ಬುಧವಾರ, ಡಿಸೆಂಬರ್ 8, 2021
21 °C
ಮಿಂಚಿದ ಆವೇಶ್ ಖಾನ್, ಅಕ್ಷರ್ ಪಟೇಲ್

DNP ಡೆಲ್ಲಿಗೆ ಜಯ; ಮುಂಬೈ ಪ್ಲೇಆಫ್ ಹಾದಿ ಜಟಿಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಾರ್ಜಾ (ಪಿಟಿಐ): ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡದ ಪ್ಲೇ ಆಫ್ ಪ್ರವೇಶದ ಹಾದಿ ಮತ್ತಷ್ಟು ಜಟಿಲವಾಗಿದೆ.

ಶನಿವಾರ ಸಂಜೆ ಡೆಲ್ಲಿ ಕ್ಯಾಪಿಟಲ್ಸ್ ಎದುರು 4 ವಿಕೆಟ್‌ಗಳಿಂದ ಸೋತಿರುವ ಮುಂಬೈ ತಂಡ ಈ ಬಾರಿ ಲೀಗ್ ಹಂತದಿಂದಲೇ ಹೊರಬೇಳುವ ಆತಂಕದಲ್ಲಿದೆ.

ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಡೆಲ್ಲಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ತಲಾ ಮೂರು ವಿಕೆಟ್ ಗಳಿಸಿದ ಡೆಲ್ಲಿ ತಂಡದ ಆವೇಶ್ ಖಾನ್ ಮತ್ತು ಸ್ಪಿನ್ನರ್ ಅಕ್ಷರ್ ಪಟೇಲ್ ಮುಂಬೈ ತಂಡವನ್ನು 129 ರನ್‌ಗಳಿಗೆ ಸೀಮಿತಗೊಳಿಸಿದರು.

ಮುಂಬೈ ತಂಡದ ಕೃಣಾಲ್ ಪಾಂಡ್ಯ ಮತ್ತು ಕೌಲ್ಟರ್‌ ನೈಲ್ ಅವರು ಆರಂಭದಲ್ಲಿಯೇ ಡೆಲ್ಲಿಗೆ ಪೆಟ್ಟುಕೊಟ್ಟರು.  ಆದರೆ ನಾಯಕ ರಿಷಭ್ ಪಂತ್ (26 ರನ್) ಮತ್ತು ಶ್ರೇಯಸ್ ಅ‌ಯ್ಯರ್ (ಔಟಾಗದೆ 33) ಅವರ  ಆಟದ ಬಲದಿಂದ 19.1 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 132 ರನ್ ಗಳಿಸಿ ಗೆದ್ದಿತು. ಕೊನೆಯಲ್ಲಿ ಶಿಮ್ರೊನ್ ಹೆಟ್ಮೆಯರ್ (15 ) ಮತ್ತು ಆರ್. ಅಶ್ವಿನ್ (ಔಟಾಗದೆ 20) ಮಹತ್ವದ ಕಾಣಿಕೆ ನೀಡಿದರು.

ಮುಂಬೈ ತಂಡದ ನಾಯಕ ರೋಹಿತ್ ಮತ್ತು ಕೀರನ್ ಪೊಲಾರ್ಡ್ ಅವರೊಂದು  ಎರಡಂಕಿ ಮುಟ್ಟಲಿಲ್ಲ. ಕ್ವಿಂಟನ್ ಡಿಕಾಕ್ (19), ಸೂರ್ಯಕುಮಾರ್ ಯಾದವ್ (33 ರನ್ ) ಅವರು ಇನಿಂಗ್ಸ್ ಬೆಳೆಸುವ ಪ್ರಯತ್ನ ಮಾಡಿದರು. ಇವರ ಜೊತೆಯಾಟ ಮುರಿದುಬಿದ್ದ ನಂತರ ದೊಡ್ಡ ಮೊತ್ತದ ಪಾಲುದಾರಿಕೆ ಆಟಗಳು ಮೂಡಿಬರದಿರುವುದು ಹಿನ್ನಡೆಗೆ ಕಾರಣವಾಯಿತು. ಸಾಧಾರಣ ಮೊತ್ತವನ್ನು ಕಾಪಾಡಿಕೊಂಡು ತಂಡಕ್ಕೆ ಗೆಲುವಿನ ಕಾಣಿಕೆ ಕೊಡಲು ಮುಂಬೈ ಬೌಲರ್‌ಗಳು ಮಾಡಿದ ಪ್ರಯತ್ನ ಫಲ ನೀಡಲಿಲ್ಲ.

ಉಭಯ ತಂಡಗಳು ತಲಾ 12 ಪಂದ್ಯಗಳನ್ನು ಆಡಿವೆ. ಡೆಲ್ಲಿ 18 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆದರೆ ಮುಂಬೈ ತಂಡವು ಏಳರಲ್ಲಿ ಸೋತಿದೆ. 10 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಕೋಲ್ಕತ್ತ, ಪಂಜಾಬ್ ತಂಡಗಳೂ ತಲಾ ಹತ್ತು ಅಂಕ ಗಳಿಸಿವೆ. ಆದರೆ ಕೋಲ್ಕತ್ತ ರನ್‌ ಸರಾಸರಿಯಲ್ಲಿ ಇವೆರಡಕ್ಕಿಂತಲೂ ಉತ್ತಮವಾಗಿವೆ. 

ಈ ಮೂರು ತಂಡಗಳಿಗೂ ಟೂರ್ನಿಯಲ್ಲಿ ತಲಾ ಎರಡು ಪಂದ್ಯಗಳು ಬಾಕಿಯಿವೆ. ಯಾವ ತಂಡ ಪ್ಲೇ ಆಫ್‌ಗೆರುವಲ್ಲಿ ಯಶ ಕಾಣುವುದೆಂಬ ಕುತೂಹಲ ಈಗ ಗರಿಗೆದರಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.