ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗೇರುತ್ತಿದೆ ಐಪಿಎಲ್ ಹವಾ: ಚಿನ್ನಸ್ವಾಮಿಯಲ್ಲಿ ಡಿವಿಲಿಯರ್ಸ್ ಆಟ

Last Updated 19 ಮಾರ್ಚ್ 2019, 4:49 IST
ಅಕ್ಷರ ಗಾತ್ರ

ಬೆಂಗಳೂರು: ಹೋದ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ ತಮ್ಮ ನೆಚ್ಚಿನ ಬೆಂಗಳೂರು ಅಭಿಮಾನಿಗಳಿಗೆ ಮಾತ್ರ ನಿರಾಶೆ ಮಾಡುತ್ತಿಲ್ಲ.

ಅವರು ಈ ಬಾರಿಯೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಅಭಿಮಾನಿಗಳಿಗೆ ತಮ್ಮ ಬ್ಯಾಟಿಂಗ್ ರಸದೌತಣ ಉಣಬಡಿಸಲಿದ್ದಾರೆ. ಅದಕ್ಕಾಗಿ ಸೋಮವಾರದಿಂದ ಅಭ್ಯಾಸ ಆರಂಭಿಸಿದ್ದಾರೆ.

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಧ್ಯಾಹ್ನದ ಬಿಸಿಲಿನಲ್ಲಿ ಅವರು ಮತ್ತು ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಅಭ್ಯಾಸವನ್ನು ನೋಡಲು ಹಲವಾರು ಅಭಿಮಾನಿಗಳು ಸೇರಿದ್ದರು. ಒಂದೂವರೆ ತಾಸು ಅಭ್ಯಾಸ ನಡೆಸಿದರು.

ಅವರೊಂದಿಗೆ ಮಧ್ಯಮವೇಗಿ ಉಮೇಶ್ ಯಾದವ್, ಸ್ಪಿನ್ನರ್ ಯಜುವೇಂದ್ರ ಚಾಹಲ್, ವಿಕೆಟ್‌ಕೀಪರ್ ಪಾರ್ಥಿವ್ ಪಟೇಲ್, ಗುರುಕೀರತ್ ಸಿಂಗ್ ಮಾನ್ ಮತ್ತಿತರರು ಅಭ್ಯಾಸ ನಡೆಸಿದರು. ಬ್ಯಾಟಿಂಗ್ ಕೋಚ್ ಗ್ಯಾರಿ ಕರ್ಸ್ಟನ್ ಮತ್ತು ಬೌಲಿಂಗ್ ಸಲಹೆಗಾರ ಆಶಿಶ್ ನೆಹ್ರಾ ಅವರು ಮಾರ್ಗದರ್ಶನ ನೀಡಿದರು.

ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಆರ್‌ಸಿಬಿಯು ಕೆಲವು ಹೊಸ ಆಟಗಾರರನ್ನು ಸೇರ್ಪಡೆ ಮಾಡಿಕೊಂಡಿದೆ. ವೆಸ್ಟ್‌ ಇಂಡೀಸ್‌ನ ಶಿಮ್ರೊನ್ ಹೆಟ್ಮೆಯರ್, ಮಾರ್ಕಸ್ ಸ್ಟೊನಿಸ್, ಆಲ್‌ರೌಂಡರ್ ಗುರುಕೀರತ್ ಸಿಂಗ್ ಮಾನ್, ಹಿಮ್ಮತ್ ಸಿಂಗ್, ದಕ್ಷಿಣ ಆಫ್ರಿಕಾದ ಹೆನ್ರಿಕ್ ಕ್ಲಾಸನ್ ಅವರನ್ನು ಸೇರ್ಪಡೆ ಮಾಡಿಕೊಂಡಿದೆ. ಯುವ ಆಟಗಾರರಾದ ಕರ್ನಾಟಕದ ದೇವದತ್ ಪಡಿಕ್ಕಲ್, ಪ್ರಯಾಸ್ ಬರ್ಮನ್ ಮತ್ತು ಅಕ್ಷದೀಪ್ ನಾಥ್ ಕೂಡ ತಂಡದಲ್ಲಿದ್ದಾರೆ. ಇದರಿಂದಾಗಿ ಎದುರಾಳಿ ತಂಡಗಳಿಗೆ ದಿಟ್ಟ ಪೈಪೋಟಿ ನೀಡುವ ನಿರೀಕ್ಷೆ ಇದೆ.

ಆರ್‌ಸಿಬಿಯು ತನ್ನ ಮೊದಲ ಪಂದ್ಯವನ್ನು ಇದೇ 23ರಂದು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ಎದುರು ಆಡಲಿದೆ.

ತವರಿನಲ್ಲಿ ಆಡುವುದೇ ಆನಂದ: ಧವನ್

ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರು ಈ ಬಾರಿ ತಮ್ಮ ತವರೂರಿನ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಆಡುತ್ತಿದ್ದಾರೆ. ಐಪಿಎಲ್ ಆರಂಭದ ವರ್ಷಗಳಲ್ಲಿ ಸ್ವಲ ಕಾಲ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದಲ್ಲಿ ಆಡಿದ್ದರು. ಆನಂತರ ಮುಂಬೈ ಇಂಡಿಯನ್ಸ್‌ ನಲ್ಲಿಯೂ ಇದ್ದರು. ಹೋದ ವರ್ಷ ಸನ್‌ರೈಸರ್ಸ್ ಹೈದರಾಬಾದ್ ಬಳಗದಲ್ಲಿ ಮಿಂಚಿದ್ದರು. ಈ ಬಾರಿಯ ಹರಾಜು
ಪ್ರಕ್ರಿಯೆಯಲ್ಲಿ ಅವರನ್ನು ಡೆಲ್ಲಿ ತಂಡವು ಸೇರ್ಪಡೆ ಮಾಡಿಕೊಂಡಿತ್ತು.

ಈಚೆಗೆ ಆಸ್ಟ್ರೇಲಿಯಾ ಎದುರಿನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಮೊಹಾಲಿ ಪಂದ್ಯದಲ್ಲಿ ಶಿಖರ್ ಶತಕ ಬಾರಿಸಿದ್ದರು. ಅವರು ಸೋಮವಾರದಿಂದ ಕ್ಯಾಪಿಟಲ್ಸ್‌ ಆಟಗಾರರೊಂದಿಗೆ ಅಭ್ಯಾಸ ಆರಂಭಿಸಿದರು.

‘ಉತ್ತಮ ಸಮತೋಲನ ಹೊಂದಿದ ತಂಡವಷ್ಟೇ ಐಪಿಎಲ್‌ನಲ್ಲಿ ಗೆಲ್ಲಲು ಸಾಧ್ಯ. ಈ ವರ್ಷ ನಮ್ಮ ತಂಡವು ಎಲ್ಲ ವಿಭಾಗಗಳಲ್ಲಿಯೂ ಉತ್ತಮ ಆಟಗಾರರನ್ನು ಒಳಗೊಂಡಿದೆ. ಆಲ್‌ರೌಂಡರ್, ಸ್ಪಿನ್ನರ್, ಪರಿಣತ ಬ್ಯಾಟ್ಸ್‌ಮನ್ ಗಳು ಇದ್ದಾರೆ. ಭಾರತ ತಂಡದಲ್ಲಿ ಆಡಿದ 4–5 ಪ್ರಮುಖ ಬ್ಯಾಟ್ಸ್‌ಮನ್‌ಗಳು ಇರುವುದು ವಿಶೇಷ’ ಎಂದು ಶಿಖರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT