ಐಪಿಎಲ್ ಕ್ರಿಕೆಟ್: ಮುಂಬೈಗೆ ಶುಭಾರಂಭದ ಕನಸು

ಸೋಮವಾರ, ಏಪ್ರಿಲ್ 22, 2019
29 °C

ಐಪಿಎಲ್ ಕ್ರಿಕೆಟ್: ಮುಂಬೈಗೆ ಶುಭಾರಂಭದ ಕನಸು

Published:
Updated:
Prajavani

ಮುಂಬೈ: ಮೂರು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡ ಐಪಿಎಲ್‌ 12ನೇ ಆವೃತ್ತಿಯಲ್ಲಿ ಗೆಲುವಿನ ಮುನ್ನುಡಿ ಬರೆಯಲು ಕಾತರವಾಗಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ ಹಣಾಹಣಿಯಲ್ಲಿ ರೋಹಿತ್‌ ಶರ್ಮಾ ಮುಂದಾಳತ್ವದ ಮುಂಬೈ, ಡೆಲ್ಲಿ ಕ್ಯಾಪಿಟಲ್ಸ್‌ ಸವಾಲು ಎದುರಿಸಲಿದೆ.

ಮುಂಬೈ ತಂಡದಲ್ಲಿರುವ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಮೇಲೆ ಎಲ್ಲರ ಗಮನ ನೆಟ್ಟಿದೆ. ಗಾಯದ ಕಾರಣ ಏಷ್ಯಾಕಪ್‌ ಮತ್ತು ಆಸ್ಟ್ರೇಲಿಯಾ ಎದುರಿನ ಸರಣಿಗೆ ಅಲಭ್ಯರಾಗಿದ್ದ ಹಾರ್ದಿಕ್‌, ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಸ್ಥಾನ ಗಳಿಸುವ ಕನಸು ಹೊಂದಿದ್ದಾರೆ. ಐಪಿಎಲ್‌ನಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಿ ಆಯ್ಕೆ ಸಮಿತಿಯ ಗಮನ ಸೆಳೆಯುವತ್ತ ಅವರು ಚಿತ್ತ ಹರಿಸಿದ್ದಾರೆ.

ಈ ಬಾರಿಯ ಹರಾಜಿನಲ್ಲಿ ಮೂಲ ಬೆಲೆಗೆ (₹ 2 ಕೋಟಿ) ಮುಂಬೈ ಪಾಲಾಗಿದ್ದ ಯುವರಾಜ್‌ ಸಿಂಗ್‌, ಅಬ್ಬರಿಸುವರೇ ಎಂಬ ಕುತೂಹಲವೂ ಅಭಿಮಾನಿಗಳಲ್ಲಿ ಗರಿಗೆದರಿದೆ.

ರೋಹಿತ್‌, ಕೀರನ್ ಪೊಲಾರ್ಡ್‌, ಬೆನ್‌ ಕಟಿಂಗ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಅವರು ಆತಿಥೇಯರ ಬ್ಯಾಟಿಂಗ್‌ ವಿಭಾಗಕ್ಕೆ ಬಲ ತುಂಬಲಿದ್ದಾರೆ.

ಬೌಲಿಂಗ್‌ನಲ್ಲಿ ಜಸ್‌ಪ್ರೀತ್‌ ಬೂಮ್ರಾ, ಬರಿಂದರ್‌ ಸರನ್‌, ಲಸಿತ್ ಮಾಲಿಂಗ, ಮಿಷೆಲ್‌ ಮೆಕ್‌ಲೆನಾಗನ್‌ ಅವರು ತಂಡದ ಶಕ್ತಿಯಾಗಿದ್ದಾರೆ.

ಆಲ್‌ರೌಂಡರ್‌ಗಳಾದ ಕೃಣಾಲ್‌ ಪಾಂಡ್ಯ ಮತ್ತು ಜಯಂತ್ ಯಾದವ್‌ ಅವರ ಬಲವೂ ಮುಂಬೈಗಿದೆ. ಅನುಕೂಲ್‌ ರಾಯ್‌, ರಾಹುಲ್‌ ಚಾಹರ್‌ ಮತ್ತು ಮಯಂಕ್‌ ಮಾರ್ಕಂಡೆ ತಮ್ಮ ಬತ್ತಳಿಕೆಯಲ್ಲಿರುವ ಸ್ಪಿನ್‌ ಅಸ್ತ್ರಗಳನ್ನು ಪ್ರಯೋಗಿಸಿ ಡೆಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಸನ್ನದ್ಧರಾಗಿದ್ದಾರೆ.

ಹಿಂದಿನ ಆವೃತ್ತಿಗಳಲ್ಲಿ ನೀರಸ ಆಟ ಆಡಿದ್ದ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ ಎಂಬ ಹೆಸರಿನೊಂದಿಗೆ ಅದೃಷ್ಟ ಪರೀಕ್ಷೆಗೆ ಇಳಿ‌ಯುತ್ತಿದೆ.

ಶಿಖರ್‌ ಧವನ್‌ ಈ ತಂಡದ ಆಕರ್ಷಣೆಯಾಗಿದ್ದಾರೆ. ಹಿಂದಿನ ಆವೃತ್ತಿಗಳಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಪರ ಆಡಿದ್ದ ಶಿಖರ್‌ ಅವರನ್ನು ಈ ಬಾರಿ ಡೆಲ್ಲಿ ತಂಡವು ತನ್ನತ್ತ ಸೆಳೆದುಕೊಂಡಿದೆ.

ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಪೃಥ್ವಿ ಶಾ ಅವರಂತಹ ಯುವ ತಾರೆಯರೂ ಈ ತಂಡದಲ್ಲಿದ್ದಾರೆ.

ಟ್ರೆಂಟ್‌ ಬೌಲ್ಟ್‌, ಇಶಾಂತ್‌ ಶರ್ಮಾ, ಕಗಿಸೊ ರಬಾಡ ಅವರು ವೇಗದ ಬೌಲಿಂಗ್‌ನ ಆಧಾರಸ್ಥಂಭಗಳಾಗಿದ್ದು, ಮುಂಬೈ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಲು ಕಾತರರಾಗಿದ್ದಾರೆ.

ಆರಂಭ: ರಾತ್ರಿ 8.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !