ಭಾರತದಲ್ಲೇ ನಡೆಯಲಿದೆ ಐಪಿಎಲ್‌

7
ಮಾರ್ಚ್‌ 23ರಂದು ಉದ್ಘಾಟನಾ ಪಂದ್ಯ : ಮುಂದಿನ ತಿಂಗಳು ವೇಳಾಪಟ್ಟಿ ಪ್ರಕಟ ಸಾಧ್ಯತೆ

ಭಾರತದಲ್ಲೇ ನಡೆಯಲಿದೆ ಐಪಿಎಲ್‌

Published:
Updated:

ನವದೆಹಲಿ: ಹನ್ನೆರಡನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಎಲ್ಲಿ ಆಯೋಜನೆಯಾಗಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಈ ಬಾರಿಯ ಲೀಗ್‌ ಭಾರತದಲ್ಲೇ ನಡೆಯಲಿದೆ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಣೆಯಲ್ಲಿ ತಿಳಿಸಿದೆ.

ಮಂಗಳವಾರ ನಡೆದ ಬಿಸಿಸಿಐ ಆಡಳಿತಾಧಿಕಾರಿಗಳ (ಸಿಒಎ) ಸಭೆಯಲ್ಲಿ ಈ ಸಲದ ಲೀಗ್‌ನ ಪಂದ್ಯಗಳನ್ನು ಭಾರತದಲ್ಲೇ ಆಯೋಜಿಸಲು ತೀರ್ಮಾನಿಸಲಾಗಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಂದ್ಯಗಳನ್ನು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ಅಥವಾ ದಕ್ಷಿಣ ಆಫ್ರಿಕಾದಲ್ಲಿ ನಡೆಸಲು ಬಿಸಿಸಿಐ ಚಿಂತಿಸಿದೆ ಎಂದು ಈ ಹಿಂದೆ ಹೇಳಲಾಗಿತ್ತು.

‘ಈ ಬಾರಿಯ ಲೀಗ್‌ ಅನ್ನು ಭಾರತದಲ್ಲೇ ನಡೆಸಲು ನಿರ್ಧರಿಸಿದ್ದೇವೆ. ಈ ಹಿಂದೆ ನಡೆದ ಕ್ರೀಡಾಂಗಣಗಳಲ್ಲೇ ಪಂದ್ಯಗಳು ಜರುಗಲಿವೆ. ಚುನಾವಣೆ ಘೋಷಣೆಯಾದ ಬಳಿಕ ರಾಜಕೀಯ ನಾಯಕರ ರ‍್ಯಾಲಿಗಳು ಮತ್ತು ಸಮಾರಂಭಗಳು ನಡೆಯಬಹುದು. ಆಗ ಭದ್ರತೆಯ ಸಮಸ್ಯೆ ಎದುರಾಗಬಹುದು.

ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪರ್ಯಾಯವಾಗಿ ಕೆಲ ಕ್ರೀಡಾಂಗಣಗಳನ್ನು ಗುರುತಿಸಿದ್ದೇವೆ. ಅಗತ್ಯ ಬಿದ್ದರೆ ಈ ಮೈದಾನಗಳಿಗೆ ಪಂದ್ಯಗಳನ್ನು ಸ್ಥಳಾಂತರಿಸಲಾಗುತ್ತದೆ. ಕೇಂದ್ರ ಮತ್ತು ಸಂಬಂಧಿತ ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಿ ವೇಳಾಪಟ್ಟಿ ಸಿದ್ಧಪಡಿಸಲಿದ್ದು ಅದನ್ನು ಶೀಘ್ರವೆ ಬಹಿರಂಗಪಡಿಸುತ್ತೇವೆ’ ಎಂದು ಸಿಒಎ ಮುಖ್ಯಸ್ಥ ವಿನೋದ್‌ ರಾಯ್‌ ಹೇಳಿದ್ದಾರೆ.

ಸಾರ್ವತ್ರಿಕ ಚುನಾವಣೆಯ ಕಾರಣ 2009ರ ಲೀಗ್‌ ಅನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿತ್ತು. 2014ರ ಲೀಗ್‌ನ ಕೆಲ ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸಲಾಗಿತ್ತು.

ಸಾಮಾನ್ಯವಾಗಿ ಐಪಿಎಲ್‌ ಏಪ್ರಿಲ್‌ ಮೊದಲ ವಾರದಲ್ಲಿ ಆರಂಭವಾಗಿ ಮೇ ಕೊನೆಯ ವಾರದಲ್ಲಿ ಮುಕ್ತಾಯವಾಗುತ್ತಿತ್ತು. ಇಂಗ್ಲೆಂಡ್‌ನಲ್ಲಿ ಮೇ 30ರಿಂದ ಜುಲೈ 14ರವರೆಗೆ ಏಕದಿನ ವಿಶ್ವಕಪ್‌ ನಡೆಯುತ್ತಿರುವ ಕಾರಣ ಈ ಸಲದ ವೇಳಾಪಟ್ಟಿಯಲ್ಲಿ ಮಾರ್ಪಾಡು ಮಾಡ ಲಾಗಿದೆ. ಮೇ 12ರಿಂದ 15ರೊಳಗೆ ಲೀಗ್‌ನ ಫೈನಲ್‌ ಪಂದ್ಯ ನಡೆಯುವ ಸಾಧ್ಯತೆ ಇದೆ. ಫೆಬ್ರುವರಿಯಲ್ಲಿ ವೇಳಾಪಟ್ಟಿ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !