ಗುರುವಾರ , ಸೆಪ್ಟೆಂಬರ್ 23, 2021
21 °C
ಫೈನಲ್‌ ಪ್ರವೇಶಿಸಿದ ಮುಂಬೈ ಇಂಡಿಯನ್ಸ್‌: ತವರಿನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ನಿರಾಸೆ

ಚೆಪಾಕ್‌ ಅಂಗಳದಲ್ಲಿ ಪ್ರಜ್ವಲಿಸಿದ ‘ಸೂರ್ಯ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಮುಂಬೈ ಇಂಡಿಯನ್ಸ್‌ ತಂಡದ ಸೂರ್ಯಕುಮಾರ್‌ ಯಾದವ್‌ (ಔಟಾಗದೆ 71; 54ಎ, 10ಬೌಂ) ಮಂಗಳವಾರ ಚೆಪಾಕ್‌ ಅಂಗಳದಲ್ಲಿ ಪ್ರಜ್ವಲಿಸಿದರು.

ಸಪಾಟಾದ ಪಿಚ್‌ನಲ್ಲಿ ಸೂರ್ಯಕುಮಾರ್‌ ಕಟ್ಟಿದ ಸುಂದರ ಇನಿಂಗ್ಸ್‌ ನೆರವಿನಿಂದ ರೋಹಿತ್‌ ಶರ್ಮಾ ಮುಂದಾಳತ್ವದ ಮುಂಬೈ ತಂಡ ಫೈನಲ್‌ಗೆ ಲಗ್ಗೆ ಇಟ್ಟಿತು. ರೋಹಿತ್‌ ಬಳಗ 6 ವಿಕೆಟ್‌ಗಳಿಂದ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಸೋಲಿಸಿತು.

ಮುಂಬೈ ತಂಡವು ಲೀಗ್‌ನಲ್ಲಿ ಐದನೇ ಸಲ ಪ್ರಶಸ್ತಿ ಸುತ್ತು ಪ್ರವೇಶಿಸಿದ ಸಾಧನೆ ಮಾಡಿದೆ. ಈ ಪೈಕಿ ಮೂರು ಸಲ ಚಾಂಪಿಯನ್‌ ಆಗಿದೆ.

ಮೊದಲ ಕ್ವಾಲಿಫೈಯರ್‌ ಹೋರಾಟದಲ್ಲಿ ಟಾಸ್‌ ಗೆದ್ದು ಬ್ಯಾಟ್‌ ಮಾಡಿದ ಮಹೇಂದ್ರ ಸಿಂಗ್‌ ಧೋನಿ ಸಾರಥ್ಯದ ಸೂಪರ್‌ ಕಿಂಗ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 131ರನ್‌ ಕಲೆಹಾಕಿತು. ರೋಹಿತ್‌ ಬಳಗ 18.3 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು.

ಸ್ಪಿನ್ನರ್‌ಗಳ ಪಾಲಿನ ಸ್ವರ್ಗ ಎನಿಸಿರುವ ಚೆಪಾಕ್‌ ಪಿಚ್‌ನಲ್ಲಿ ಸೂರ್ಯಕುಮಾರ್‌, ಆತಿಥೇಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ರವೀಂದ್ರ ಜಡೇಜ, ಹರಭಜನ್‌ ಸಿಂಗ್‌ ಮತ್ತು ಇಮ್ರಾನ್‌ ತಾಹಿರ್‌ ಅವರ ಎಸೆತಗಳನ್ನು ಸಾವಧಾನದಿಂದ ಎದುರಿಸಿ ಕ್ರಿಕೆಟ್‌ ಪಂಡಿತರ ಪ್ರಶಂಸೆಗೆ ಪಾತ್ರರಾದರು.

ಗುರಿ ಬೆನ್ನಟ್ಟಿದ ಮುಂಬೈಗೆ ಮೊದಲ ಓವರ್‌ನಲ್ಲೇ ಆಘಾತ ಎದುರಾಯಿತು. ದೀಪಕ್‌ ಚಾಹರ್‌ ಹಾಕಿದ ಎರಡನೇ ಎಸೆತದಲ್ಲಿ ರೋಹಿತ್‌, ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ವಿಕೆಟ್‌ ಕೀಪರ್‌ ಕ್ವಿಂಟನ್‌ ಡಿ ಕಾಕ್‌ಗೆ (8) ಹರಭಜನ್‌ ಪೆವಿಲಿಯನ್‌ ದಾರಿ ತೋರಿಸಿದಾಗ ತಂಡದ ಖಾತೆಯಲ್ಲಿದ್ದದ್ದು ಕೇವಲ 21 ರನ್‌.

ಈ ಹಂತದಲ್ಲಿ ಸೂರ್ಯಕುಮಾರ್‌ ಮತ್ತು ಇಶಾನ್‌ ಕಿಶನ್‌ (28; 31ಎ, 1ಬೌಂ, 1ಸಿ) ಅಮೋಘ ಜೊತೆಯಾಟ ಆಡಿದರು. ಚೆನ್ನೈ ಬೌಲರ್‌ಗಳನ್ನು ದಿಟ್ಟತನದಿಂದ ಎದುರಿಸಿದ ಇವರು ಮೂರನೇ ವಿಕೆಟ್‌ಗೆ 80ರನ್‌ ಸೇರಿಸಿ ತಂಡದ ಗೆಲುವಿನ ಕನಸಿಗೆ ಬಲ ತುಂಬಿದರು.

ಇಮ್ರಾನ್‌ ತಾಹಿರ್‌, 14ನೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಕ್ರಮವಾಗಿ ಕಿಶನ್‌ ಮತ್ತು ಕೃಣಾಲ್‌ ಪಾಂಡ್ಯ ವಿಕೆಟ್‌ ಪಡೆದಾಗ ಕ್ರೀಡಾಂಗಣದಲ್ಲಿ ಮೆಕ್ಸಿಕನ್‌ ಅಲೆ ಎದ್ದಿತು. ನಂತರ ಸೂರ್ಯಕುಮಾರ್‌ ಮತ್ತು ಹಾರ್ದಿಕ್‌ ಪಾಂಡ್ಯ (ಔಟಾಗದೆ 13; 11ಎ, 1ಬೌಂ) ಎಚ್ಚರಿಕೆಯಿಂದ ಆಡಿ ಗೆಲುವಿನ ‘ಶಾಸ್ತ್ರ’ ಮುಗಿಸಿದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಚೆನ್ನೈ ತಂಡ ಮೂರನೇ ಓವರ್‌ನಲ್ಲೇ ಆಘಾತಕ್ಕೆ ಒಳಗಾಯಿತು. ನಿಧಾನಗತಿಯಲ್ಲಿ ರನ್ ಪೇರಿಸಲು ಪ್ರಯತ್ನಿಸಿದ ಫಾಫ್ ಡು ಪ್ಲೆಸಿ ಆರು ರನ್ ಗಳಿಸಿ ಔಟಾದರು. ಸುರೇಶ್ ರೈನಾ (5) ಮತ್ತು ಶೇನ್‌ ವಾಟ್ಸನ್‌ (10) ಕೂಡ ಬೇಗನೆ ಮರಳಿದರು.

ನಂತರ ಇನಿಂಗ್ಸ್ ಮುಂದುವರಿಸುವ ಹೊಣೆ ಅಂಬಟಿ ರಾಯುಡು (ಔಟಾಗದೆ 42; 37ಎ, 3ಬೌಂ, 1ಸಿ) ಮತ್ತು ಮುರಳಿ ವಿಜಯ್‌ (26; 26ಎ, 3ಬೌಂ) ಹೆಗಲ ಮೇಲೆ ಬಿತ್ತು. ಇವರು 33 ರನ್‌ ಸೇರಿಸಿ ಎದುರಾಳಿ ಪಾಳಯದಲ್ಲಿ ಆತಂಕ ಮೂಡಿಸಿದರು. ಆದರೆ ಮುಂಬೈ ಪಟ್ಟು ಬಿಡಲಿಲ್ಲ.

ಪ್ಲೆಸಿ ವಿಕೆಟ್ ಪಡೆದಿದ್ದ ಸ್ಪಿನ್ನರ್ ರಾಹುಲ್ ಚಾಹರ್‌ ಅವರು ಮುರಳಿ ವಿಕೆಟ್ ಉರುಳಿಸಿ ಭಾರಿ ಪೆಟ್ಟು ನೀಡಿದರು.

ನಂತರ ರಾಯುಡು ಮತ್ತು ಧೋನಿ (ಔಟಾಗದೆ 37; 29ಎ, 3ಸಿ) ಮೊತ್ತವನ್ನು ಹೆಚ್ಚಿಸಲು ಪ್ರಯತ್ನಿಸಿದರು. ಐದನೇ ವಿಕೆಟ್‌ಗೆ ಇವರು 66 ರನ್ ಸೇರಿಸಿದರು.

ಚೆನ್ನೈ ತಂಡಕ್ಕೆ ಫೈನಲ್‌ ಪ್ರವೇಶಿಸಲು ಇನ್ನೊಂದು ಅವಕಾಶ ಇದೆ. ಡೆಲ್ಲಿ ಮತ್ತು ಸನ್‌ರೈರ್ಸ್‌ ನಡುವಣ ಎಲಿಮಿನೇಟರ್‌ ಪಂದ್ಯದಲ್ಲಿ ಗೆದ್ದ ತಂಡದ ಜೊತೆ ಈ ತಂಡ ಎರಡನೇ ಕ್ವಾಲಿಫೈಯರ್‌ನಲ್ಲಿ ಸೆಣಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು