ಶುಕ್ರವಾರ, ಅಕ್ಟೋಬರ್ 23, 2020
28 °C

IPL-2020 | RCB vs DC: ಆರ್‌ಸಿಬಿಗೆ 59 ರನ್ ಸೋಲು; ಅಗ್ರಸ್ಥಾನಕ್ಕೇರಿದ ಡೆಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ: ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ ಸವಾಲಿನ ಗುರಿ ಎದುರು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ 9 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 137 ರನ್‌ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಈ ತಂಡ 59 ರನ್‌ ಅಂತರದ ಸೋಲೊಪ್ಪಿಕೊಂಡಿತು.

ಇಲ್ಲಿನ ಅಂತರರಾಷ್ಟ್ರೀಯ ಕ್ರಿಕೆಟ್‌ ಮೈದಾನದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 196 ರನ್ ಗಳಿಸಿತು. ಪೃಥ್ವಿ ಶಾ (42) ಮತ್ತು ಶಿಖರ್‌ ಧವನ್ (32)‌ ಜೋಡಿ ಮೊದಲ ವಿಕೆಟ್‌ ಜೊತೆಯಾಟದಲ್ಲಿ 68 ರನ್‌ಗಳ ಉತ್ತಮ ಅಡಿಪಾಯ ಹಾಕಿಕೊಟ್ಟಿತು. ಆದರೆ ನಂತರ 22 ರನ್‌ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರ ಜೊತೆಗೆ ನಾಯಕ ಶ್ರೇಯಸ್‌ ಅಯ್ಯರ್ (11) ಅವರೂ‌ ಪೆವಿಲಿಯನ್‌ ಸೇರಿಕೊಂಡರು.

ಹೀಗಾಗಿ ಡೆಲ್ಲಿ ತಂಡದ ರನ್‌ ಗಳಿಕೆಗೆ ಕಡಿವಾಣ ಬಿದ್ದಿತು. ಆದರೆ, ನಾಲ್ಕನೇ ವಿಕೆಟ್‌ಗೆ ಜಾವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದ ಮಾರ್ಕಸ್‌ ಸ್ಟೋಯಿನಸ್‌ ಮತ್ತು ರಿಷಭ್‌ ಪಂತ್ (37)‌ ಜೋಡಿ ನಿಧಾನವಾಗಿ ತಂಡದ ಮೊತ್ತವನ್ನು ಏರಿಸಿತು. ಈ ಜೋಡಿ 4ನೇ ವಿಕೆಟ್‌ ಜೊತೆಯಾಟದಲ್ಲಿ 89 ರನ್‌ ಕಲೆಹಾಕಿತು.

ಸ್ಟೋಯಿನಸ್‌ ಕೇವಲ 26 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ ಸಹಿತ 53 ರನ್ ಚಚ್ಚಿದರು. ಹೀಗಾಗಿ ಈ ತಂಡದ ಮೊತ್ತ 190 ರನ್‌ಗಳ ಗಡಿ ದಾಟಿತು.

ಈ ಮೊತ್ತದೆದುರು ಬ್ಯಾಟಿಂಗ್‌ ಆರಂಭಿಸಿದ ಆರ್‌ಸಿಬಿ ಆರಂಭದಲ್ಲೇ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿತು. ಕಳೆದ ಪಂದ್ಯಗಳಲ್ಲಿ ಮಿಂಚಿದ್ದ ದೇವದತ್ತ ಪಡಿಕ್ಕಲ್‌ (4), ಆ್ಯರನ್‌ ಪಿಂಚ್‌ (13), ಎಬಿ ಡಿ ವಿಲಿಯರ್ಸ್‌ (9) ಬೇಗನೆ ವಿಕೆಟ್‌ ಒಪ್ಪಿಸಿದರು. ಅದಾದ ನಂತರವೂ ನಿರಂತರವಾಗಿ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ್ದು, ಮುಳುವಾಯಿತು.

ನಾಯಕ ವಿರಾಟ್ ಕೊಹ್ಲಿ 43 ರನ್‌ ಗಳಿಸಿ ಹೋರಾಟ ನಡೆಸಿದರಾದರೂ ತಮ್ಮ ತಂಡಕ್ಕೆ ಗೆಲುವು ತಂದುಕೊಡಲು ಇದು ಸಾಧ್ಯವಾಗಲಿಲ್ಲ. ಈ ಜಯದೊಂದಿಗೆ ಡೆಲ್ಲಿ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದ್ದು, ಆರ್‌ಸಿಬಿ ಮೂರರಲ್ಲೇ ಉಳಿದಿದೆ.

ಡೆಲ್ಲಿ ಪರ ರಬಾಡ 4 ವಿಕೆಟ್‌ ಕಬಳಿಸಿದರೆ, ಎನ್ರಿಚ್‌ ನೋರ್ಟ್ಜೆ ಹಾಗೂ ಅಕ್ಷರ್‌ ಪಟೆಲ್‌ ತಲಾ ಎರಡು ವಿಕೆಟ್ ಪಡೆದರು. ಇನ್ನೊಂದು ವಿಕೆಟ್ ಆರ್ ಅಶ್ವಿನ್‌ ಪಾಲಾಯಿತು.

ಪರ್ಪಲ್‌ ಕ್ಯಾಪ್‌
ಕೇವಲ 24 ರನ್‌ ನೀಡಿ ಪ್ರಮುಖ 4 ವಿಕೆಟ್‌ಗಳನ್ನು ಉರುಳಿಸಿದ ಡೆಲ್ಲಿ ವೇಗಿ ಕಗಿಸೊ ರಬಾಡ ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್‌ ಕಬಳಿಸಿದ ಬೌಲರ್‌ ಎನಿಸಿದರು. ಟೂರ್ನಿಯಲ್ಲಿ ಆಡಿರುವ 5 ಪಂದ್ಯಗಳಿಂದ ಅವರು 12 ವಿಕೆಟ್‌ ಕಬಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು