ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಪಾಕ್‌ನಲ್ಲಿ ಚೆನ್ನೈಗೆ ಗೆಲುವಿನ ಆಸೆ: ಅಗ್ರಸ್ಥಾನದ ಮೇಲೆ ಮಹಿ ಪಡೆಯ ಕಣ್ಣು

ಇಂದು ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಹಣಾಹಣಿ
Last Updated 30 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಚೆನ್ನೈ: ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ತಂಡ ಈ ಬಾರಿಯ ಲೀಗ್‌ನ ಪಾಯಿಂಟ್ಸ್‌ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರುವ ಕನಸು ಕಾಣುತ್ತಿದೆ.

ಚೆಪಾಕ್‌ ಅಂಗಳದಲ್ಲಿ ಬುಧವಾರ ನಡೆಯುವ ಪೈಪೋಟಿಯಲ್ಲಿ ಸೂಪರ್‌ ಕಿಂಗ್ಸ್‌ ತಂಡವು ಪಾಯಿಂಟ್ಸ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಸೆಣಸಲಿದೆ. ಉಭಯ ತಂಡಗಳು ಈಗಾಗಲೇ ‘ಪ್ಲೇ ಆಫ್‌’ ಹಾದಿ ಸುಗಮ ಮಾಡಿಕೊಂಡಿವೆ. ‘ಅಗ್ರಪಟ್ಟದ’ ದೃಷ್ಟಿಯಿಂದ ಈ ಪಂದ್ಯ ಎರಡು ತಂಡಗಳ ಪಾಲಿಗೂ ಮಹತ್ವದ್ದೆನಿಸಿದೆ.

ಸೂಪರ್‌ ಕಿಂಗ್ಸ್‌ ತಂಡ ಚೆಪಾಕ್‌ ಮೈದಾನದಲ್ಲಿ ಈ ಬಾರಿ ಸತತ ಐದು ಪಂದ್ಯಗಳನ್ನು ಗೆದ್ದಿತ್ತು. ಆದರೆ ಹಿಂದಿನ ಹಣಾಹಣಿಯಲ್ಲಿ ಇದೇ ಅಂಗಳದಲ್ಲಿ ಮುಂಬೈ ಇಂಡಿಯನ್ಸ್‌ ಎದುರು 46ರನ್‌ಗಳಿಂದ ಸೋತಿತ್ತು. ಆ ಹೋರಾಟದಲ್ಲಿ ಮಹೇಂದ್ರ ಸಿಂಗ್‌ ಧೋನಿ ಆಡಿರಲಿಲ್ಲ. ಜ್ವರದ ಕಾರಣ ವಿಶ್ರಾಂತಿ ಪಡೆದಿದ್ದರು. ಅವರ ಅನುಪಸ್ಥಿತಿಯಲ್ಲಿ ಸುರೇಶ್‌ ರೈನಾ ತಂಡವನ್ನು ಮುನ್ನಡೆಸಿದ್ದರು.

ಧೋನಿ ಈಗ ಪೂರ್ಣವಾಗಿ ಗುಣಮುಖರಾಗಿದ್ದು, ಡೆಲ್ಲಿ ಎದುರು ಕಣಕ್ಕಿಳಿಯಲಿದ್ದಾರೆ. ರವೀಂದ್ರ ಜಡೇಜ ಕೂಡಾ ಬುಧವಾರದ ಪಂದ್ಯಕ್ಕೆ ಲಭ್ಯರಿದ್ದಾರೆ. ಇವರು ತಂಡಕ್ಕೆ ಮರಳಿರುವುದರಿಂದ ಆತಿಥೇಯರಿಗೆ ಆನೆ ಬಲ ಬಂದಂತಾಗಿದೆ.

ಧೋನಿ ಅವರು ಈ ಸಲದ ಲೀಗ್‌ನಲ್ಲಿ 10 ಪಂದ್ಯಗಳಿಂದ 314ರನ್ ಬಾರಿಸಿದ್ದು ಹಲವು ಹಣಾಹಣಿಗಳಲ್ಲಿ ಏಕಾಂಗಿಯಾಗಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು. ಜಡೇಜ ಕೂಡಾ ಆಲ್‌ರೌಂಡ್‌ ಆಟದ ಮೂಲಕ ಗಮನ ಸೆಳೆದಿದ್ದರು.

ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯ, ಚೆನ್ನೈ ತಂಡವನ್ನು ಚಿಂತೆಗೀಡುಮಾಡಿದೆ. ಸುರೇಶ್‌ ರೈನಾ, ಶೇನ್‌ ವಾಟ್ಸನ್‌ ಮತ್ತು ಅಂಬಟಿ ರಾಯುಡು ಹಿಂದಿನ ಪಂದ್ಯಗಳಲ್ಲಿ ರನ್‌ ಗಳಿಸಲು ಪರದಾಡಿದ್ದರು. ಕೇದಾರ್‌ ಜಾಧವ್‌ ಕೂಡಾ ನಿರೀಕ್ಷೆ ಹುಸಿಗೊಳಿಸಿದ್ದರು. ಇವರು ಡೆಲ್ಲಿ ವಿರುದ್ಧ ಲಯ ಕಂಡುಕೊಳ್ಳುವುದು ತುಂಬಾ ಅಗತ್ಯ.

ಬೌಲಿಂಗ್‌ನಲ್ಲಿ ಚೆನ್ನೈ ತಂಡ ಬಲಯುತವಾಗಿದೆ. ಹೊಸ ಚೆಂಡಿನೊಂದಿಗೆ ದಾಳಿಗಿಳಿಯುವ ದೀಪಕ್‌ ಚಾಹರ್‌ ಆರಂಭದಲ್ಲೇ ವಿಕೆಟ್‌ ಉರುಳಿಸಿ ತಂಡಕ್ಕೆ ಮೇಲುಗೈ ತಂದುಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಈ ಬಾರಿ ಅವರು ಒಟ್ಟು 15 ವಿಕೆಟ್‌ ಕಬಳಿಸಿದ್ದಾರೆ.

ಇಮ್ರಾನ್‌ ತಾಹಿರ್‌, ಹರಭಜನ್‌ ಸಿಂಗ್‌ ಮತ್ತು ಜಡೇಜ ಅವರ ಸ್ಪಿನ್‌ ಬಲವೂ ಆತಿಥೇಯರಿಗೆ ಇದೆ. ದಕ್ಷಿಣ ಆಫ್ರಿಕಾದ ತಾಹಿರ್‌, ಈ ಸಲದ ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದ್ದಾರೆ. ಅವರ ಖಾತೆಯಲ್ಲಿ 17 ವಿಕೆಟ್‌ಗಳಿವೆ.

ಆತ್ಮವಿಶ್ವಾಸದ ಗಣಿ: ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಆತ್ಮವಿಶ್ವಾಸದ ಗಣಿಯಾಗಿದೆ. ಈ ತಂಡವು ಹಿಂದಿನ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆದ್ದಿದೆ.

ಆರಂಭಿಕರಾದ ಶಿಖರ್‌ ಧವನ್‌, ಪೃಥ್ವಿ ಶಾ, ನಾಯಕ ಶ್ರೇಯಸ್‌ ಅಯ್ಯರ್‌ ಮತ್ತು ರಿಷಭ್‌ ಪಂತ್‌ ಅವರು ತಂಡದ ಆಧಾರಸ್ಥಂಭಗಳಾಗಿದ್ದಾರೆ. ಇವರನ್ನು ಕಟ್ಟಿಹಾಕಲು ಧೋನಿ ಪಡೆಯ ಬೌಲರ್‌ಗಳು ಯಾವ ಬಗೆಯ ರಣನೀತಿ ಹೆಣೆದು ಆಡಲಿಳಿಯುತ್ತಾರೆ ಎಂಬ ಕುತೂಹಲ ಈಗ ಗರಿಗೆದರಿದೆ.

ಕಗಿಸೊ ರಬಾಡ, ಕ್ರಿಸ್‌ ಮೊರಿಸ್‌ ಅವರನ್ನೊಳಗೊಂಡ ಡೆಲ್ಲಿ ತಂಡದ ಬೌಲಿಂಗ್ ವಿಭಾಗವೂ ಶಕ್ತಿಯುತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT