ಮೆ ಆಪದ್ಭಾಂಧವರಾದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 85 ರನ್‌ ಸೇರಿಸಿದರು.   ವಿರಾಟ್ ಒಟ್ಟು ಎಂಟು ಬೌಂಡರಿಗಳನ್ನು ಹೊಡೆದರು. 53 ಎಸೆತಗಳಲ್ಲಿ 67 ರನ್‌ ಸೇರಿಸಿದರು. 16ನೇ ಓವರ್‌ನಲ್ಲಿ  ಕೊಹ್ಲಿ ಔಟಾದಾಗ ಆತಂಕ ಎದುರಾಯಿತು. ಆದರೆ, ಎಬಿಡಿ (ಔಟಾಗದೆ 59; 38ಎ, 5ಬೌಂ, 2ಸಿಕ್ಸರ್) ಮತ್ತು ಮಾರ್ಕಸ್ ಸ್ಟೊಯಿನಿಸ್ (ಔಟಾಗದೆ 28) ಅವರಿಬ್ಬರೂ ತಂಡವನ್ನು ಗೆಲುವಿನ ದಡ ಸೇರಿಸಿದರು.

ಹಿಂದಿನ ಆರು ಪಂದ್ಯಗಳಲ್ಲಿ ಮಾಡಿದ್ದ ಲೋಪಗಳನ್ನು ಸರಿಪಡಿಸಿಕೊಂಡು ಆಡುವಲ್ಲಿ ಆರ್‌ಸಿಬಿ ಬಹುತೇಕ ಸಫಲವಾಯಿತು. ಆದರೆ ಪ್ಲೇ ಆಫ್‌ ಪ್ರವೇಶಿಸಬೇಕಾದರೆ ಇನ್ನುಳಿದಿರುವ ಏಳು ಪಂದ್ಯಗಳಲ್ಲಿ ಗೆಲ್ಲುವ ಒತ್ತಡ ತಂಡಕ್ಕೆ ಇದೆ.

ಶತಕ ತಪ್ಪಿಸಿಕೊಂಡ ಗೇಲ್: ಕ್ರಿಸ್‌ ಗೇಲ್ ಕೊನೆಯ ಎಸೆತದವರೆಗೂ ಮಿಂಚಿದರು. ಪಂದ್ಯದ ಆರಂಭಕ್ಕೂ ಮುನ್ನ ತಮ್ಮ ಹಳೆಯ ಗೆಳೆಯ ವಿರಾಟ್ ಕೊಹ್ಲಿಯನ್ನು ಆಲಂಗಿಸಿಕೊಂಡು ಬಂದಿದ್ದರು. ಆದರೆ, ಕೊಹ್ಲಿ ಬಳಗದ ಬೌಲರ್‌ಗಳನ್ನು ಸಖತ್ ಕಾಡಿದರು. ಅದರಲ್ಲೂ ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ ಮತ್ತು ಯಜುವೇಂದ್ರ ಚಾಹಲ್ ಅವರನ್ನು ಬೆಂಡೆತ್ತಿದರು. ಇನ್ನೊಂದು ಬದಿಯಲ್ಲಿ ವಿಕೆಟ್‌ಗಳು ಉರುಳುತ್ತಿದ್ದವು. ಆದರೆ ಗೇಲ್ ತಂಡಕ್ಕೆ ಆಸರೆಯಾದರು. ತಂಡದ ಮೊತ್ತದ ಗಳಿಕೆಯ ಗೇಲ್ ಮತ್ತು ಮನದೀಪ್ ಅವರ ಅಬ್ಬರದಿಂದಾಗಿ ಕೊನೆಯ ಐದು ಓವರ್‌ಗಳಲ್ಲಿ 50 ರನ್‌ಗಳು ಸೇರಿದವು. ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಗೇಲ್ ಸಿಕ್ಸರ್‌ ಹೊಡೆಯುವ ಪ್ರಯತ್ನ ಫಲಿಸಲಿಲ್ಲ. ಅದು ಬೌಂಡರಿಗೆ ಮಾತ್ರ ಸೀಮಿತವಾಯಿತು. ಇದರಿಂದಾಗಿ ಗೇಲ್ ಶತಕದ ಪೂರೈಸಲು ಒಂದು ರನ್ ಕಮ್ಮಿಯಾಯಿತು. ನಗುತ್ತ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

ಐಪಿಎಲ್‌ ನಲ್ಲಿ ಈ ರೀತಿ 99 ರನ್‌ ಹೊಡೆದು ಔಟಾಗದೇ ಉಳಿದ ಎರಡನೇ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಗೇಲ್‌ ಪಾತ್ರರಾದರು. ಸುರೇಶ್ ರೈನಾ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ.

ಬರಹ ಇಷ್ಟವಾಯಿತೆ?

 • 13

  Happy
 • 3

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !