ಮುಯ್ಯಿ ತೀರಿಸಿಕೊಳ್ಳುವತ್ತ ರೋಹಿತ್ ಬಳಗದ ಚಿತ್ತ

ಶನಿವಾರ, ಏಪ್ರಿಲ್ 20, 2019
27 °C
ಮುಂಬೈ ಇಂಡಿಯನ್ಸ್‌ –ಕಿಂಗ್ಸ್‌ ಇಲೆವನ್ ಪಂಜಾಬ್ ಹಣಾಹಣಿ ಇಂದು

ಮುಯ್ಯಿ ತೀರಿಸಿಕೊಳ್ಳುವತ್ತ ರೋಹಿತ್ ಬಳಗದ ಚಿತ್ತ

Published:
Updated:
Prajavani

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಎರಡನೇ ಸುತ್ತಿನ ಪಂದ್ಯಗಳು ಬುಧವಾರದಿಂದ ಆರಂಭವಾಗಲಿದೆ.

ಮೊದಲ ಸುತ್ತಿನಲ್ಲಿ ತಮಗೆ ಸೋಲುಣಿಸಿದ ತಂಡಗಳ ವಿರುದ್ಧ ಮುಯ್ಯಿ ತೀರಿಸಿಕೊಳ್ಳುವ ಸಮಯ ಇದು. ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸುವ ಮತ್ತೊಂದು ಅವಕಾಶವೂ ಹೌದು. ಇಲ್ಲಿಯ ವಾಂಖೆಡೆ ಕ್ರೀಡಾಂಗಣದಲ್ಲಿ ಈ ಸುತ್ತಿನ ಆರಂಭವು ಮುಂಬೈ ಇಂಡಿಯನ್ಸ್‌ ಮತ್ತು ಕಿಂಗ್ಸ್‌ ಇಲೆವನ್ ಪಂಜಾಬ್ ನಡುವಣ ಪಂದ್ಯದ ಮೂಲಕ ಆಗಲಿದೆ.

ಈ ಟೂರ್ನಿಯ ಮೊದಲ ಸುತ್ತಿನಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಕಿಂಗ್ಸ್‌ ಬಳಗವು ಮೊಹಾಲಿಯಲ್ಲಿ ಸೋಲಿಸಿತ್ತು. ಇದೀಗ ಉತ್ತಮ ಲಯದಲ್ಲಿರುವ ಎರಡೂ ತಂಡಗಳು ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುವ ನಿರೀಕ್ಷೆ ಇದೆ.

ಕಿಂಗ್ಸ್‌ ತಂಡದ ಕನ್ನಡಿಗ ಜೋಡಿ ಕೆ.ಎಲ್. ರಾಹುಲ್ ಮತ್ತು ಮಯಂಕ್ ಅಗರವಾಲ್ ಸೋಮವಾರ ರಾತ್ರಿ ಬಲಿಷ್ಠ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಎದುರು ಅಬ್ಬರಿಸಿದ್ದರು. ಆರ್. ಅಶ್ವಿನ್ ಬಳಗವು ಒಟ್ಟು ಆರು ಪಂದ್ಯಗಳನ್ನು ಆಡಿದೆ. ನಾಲ್ಕರಲ್ಲಿ ಗೆದ್ದಿದೆ. ಎರಡು ಪಂದ್ಯ ಸೋತಿದೆ. ಎಂಟು ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. 

ಬಳಗದಲ್ಲಿರುವ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್‌ ಗೇಲ್ ಮಾತ್ರ ಲಯಕ್ಕೆ ಮರಳುತ್ತಿಲ್ಲ. ಆದರೆ ಉಳಿದಂತೆ ತಂಡವು ಆಲ್‌ರೌಂಡ್ ಆಟವಾಡುತ್ತಿದೆ. ಅಶ್ವಿನ್, ಮುಜೀಬ್ ಉರ್ ರೆಹಮಾನ್ , ಮೊಹಮ್ಮದ್ ಶಮಿ ಮತ್ತು ಯುವಪ್ರತಿಭೆ ಸ್ಯಾಮ್ ಕರನ್ ಅವರು ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಕಟ್ಟಿಹಾಕುವ ಸಮರ್ಥರು.

ಮುಂಬೈ ತಂಡವೂ ಕಮ್ಮಿಯೇನಿಲ್ಲ. ತಂಡದ ವೇಗದ ಬೌಲರ್‌ ಅಲ್ಜಾರಿ ಜೋಸೆಫ್ ಈಗ ಎಲ್ಲರ ಆಕರ್ಷಣೆಯ ಕೇಂದ್ರಬಿಂದು. ಹೈದರಾಬಾದ್ ತಂಡದ ಆರು ವಿಕೆಟ್‌ಗಳನ್ನು ಕಿತ್ತು ವಿಜೃಂಭಿಸಿದ್ದರು. ಜಸ್‌ಪ್ರೀತ್ ಬೂಮ್ರಾ ವಿಶ್ರಾಂತಿ ಪಡೆಯದಿದ್ದರೆ ತಂಡಕ್ಕೆ ಲಾಭ ಹೆಚ್ಚು. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಕೀರನ್ ಪೊಲಾರ್ಡ್‌ ಅವರು ಮಿಂಚಿದರೆ ದೊಡ್ಡ ಮೊತ್ತದ ಗಳಿಕೆ ಮತ್ತು ಚೇಸಿಂಗ್ ಎರಡೂ ಸುಲಭವಾಗಲಿದೆ. ಆರಂಭಿಕ ಜೋಡಿ ರೋಹಿತ್ ಮತ್ತು ಕ್ವಿಂಟನ್ ಡಿ ಕಾಕ್ ಅವರು ಸ್ಥಿರ ಪ್ರದರ್ಶನ ತೋರುತ್ತಿಲ್ಲ. ಆದ್ದರಿಂದ ಮಧ್ಯಮ ಕ್ರಮಾಂಕದ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೃಣಾಲ್ ಪಾಂಡ್ಯ ಅವರ ಮೇಲೆ ಹೆಚ್ಚು ಹೊಣೆ ಬೀಳಲಿದೆ.

ತಂಡಗಳು

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ಸೂರ್ಯಕುಮಾರ್ ಯಾದವ್, ಯುವರಾಜ್ ಸಿಂಗ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಮಿಚೆಲ್ ಮೆಕ್ಲೆನಾಗನ್, ಜೇಸನ್ ಬೆಹ್ರನ್‌ಡ್ರಾಫ್, ಮಯಂಕ್ ಮಾರ್ಕಂಡೆ, ರಾಹುಲ್ ಚಾಹರ್, ಜಸ್‌ಪ್ರೀತ್ ಬೂಮ್ರಾ, ಅಲ್ಜಾರಿ ಜೋಸೆಫ್, ಅನ್ಮೋಲ್‌ಪ್ರೀತ್ ಸಿಂಗ್, ಸಿದ್ಧೇಶ್ ಲಾಡ್, ಅನುಕೂಲ್ ರಾಯ್. ಎವಿನ್ ಲೂಯಿಸ್, ಪಂಕಜ್ ಜೈಸ್ವಾಲ್, ಬೆನ್ ಕಟಿಂಗ್, ಇಶಾನ್ ಕಿಶನ್, ಆದಿತ್ಯ ತಾರೆ, ರಸಿಕ್ ಸಲಾಮ್, ಬರಿಂದರ ಸ್ರಾನ್, ಜಯಂತ್ ಯಾದವ್

ಕಿಂಗ್ಸ್ ಇಲೆವನ್ ಪಂಜಾಬ್: ಆರ್. ಅಶ್ವಿನ್ (ನಾಯಕ), ಕೆ.ಎಲ್. ರಾಹುಲ್ (ವಿಕೆಟ್‌ಕೀಪರ್), ಕ್ರಿಸ್ ಗೇಲ್, ಮಯಂಕ್ ಅಗರವಾಲ್, ಸರ್ಫರಾಜ್ ಖಾನ್, ಡೇವಿಡ್ ಮಿಲ್ಲರ್, ಮನದೀಪ್ ಸಿಂಗ್, ಸ್ಯಾಮ್ ಕರನ್, ಆ್ಯಂಡ್ರ್ಯೂ ಟೈ, ಮುರುಗನ್ ಅಶ್ವಿನ್, ಮೊಹಮ್ಮದ್ ಶಮಿ, ಮುಜೀಬ್ ಉರ್ ರೆಹಮಾನ್, ಕರುಣ್ ನಾಯರ್, ಮೊಸೆಸ್ ಹೆನ್ರಿಕ್ಸ್, ವರುಣ್ ಚಕ್ರವರ್ತಿ, ಹರಪ್ರೀತ್ ಬ್ರಾರ್, ಸಿಮ್ರನ್ ಸಿಂಗ್, ನಿಕೋಲ್ಸ್‌ ಪೂರನ್, ಹಾರ್ಡಸ್ ವಿಜೊನ್, ಅಂಕಿತ್ ರಜಪೂತ್, ಆರ್ಷದೀಪ್ ಸಿಂಗ್, ದರ್ಶನ್ ನಾಲ್ಕಂಡೆ, ಅಗ್ನಿವೇಶ್ ಅಯಾಚಿ.

ಪಂದ್ಯ ಆರಂಭ: ರಾತ್ರಿ 8

ನೇರಪ್ರಸಾರ: ಸ್ಟಾರ್ ಸ್ಫೋರ್ಟ್ಸ್‌ ನೆಟ್‌ವರ್ಕ್.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !