ಧೋನಿ ತಂತ್ರ, ಪಂತ್‌ ಬಲದ ಮುಖಾಮುಖಿ

ಮಂಗಳವಾರ, ಏಪ್ರಿಲ್ 23, 2019
31 °C
ಮೊದಲ ಪಂದ್ಯಗಳಲ್ಲಿ ಗೆದ್ದ ತಂಡಗಳಿಗೆ ಮತ್ತೊಂದು ಜಯದ ಉತ್ಸಾಹ

ಧೋನಿ ತಂತ್ರ, ಪಂತ್‌ ಬಲದ ಮುಖಾಮುಖಿ

Published:
Updated:
Prajavani

ನವದೆಹಲಿ: ಸ್ಫೋಟಕ ಬ್ಯಾಟಿಂಗ್‌ ಮತ್ತು ಚುರುಕಿನ ವಿಕೆಟ್ ಕೀಪಿಂಗ್‌ನಷ್ಟೇ ತಂತ್ರಗಳನ್ನು ಹೆಣೆಯುವುದರಲ್ಲೂ ಚಾಣಾಕ್ಷರಾಗಿರುವ ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್‌) ಮಂಗಳವಾರದ ಪಂದ್ಯದಲ್ಲಿ ಯುವ ಬ್ಯಾಟ್ಸ್‌ಮನ್‌ ರಿಷಭ್ ಪಂತ್ ಅವರನ್ನು ಕಟ್ಟಿಹಾಕಲು ಯಶಸ್ವಿಯಾಗುವರೇ...?

ಇಲ್ಲಿ ಮಂಗಳವಾರ ರಾತ್ರಿ ನಡೆ ಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ನಡುವಿನ ಹಣಾ ಹಣಿಯಲ್ಲಿ ಕುತೂಹಲ ಕೆರಳಿಸಿರುವ ಪ್ರಶ್ನೆ ಇದು. ಮೊದಲ ಪಂದ್ಯಗಳಲ್ಲಿ ಗೆದ್ದು ಸಂಭ್ರಮಿಸಿರುವ ಎರಡೂ ತಂಡಗಳು ಮಂಗಳವಾರ ಜಯದ ಓಟ ಮುಂದುವರಿಸಲು ಪ್ರಯತ್ನಿಸಲಿದ್ದು ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಕಣಕ್ಕೆ ಇಳಿಯುವ ಕಾರಣ ರನ್ ಹೊಳೆ ಹರಿಯುವ ನಿರೀಕ್ಷೆ ಇದೆ.

ಟೂರ್ನಿಯ ಉದ್ಘಾಟನಾ ‍ಪಂದ್ಯ ದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆದ್ದಿತ್ತು. ಕ್ಯಾಪಿಟಲ್ಸ್, ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್‌ಗೆ ಸೋಲುಣಿಸಿತ್ತು. ಈ ಪಂದ್ಯದಲ್ಲಿ ರಿಷಭ್‌ ಪಂತ್‌ ಮೋಹಕ ಬ್ಯಾಟಿಂಗ್ ಮೂಲಕ ರಂಜಿಸಿದ್ದರು. ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಸಿದ್ದ ಅವರು 27 ಎಸೆತಗಳಲ್ಲಿ 78 ರನ್‌ ಸಿಡಿಸಿದ್ದರು.

ಮೊದಲ ಪಂದ್ಯದಲ್ಲಿ ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದ್ದ ಸಿಎಸ್‌ಕೆ ಸುಲಭ ಗುರಿಯನ್ನು ಬೆನ್ನಟ್ಟಿ ಗೆಲ್ಲಲು ಪರದಾಡಿತ್ತು. ಆದ್ದರಿಂದ ತಂಡದ ಬ್ಯಾಟಿಂಗ್ ವಿಭಾಗ ಇನ್ನಷ್ಟು ಪರಿಣಾಮಕಾರಿಯಾಗಬೇಕಾಗಿದೆ. ಸ್ಪಿನ್‌ಗೆ ನೆರವಾಗಲಿರುವ ಫೀರೋಜ್ ಷಾ ಕೋಟ್ಲಾ ಕ್ರೀಡಾಂಗಣದ ಪಿಚ್‌ನಲ್ಲಿ ಸಿಎಸ್‌ಕೆಯ ಹರಭಜನ್ ಸಿಂಗ್, ರವೀಂದ್ರ ಜಡೇಜ ಮತ್ತು ಇಮ್ರಾನ್ ತಾಹಿರ್ ಮಿಂಚುವ ಭರವಸೆ ಇದೆ. ಆರ್‌ಸಿಬಿ ಎದುರಿನ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಅಗ್ರ ಕ್ರಮಾಂಕದ ಮೂವರ ವಿಕೆಟ್ ಕಬಳಿಸಿದ ಹರಭಜನ್ ಸಿಂಗ್ ಡೆಲ್ಲಿ ಕ್ಯಾಪಿಟಲ್ಸ್‌ನ ಬ್ಯಾಟ್ಸ್‌ಮನ್‌ಗಳಿಗೂ ಸವಾಲಾಗಲಿದ್ದಾರೆ.

ಸ್ಪಿನ್‌ ದಾಳಿಗೆ ಉತ್ತರಿಸುವರೇ ಪಂತ್‌?: ಸ್ಪಿನ್ ಬೌಲರ್‌ಗಳನ್ನು ಎದುರಿಸುವಲ್ಲಿ ಹೆಚ್ಚು ಯಶಸ್ಸು ಕಾಣದೇ ಇರುವ ಪಂತ್ ಅವರನ್ನು ಕಟ್ಟಿಹಾಕಲು ಧೋನಿ ರೂಪಿಸುವ ತಂತ್ರಗಳು ಯಾವುವು ಎಂಬುದು ಕೂಡ ಕುತೂಹಲದ ಪ್ರಶ್ನೆ. ವೇಗಿಗಳ ಮೂಲಕ ಬೌಲಿಂಗ್ ಆರಂಭಿಸಿ ಪಂತ್‌ ಕ್ರೀಸ್‌ಗೆ ಇಳಿದ ನಂತರ ಸ್ಪಿನ್ನರ್‌ಗಳ ಕೈಗೆ ಧೋನಿ ಚೆಂಡು ಕೊಡುವ ಸಾಧ್ಯತೆ ಇದೆ ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ.

ಮೊದಲ ಪಂದ್ಯದಲ್ಲಿ ವೈಫಲ್ಯ ಕಂಡಿರುವ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರು ಲಯಕ್ಕೆ ಮರಳುವರೇ ಎಂಬ ಪ್ರಶ್ನೆಗೂ ಈ ಪಂದ್ಯದಲ್ಲಿ ಉತ್ತರ ಸಿಗಬೇಕಿದೆ.

ಪಂದ್ಯ ಆರಂಭ: ರಾತ್ರಿ 8.

ಸ್ಥಳ: ಫಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣ, ದೆಹಲಿ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !