ಐಪಿಎಲ್: ಸನ್‌ರೈಸರ್ಸ್‌ಗೆ ಡೇವಿಡ್‌ ವಾರ್ನರ್‌ ಬಲ

ಸೋಮವಾರ, ಏಪ್ರಿಲ್ 22, 2019
29 °C
ಕೋಲ್ಕತ್ತ ನೈಟ್‌ರೈಡರ್ಸ್‌ನಲ್ಲಿ ಮೂವರು ಕನ್ನಡಿಗರು

ಐಪಿಎಲ್: ಸನ್‌ರೈಸರ್ಸ್‌ಗೆ ಡೇವಿಡ್‌ ವಾರ್ನರ್‌ ಬಲ

Published:
Updated:
Prajavani

ಕೋಲ್ಕತ್ತ: ಚೆಂಡು ವಿರೂಪ ಪ್ರಕರಣದಲ್ಲಿ ಅಮಾನತು ಶಿಕ್ಷೆ ಮುಗಿಸಿ ಮರಳಿ ಬಂದಿರುವ ಡೇವಿಡ್ ವಾರ್ನರ್‌ ತಮ್ಮ ಕ್ರಿಕೆಟ್‌ ಬದುಕಿಗೆ ಹೊಸ ರೂಪ ನೀಡುವ ತವಕದಲ್ಲಿದ್ದಾರೆ. ಅದಕ್ಕಾಗಿ 12ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯನ್ನು ವೇದಿಕೆ ಮಾಡಿಕೊಳ್ಳುವತ್ತ ಚಿತ್ತ ನೆಟ್ಟಿದ್ದಾರೆ.

ಭಾನುವಾರ ಈಡನ್ ಗಾರ್ಡನ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌ ವಿರುದ್ಧ ಕಣಕ್ಕಿಳಿಯಲಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡದಲ್ಲಿ ಡೇವಿಡ್ ವಾರ್ನರ್ ಆಡಲಿದ್ದಾರೆ. ಹೋದ ವರ್ಷ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್‌ನಲ್ಲಿ ಚೆಂಡು ವಿರೂಪ ಪ್ರಕರಣ ವರದಿಯಾಗಿತ್ತು. ಅದರಲ್ಲಿ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ ಕೂಡ ತಪ್ಪಿತಸ್ಥರಾಗಿ, ಶಿಕ್ಷೆ ಅನುಭವಿಸಿದ್ದರು. ಆದ್ದರಿಂದ ಹೋದ ವರ್ಷದ ಆವೃತ್ತಿಯಲ್ಲಿ ಅವರಿಗೆ ಆಡಲು ಅನುಮತಿ ನೀಡಿರಲಿಲ್ಲ. ಈ ತಿಂಗಳಾಂತ್ಯದಲ್ಲಿ ಅವರ ಶಿಕ್ಷೆಯ ಅವಧಿ ಮುಗಿಯಲಿದ್ದು ಕಣಕ್ಕಿಳಿಯುತ್ತಿದ್ದಾರೆ. ಮೇ 30ರಿಂದ ಆರಂಭವಾಗಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ತವರು ಆಸ್ಟ್ರೇಲಿಯಾ ತಂಡದಲ್ಲಿ ಆಡುವ ತವಕದಲ್ಲಿ ವಾರ್ನರ್ ಇದ್ದಾರೆ. ಅದಕ್ಕಾಗಿ ಇಲ್ಲಿಂದಲೇ ಸಿದ್ಧತೆ ಆರಂಭಿಸಲಿದ್ದಾರೆ.

2016ರಲ್ಲಿ ಸನ್‌ರೈಸರ್ಸ್‌ ತಂಡವು ವಾರ್ನರ್‌ ನಾಯಕತ್ವದಲ್ಲಿ ಚಾಂಪಿಯನ್ ಆಗಿತ್ತು.

ಬೆಂಗಳೂರಿನಲ್ಲಿ ನಡೆದಿದ್ದ ಫೈನಲ್‌ನಲ್ಲಿ ಆರ್‌ಸಿಬಿಯನ್ನು ಮಣಿಸಿತ್ತು. ಹೋದ ವರ್ಷ ವಾರ್ನರ್‌ ಅನುಪಸ್ಥಿತಿಯಲ್ಲಿ ಕೇನ್‌ ವಿಲಿಯಮ್ಸನ್ ನಾಯಕತ್ವದ ತಂಡವು ಚೆನ್ನೈ ಸೂಪರ್ ಕಿಂಗ್ಸ್‌ ಎದುರು ಫೈನಲ್‌ನಲ್ಲಿ ಸೋತಿತ್ತು. ಈ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡುವ ಛಲದಲ್ಲಿದೆ. ಕೇನ್ ವಿಲಿಯ ಮ್ಸನ್, ಮನೀಷ್ ಪಾಂಡೆ, ಮಾರ್ಟಿನ್ ಗಪ್ಟಿಲ್ ಮತ್ತು ಯೂಸುಫ್ ಪಠಾಣ್ ಅವರು ಇರುವ ತಂಡದ ಬ್ಯಾಟಿಂಗ್ ಬಲಿಷ್ಠವಾಗಿದೆ. ಆದರೆ ಈ ತಂಡದ ನಿಜವಾದ ಸಾಮರ್ಥ್ಯ ಇರುವುದು ಬೌಲಿಂಗ್ ವಿಭಾಗದಲ್ಲಿ.

ಮಧ್ಯಮವೇಗಿ ಭುವನೇಶ್ವರ್ ಕುಮಾರ್, ಎಡಗೈಮಧ್ಯಮವೇಗಿ ಖಲೀಲ್ ಅಹಮದ್, ಅಫ್ಗಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್,  ಬಾಂಗ್ಲಾದ ಶಕೀಬ್ ಅಲ್ ಹಸನ್ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಸವಾಲೊಡ್ಡುವ ಸಮರ್ಥರು.

ದಿನೇಶ್ ಬಳಗದ ಛಲ: ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಅವರು ಬಿಸಿಸಿಐ ಆಯ್ಕೆ ಸಮಿತಿಯ ಗಮನ ಸೆಳೆಯಲು ಸಜ್ಜಾಗಿದ್ದಾರೆ.

ಹೋದ ವರ್ಷ ತಂಡದಿಂದ ಗೌತಮ್ ಗಂಭೀರ್ ಹೊರನಡೆದ ನಂತರ ನಾಯಕತ್ವ ವಹಿಸಿಕೊಂಡಿರುವ ತಮಿಳುನಾಡಿನ ದಿನೇಶ್ ವಿಕೆಟ್‌ಕೀಪಿಂಗ್ ಮತ್ತು ಬ್ಯಾಟಿಂಗ್‌ನಲ್ಲಿಯೂ ಉತ್ತಮವಾಗಿ ಆಡಿದ್ದರು.

ಯುವ ಆಟಗಾರ ಶುಭಮನ್ ಗಿಲ್,  ಆಲ್‌ರೌಂಡರ್ ಸುನಿಲ್ ನಾರಾಯಣ್ ಮೇಲೆ ಹೆಚ್ಚಿನ ಭರವಸೆ ಇದೆ. ತನ್ನ ತವರಿನ ಅಂಗಳದಲ್ಲಿ  ಗೆಲುವಿನ ಆರಂಭದ ತವಕದಲ್ಲಿ ಕೆಕೆಆರ್ ಇದೆ.

ಪಂದ್ಯ ಆರಂಭ: ಸಂಜೆ 4

ನೇರಪ್ರಸಾರ ಸ್ಟಾರ್ ಸ್ಪೋರ್ಟ್ಸ್.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !