ಸೋಮವಾರ, ಡಿಸೆಂಬರ್ 9, 2019
17 °C

ಐಪಿಎಲ್: ಆಟ ಒಂದು ರಂಗು ಹಲವು...

Published:
Updated:

‘ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಇರುವಷ್ಟು ತಾಳ್ಮೆ ಯಾವ ಕ್ರೀಡೆಯ ಅಭಿಮಾನಿಗಳಿಗೂ ಇಲ್ಲ’–ವಾಟ್ಸ್‌ಆ್ಯಪ್‌ನಲ್ಲಿ ಬಂದ ಜೋಕ್ ಇದು.

2008ರಿಂದಲೂ ಆರ್‌ಸಿಬಿ ತಂಡ ಪ್ರಶಸ್ತಿ ಗೆಲ್ಲುತ್ತದೆ ಎಂಬ ಭರವಸೆಯೊಂದಿಗೆ ಪ್ರತಿವರ್ಷವೂ ಅಭಿಮಾನಿಗಳು ಚಿನ್ನಸ್ವಾಮಿ ಅಂಗಳಕ್ಕೆ ಲಗ್ಗೆ ಇಡುತ್ತಿದ್ದಾರೆ. ಆದರೆ, ಇದುವರೆಗೂ ಅವರ ನಿರೀಕ್ಷೆ ಫಲಿಸಿಲ್ಲ. ಕನಸು ನನಸಾಗಿಲ್ಲ. ಆರ್‌ಸಿಬಿ ಆಟಗಾರರ ಪ್ರಯತ್ನಕ್ಕೆ ಪ್ರಶಸ್ತಿ  ಒಲಿದಿಲ್ಲ. ಈ ಬಾರಿಯೂ ಬೆಂಗಳೂರು ಕ್ರಿಕೆಟ್‌ಪ್ರೇಮಿಗಳ ಉತ್ಸಾಹ ಕುಂದಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಒಂದು ಸುತ್ತು ಸುಳಿದಾಡಿದರೆ ಅದರ ಬಿಸಿ ಗೊತ್ತಾಗುತ್ತದೆ.

ಅಲ್ಲದೆ; ಐಪಿಎಲ್ ಪಂದ್ಯ ನೋಡಲು ಕ್ರಿಕೆಟ್‌ ಪ್ರೇಮ ಮಾತ್ರ ಕಾರಣ ಎನ್ನುವುದೆಲ್ಲ ಈಗಿಲ್ಲ. ಕ್ರೀಡಾಂಗಣಕ್ಕೆ ಪಂದ್ಯ ನೋಡಲು ಬರುವವರಿಗೆ ಈಗ ವಿಭಿನ್ನ ಕಾರಣಗಳಿವೆ. ಅದಕ್ಕಾಗಿಯೇ ಟಿಕೆಟ್‌, ಪಾಸ್‌ಗಳಿಗಾಗಿ ಎಡತಾಕುತ್ತಾರೆ.  ಗ್ರೌಂಡ್‌ನ ಗೇಟ್‌ಗಳಿಂದ ಹೊರಬರುವ ಎಲ್ಲರ ಹಿಂದೆ ಓಡೋಡಿ ಹೋಗಿ ‘ಟಿಕೆಟ್ ಇದೆಯಾ ಸರ್?’ ಎಂದು ಕೇಳುವವರ  ಸಂಖ್ಯೆಗೇನೂ ಕಮ್ಮಿಯಿಲ್ಲ.

‘ಅಲ್ರಿ; ಟಿವಿಯಲ್ಲಿಯೇ ಚೆನ್ನಾಗಿ ನೋಡ್ಕೋಬಹುದಲ್ಲ. ಇಲ್ಲಿ ಬಂದು ಸಾವಿರಾರು ರೂಪಾಯಿ ಕೊಟ್ಟು, ನೀರು, ಊಟ ಬಿಟ್ಟು ನೋಡೊದ್ರಲ್ಲಿ ಏನಿದೆ?’ ಎಂದು ಆ ಯುವಕನಿಗೆ ಮರಳಿ ಕೇಳಿದರೆ ಬಂದ ಉತ್ತರ ಅಚ್ಚರಿ ಮೂಡಿಸಿತ್ತು.


ತಮ್ಮ ನೆಚ್ಚಿನ ಶ್ವಾನಗಳೊಂದಿಗೆ ಆರ್‌ಸಿಬಿ ಆಟಗಾರರು

‘ಲೈವ್ ನೋಡೋದ್ರಲ್ಲಿ ಮಜಾ ಇದೆ ಸರ್. ಐಪಿಎಲ್‌ನಲ್ಲಿ  ಆಡುವ ಎರಡೂ ತಂಡಗಳಲ್ಲಿ ಬೇರೆ ಬೇರೆ ದೇಶಗಳ ದೊಡ್ಡ ಆಟಗಾರರು ಒಂದೇ ಕಡೆ ಸಿಗುತ್ತಾರೆ. ಅವರನ್ನು ಹತ್ತಿರದಿಂದ ನೋಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಆ ಹಬ್ಬದ ವಾತಾವರಣದಲ್ಲಿ ಸೆಲ್ಫಿ ತೆಗೆದುಕೊಂಡು ಎಫ್‌ಬಿ(ಫೇಸ್‌ಬುಕ್), ಐಜಿ (ಇನ್ಸ್ಟಾಗ್ರಾಮ್) ನಲ್ಲಿ ಹಾಕಬಹುದು. ಫ್ರೆಂಡ್ಸ್‌, ರಿಲೇಟಿವ್ ಎಲ್ಲರೂ ಲೈಕ್ ಮಾಡ್ತಾರೆ. ಇದೊಂದ್ ತರಾ ಪ್ರೌಢ್‌ ಮೂಮೆಂಟ್. ಅದೃಷ್ಟ ಚೆನ್ನಾಗಿದ್ದರೆ, ಯಾವುದಾದರೂ ಆಟಗಾರನ ಜೊತೆಗೆ ಫೋಟೊ ತೆಗೆಸಿಕೊಂಡರೆ ಇನ್ನೂ ಮಜಾ’ ಎಂದು ಜೋರಾಗಿ ನಕ್ಕ ಆ ಯುವಕನ ಹೆಸರು ನವೀನಕುಮಾರ್. ಎಂ.ಕಾಂ ವಿದ್ಯಾರ್ಥಿ.

ಆನ್‌ಲೈನ್‌ನಲ್ಲಿ ದೊಡ್ಡ ಮೊತ್ತದ ಟಿಕೆಟ್‌ಗಳಷ್ಟೇ ಲಭ್ಯ ಇರುವುದರಿಂದ ಕ್ರೀಡಾಂಗಣದ ಸುತ್ತಮುತ್ತ ಎಡತಾಕುತ್ತಿರುವುದಾಗಿ ಹೇಳಿದರು. ಅವರೊಂದಿಗೆ ಇದ್ದ ಇನ್ನೂ ಇಬ್ಬರದ್ದೂ ಅದೇ ಕಥೆ. ‘ಬ್ಲ್ಯಾಕ್‌ನಲ್ಲಾದರೂ ಸರಿ ತಗೋತೇವೆ’ ಅನ್ನುವುದನ್ನೂ ಹೇಳಲು ಮರೆಯಲಿಲ್ಲ.

‘ಅದು ಹೋಗಲಿ ಬಿಡಿ. ಈ ಟೀಮ್‌ನಲ್ಲಿ ಒಬ್ಬರೂ ಕನ್ನಡಿಗ ಆಟಗಾರರಿಲ್ಲ. ಆದರೂ ಏಕೆ ಸಪೋರ್ಟ್ ಮಾಡ್ತೀರಿ?’ ಎಂಬ ಪ್ರಶ್ನೆಗೆ ಗುಂಪಿನಲ್ಲಿದ್ದ ಮನೀಷ್ ಪ್ರತಿಕ್ರಿಯಿಸಿದ್ದರು.

‘ಹೌದು; ಇಲ್ಲಿಯವರು ತಂಡದಲ್ಲಿ ಇರಬೇಕಿತ್ತು. ಆದರೆ ಇಂಡಿಯನ್ ಟೀಮ್ ನಾಯಕ ವಿರಾಟ್ ಕೊಹ್ಲಿ ಇದ್ದಾರಲ್ಲ. ವಿಶ್ವದಲ್ಲಿ ಇವತ್ತು ನಂಬರ್ ಬ್ಯಾಟ್ಸ್‌ಮನ್ ಇದ್ದಾರೆ. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ ಇದ್ದಾರೆ. ನಮ್ಮ ಹುಡುಗರು ಬೇರೆ ತಂಡಗಳಲ್ಲಿ ಚೆನ್ನಾಗಿ ಆಡ್ತಿದ್ದಾರೆ. ಅಷ್ಟಕ್ಕೂ ಇದು ಐಪಿಎಲ್ ಸರ್. ಕಾಸ್ಮೋಪಾಲಿಟಿನ್ ಮತ್ತು ಕಾರ್ಪೋರೆಟ್‌‘ ಎಂದು ಮುಗುಳ್ನಕ್ಕರು.

ಇದು ಹುಡುಗರ ಮಾತಾಯಿತು. ಕುಟುಂಬಸಮೇತ ಬಂದು ಪಂದ್ಯ ನೋಡುವವರದ್ದು ಒಂದು ವಿಭಿನ್ನ ಅಭಿಪ್ರಾಯ ಇದೆ.

‘ಟಿವಿಯಲ್ಲಿ ನೋಡೋದು ಇದ್ದೇ ಇದೆ. ಫ್ಯಾಮಿಲಿ ಜೊತೆಗೆ ಒಂದು ಪಿಕ್‌ನಿಕ್ ಮಾದರಿಯಲ್ಲಿ ಐಪಿಎಲ್ ಪಂದ್ಯ ನೋಡಬಹುದು. ಈಗ ಒಂದು ಮಾಲ್‌ನಲ್ಲಿ ಸಿನೆಮಾ ನೋಡಲು ಹೋದಾಗ ಆಗುವಷ್ಟೇ ಖರ್ಚು ಇಲ್ಲಿಯೂ ಆಗುತ್ತದೆ. ಆದರೆ ಒಂದು ರೀತಿಯ ವಿಭಿನ್ನ ಅನುಭವ ಲಭಿಸುತ್ತದೆ. ಹರಾಜಿನಲ್ಲಿ ಕೋಟಿ ಕೋಟಿ ಹಣ ಗಳಿಸಿದ ಆಟಗಾರರನ್ನು ಹತ್ತಿರದಿಂದ ನೋಡಬಹುದು. ಮಕ್ಕಳಿಗೂ ಅವರು ಪ್ರೇರಣೆಯಾಗುತ್ತಾರೆ.

ಯಾರಿಗೆ ಗೊತ್ತು ಅದೃಷ್ಟ ಒಲಿದರೆ ನಮ್ಮ ಮಕ್ಕಳೂ ದೊಡ್ಡ ಆಟಗಾರರಾಗಬಹುದು’ ಎಂಬ ಕನಸು ಖಾಸಗಿ ಕಂಪೆನಿ ಉದ್ಯೋಗಿ ಪ್ರವೀಣ್ ರಜಪೂತ್ ಅವರದ್ದು. ಬನಶಂಕರಿ ನಿವಾಸಿಯಾಗಿರುವ ಅವರು ತಮ್ಮ ಇಬ್ಬರು ಮಕ್ಕಳು ಮತ್ತು ಪತ್ನಿಯೊಂದಿಗೆ  ಪಂದ್ಯ ವೀಕ್ಷಿಸಲು ಟಿಕೆಟ್ ಖರೀದಿಸಿದ್ದಾರೆ.

ಈ ಬಾರಿಯ ಐಪಿಎಲ್ ಪಂದ್ಯವು ಗುರುವಾರ ನಡೆಯುತ್ತಿದೆ. ವಾರಾಂತ್ಯದ ದಿನ ನಡೆಯುವ ಪಂದ್ಯಗಳಿಗೆ ಟಿಕೆಟ್‌ಗಳು ಸಿಗುವುದು ಕಷ್ಟ. ಆದ್ದರಿಂದ ಕೆಲಸದ ದಿನಗಳಲ್ಲಿ ಸ್ವಲ್ಪ ಸರಳ. ಆ ಲೆಕ್ಕಾಚಾರದೊಂದಿಗೆ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್‌ ನಡುವಣ ಪಂದ್ಯ ನೋಡಲು ಜನ ಲಗ್ಗೆ ಇಡುತ್ತಿದ್ದಾರೆ. ₹ 1,750 ರಿಂದ ₹ 38 ಸಾವಿರದವರೆಗಿನ ಟಿಕೆಟ್‌ಗಳು ಬಹುತೇಕ ಸೋಲ್ಡ್‌ ಔಟ್ ಆಗಿವೆ.  ಉಚಿತ ಪಾಸ್‌ಗಳಿಗಾಗಿ ಲಾಬಿಯೂ ತಾರಕಕ್ಕೇರಿದೆ.

ಹೂ ಲೆಟ್‌ ದ ಡಾಗ್ಸ್‌ಔಟ್..?
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿ ಜನರಿಗೆ ಅಷ್ಟೇ ಅಲ್ಲ. ಸಾಕುನಾಯಿಗಳಿಗೂ ಪಂದ್ಯ ವೀಕ್ಷಣೆಯ ಭಾಗ್ಯ ಲಭಿಸಲಿದೆ.

ಹೌದು: ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ ಪಂದ್ಯಗಳಲ್ಲಿ ‘ಡಾಗ್‌ಔಟ್’ ನಿರ್ಮಿಸಲಾಗುತ್ತಿದೆ. ಪಂದ್ಯ ವೀಕ್ಷಿಸಲು ಬರುವವವರು ತಮ್ಮ ಸಾಕುನಾಯಿಗಳನ್ನೂ ಕರೆತರಬಹುದಾಗಿದೆ. ಅದಕ್ಕಾಗಿ ವಿಶೇಷ ವ್ಯವಸ್ಥೆ ಇರುವ ಗ್ಯಾಲರಿಯನ್ನು ಇಲ್ಲಿ ನಿರ್ಮಿಸಲಾಗುತ್ತಿದೆ.

‘ಪೆಟ್ ಕೇರ್ ಪರಿಣತರಾದ ಅಶಿತಾ ಮ್ಯಾಥ್ಯೂ, ರಾಶಿ ನಾರಂಗ್ ಮತ್ತು ರಿಧಿಮಾ ಕೋಯೆಲೊ  ಅವರು ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಸಾಕುಪ್ರಾಣಿಗಳ ಆಹಾರ, ಆರೈಕೆ ಮತ್ತು ನಿಗಾ ವ್ಯವಸ್ಥೆಯನ್ನು ಅವರು ನೋಡಿಕೊಳ್ಳುವರು. ವಿಶೇಷ ಆಸನ ವ್ಯವಸ್ಥೆಗಳನ್ನು ಮಾಡಲಾಗಿದೆ’ ಎಂದು ತಂಡದ ಮೂಲಗಳು ತಿಳಿಸಿವೆ.

ಪಂದ್ಯ ವೀಕ್ಷಿಸುವವರಿಗೆ ಒಂದಿಷ್ಟು ಟಿಪ್ಸ್‌

ಏನು ತೆಗೆದುಕೊಂಡು ಹೋಗಬೇಕು?

* ಖರೀದಿಸಿದ ಟಿಕೆಟ್‌ ಅಥವಾ ಪಾಸ್
* ಟಿಕೆಟ್‌ ಅಥವಾ ಪಾಸ್‌ ಮೇಲೆರುವ ಬಾರ್‌ಕೋಡ್‌ ಕೆಡದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಸ್ಕ್ಯಾನ್ ಅಗುವುದಿಲ್ಲ. ಪ್ರವೇಶ ಸಿಗುವುದಿಲ್ಲ.
* ಮೊಬೈಲ್ ಫೋನ್ ಮತ್ತು ಪರ್ಸ್. ವ್ಯಾನಿಟಿ ಬ್ಯಾಗ್‌ ಒಯ್ಯಲು ಅವಕಾಶವಿದೆ. ಆದರೆ ತಪಾಸಣೆ ಕಡ್ಡಾಯ
* ತಂಡಗಳ ಧ್ವಜ, ಪ್ಲೆಕಾರ್ಡ್ಸ್‌ ಕೊಂಡೊಯ್ಯಬಹುದು.

ಏನು ಒಯ್ಯಬಾರದು?
* ನೀರಿನ ಬಾಟಲಿ, ಟಾರ್ಚ್‌ ಇತ್ಯಾದಿ.
* ಚಾಕು, ಸೂಜಿ, ಹರಿತವಾದ ವಸ್ತುಗಳು, ಲೋಹ, ನಾಣ್ಯಗಳು.
* ಹೊರಗಿನ ಆಹಾರ ವಸ್ತುಗಳು ಇತ್ಯಾದಿ.
* ಕೆಲವು ಆಯ್ದ ಗ್ಯಾಲರಿಗಳಲ್ಲಿ ಉಚಿತ ಆಹಾರ ಪೊಟ್ಟಣಗಳನ್ನು ನೀಡಲಾಗುತ್ತದೆ. ಉಳಿದಂತೆ ಗ್ಯಾಲರಿಗಳಲ್ಲಿರುವ ಆಹಾರ ಮಳಿಗೆಗಳಲ್ಲಿ ಖರೀದಿಸುವ ಅವಕಾಶವೂ ಇದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು