ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ಫೈನಲ್‌ ಹೈದರಾಬಾದ್‌ಗೆ ಸ್ಥಳಾಂತರ?

ಬೆಂಗಳೂರು ‘ಮೀಸಲು’ ಕ್ರೀಡಾಂಗಣ; ಉದ್ಯಾನ ನಗರಿಯಲ್ಲಿ ಮಹಿಳೆಯರ ಟೂರ್ನಿ
Last Updated 8 ಏಪ್ರಿಲ್ 2019, 18:30 IST
ಅಕ್ಷರ ಗಾತ್ರ

ನವದೆಹಲಿ: ಕ್ರೀಡಾಂಗಣಕ್ಕೆ ಸಂಬಂಧಪಟ್ಟ ವಿವಾದ ಬಗೆಹರಿಸದಿದ್ದರೆ ಮೇ 12ರಂದು ನಡೆಯಲಿರುವ ಐಪಿಎಲ್‌ ಫೈನಲ್ ಪಂದ್ಯವನ್ನು ಚೆನ್ನೈನಿಂದ ಹೈದರಾಬಾದ್‌ಗೆ ಸ್ಥಳಾಂತರಿಸಲು ಬಿಸಿಸಿಐನ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಸೋಮವಾರ ನಿರ್ಧರಿಸಿದೆ.

ಮೂವರು ಬಿಸಿಸಿಐ ಅಧಿಕಾರಿಗಳೊಂದಿಗೆ ಇಲ್ಲಿ ಸಭೆ ಸೇರಿದ ಸಿಒಎ ಅಧಿಕಾರಿಗಳು ಐಪಿಎಲ್ ಮತ್ತು ಕ್ರಿಕೆಟ್ ಆಪರೇಷನ್‌ಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. ಫೈನಲ್‌ಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವನ್ನು ‘ಮೀಸಲು’ ಇರಿಸಲು ತೀರ್ಮಾನಿಸಲಾಯಿತು.

ಚೆನ್ನೈಯಲ್ಲಿ ಫೈನಲ್‌ ನಡೆಸಲು ನಿರ್ಧರಿಸಲಾಗಿದೆ. ಆದರೆ ಎಂ.ಎ.ಚಿದಂಬರಂ ಕ್ರೀಡಾಂಗಣದ ಐ, ಜೆ ಮತ್ತು ಕೆ ಸ್ಟ್ಯಾಂಡ್‌ಗಳಿಗೆ ಸ್ಥಳೀಯ ಆಡಳಿತ ಫಿಟ್‌ನೆಸ್ ಪ್ರಮಾಣ ಪತ್ರ ನೀಡದ ಕಾರಣ 2012ರಿಂದ ಅವುಗಳಲ್ಲಿ ಕುಳಿತು ಪಂದ್ಯಗಳನ್ನು ವೀಕ್ಷಿಸಲು ಅನುಮತಿ ಸಿಗುತ್ತಿಲ್ಲ.

2012ರಲ್ಲಿ ನಡೆದಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ವೀಕ್ಷಿಸಲು ಮಾತ್ರ ಈ ಸ್ಟ್ಯಾಂಡ್‌ಗಳನ್ನು ಮುಕ್ತಗೊಳಿಸಲಾಗಿತ್ತು. ತಮಿಳುನಾಡು ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ರಾಜ್ಯ ಸರ್ಕಾರದ ನಡುವಿನ ಹಗ್ಗ ಜಗ್ಗಾಟದ ಕಾರಣ ಈ ಸಮಸ್ಯೆಗೆ ಪರಿಹಾರ ಕಾಣಲು ಆಗಲಿಲ್ಲ. ಐಪಿಎಲ್‌ ಫೈನಲ್‌ಗೂ ಮೊದಲು ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ರಾಜ್ಯ ಸಂಸ್ಥೆಗೆ ಸಿಒಎ ಸೂಚಿಸಿದೆ.

‘ಈ ಮೂರು ಸ್ಟ್ಯಾಂಡ್‌ಗಳಲ್ಲಿ ಕನಿಷ್ಠ 12 ಸಾವಿರ ಪ್ರೇಕ್ಷಕರು ಕುಳಿತು ಪಂದ್ಯ ವೀಕ್ಷಿಸಬಲ್ಲರು. ಅಂತರರಾಷ್ಟ್ರೀಯ ಪಂದ್ಯಗಳು ಸೇರಿದಂತೆ ಮಹತ್ವದ ಹಣಾಹಣಿಗಳು ನಡೆದಾಗ ಇವುಗಳು ಖಾಲಿಯಾಗಿದ್ದರೆ ಟಿವಿಯಲ್ಲಿ ನೋಡಲು ಅಸಹ್ಯವಾಗುತ್ತದೆ. ಆದ್ದರಿಂದ ರಾಜ್ಯ ಸಂಸ್ಥೆ ಸಮಸ್ಯೆಗೆ ಪರಿಹಾರ ಕಾಣಲೇಬೇಕು. ಇದಕ್ಕಾಗಿ 15 ದಿನಗಳ ಸಮಯ ನೀಡಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಆಟಗಾರರ ಸಂಸ್ಥೆ: ಆಟಗಾರರ ಸಂಸ್ಥೆಯನ್ನು ಎರಡು ವಾರಗಳಲ್ಲಿ ಅಸ್ತಿತ್ವಕ್ಕೆ ತರಲು ಸಭೆ ನಿರ್ಧರಿಸಿದ್ದು ವಿವಿಧ ಟೂರ್ನಿಗಳ ಪ್ರಾಯೋಜಕತ್ವ ಮತ್ತು ಗುತ್ತಿಗೆಯನ್ನು ಶೀಘ್ರ ನವೀಕರಿಸಲು ನಿರ್ಧರಿಸಲಾಗಿದೆ. ಒಂದು ದಶಕದಿಂದ ಲೆಕ್ಕ ಪತ್ರಗಳನ್ನು ಮರುಹೊಂದಾಣಿಕೆ ಮಾಡಿದ ನಂತರ ಕ್ರಿಕೆಟ್ ಆಸ್ಟ್ರೇಲಿಯಾದಿಂದ ಬಿಸಿಸಿಐಗೆ ₹ 2.09 ಮೊತ್ತ ಸಿಗಲಿದೆ ಎಂದೂ ಸಭೆಯಲ್ಲಿ ತಿಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT