ಶುಕ್ರವಾರ, ಡಿಸೆಂಬರ್ 6, 2019
18 °C

ಐಪಿಎಲ್‌: ಪಿಐಎಲ್ ವಜಾ ಮಾಡಿದ ನ್ಯಾಯಾಲಯ

Published:
Updated:
Prajavani

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿ ಸಂದರ್ಭದಲ್ಲಿ ಶಬ್ದ ಮಾಲಿನ್ಯ ತಡೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಮುಂಬೈ ಹೈಕೋರ್ಟ್ ವಜಾ ಮಾಡಿದೆ.

ವಕೀಲ ಕಪಿಲ್ ಸೋನಿ ಅವರು 2014ರಲ್ಲಿ ಪಿಐಎಲ್‌ ಸಲ್ಲಿಸಿದ್ದರು. 2013ರಲ್ಲಿ ವಾಂಖೆಡೆ ಕ್ರೀಡಾಂಗಣ ಮತ್ತು ಪುಣೆಯ ಸುಬ್ರತಾ ರಾಯ್ ಕ್ರೀಡಾಂಗಣದಲ್ಲಿ ನಡೆದಿದ್ದ ಐಪಿಎಲ್ ಪಂದ್ಯಗಳ ಸಂದರ್ಭದಲ್ಲಿ ಶಬ್ದ ಮಾಲಿನ್ಯ ತಡೆ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು ಎಂದು ಅವರು ದೂರಿದ್ದರು. 

ಪಂದ್ಯಗಳು ಆರಂಭವಾಗುವುದಕ್ಕೆ ಮೊದಲು ಶುರುವಾಗುವ ಭಾರಿ ಶಬ್ದವು ಪ್ರಶಸ್ತಿ ವಿತರಣೆ ಸಮಾರಂಭದ ವರೆಗೂ ಮುಂದುವರಿಯುತ್ತದೆ. ಈ ಮೂಲಕ ಮಾಲಿನ್ಯಕ್ಕೆ ಕಾರಣವಾದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ) ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಭಾರಿ ಮೊತ್ತದ ದಂಡ ಹೇರಬೇಕು ಎಂದು ಕೂಡ ಕಪಿಲ್ ಸೋನಿ ಆಗ್ರಹಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠದ ಮುಖ್ಯ ನ್ಯಾಯಮೂರ್ತಿ ಪ್ರದೀಪ್ ನಂದ್ರಾಜೋಗ್ ಮತ್ತು ನ್ಯಾಯಮೂರ್ತಿ ಎನ್‌.ಎಂ.ಜಾಮದಾರ್ ಅವರು ಅರ್ಜಿಯನ್ನು ವಜಾ ಮಾಡಿ ‘ಸಮಾಜದಲ್ಲಿ ಸ್ವಲ್ಪ ಸದ್ದುಗದ್ದಲವೂ ಇರಲಿ’ ಎಂದು ಅಭಿಪ್ರಾಯಪಟ್ಟರು.

‘ಕ್ರಿಕೆಟ್ ಪಂದ್ಯಗಳು ನಡೆಯುವಾಗ ಬ್ಯಾಟ್ಸ್‌ಮನ್ ಬೌಂಡರಿ ಸಿಕ್ಸರ್‌ ಗಳಿಸಿದರೆ ಮತ್ತು ಬೌಲರ್ ವಿಕೆಟ್ ಉರುಳಿಸಿದರೆ ಪ್ರೇಕ್ಷಕರು ಖುಷಿಪಡುವುದು ಸಹಜ. ಜನರು ಸಂಭ್ರಮಿಸಲಿ ಬಿಡಿ’ ಎಂದು ಅವರು ಹೇಳಿದರು.

ಅರ್ಜಿದಾರ ವಾಂಖೆಡೆ ಕ್ರೀಡಾಂಗಣದಿಂದ 40 ಕಿಮೀ ದೂರದಲ್ಲಿ ವಾಸವಾಗಿರುವ ವ್ಯಕ್ತಿ ಎಂಬುದನ್ನು ಉಲ್ಲೇಖಿಸಿದ ಪೀಠವು ‘ವಾಂಖೆಡೆ ಕ್ರೀಡಾಂಗಣದಲ್ಲಿ ಸದ್ದಾದರೆ ಅರ್ಜಿದಾರನಿಗೆ ತೊಂದರೆ ಹೇಗಾಗುತ್ತದೆ, ಕ್ರೀಡಾಂಗಣದ ಸಮೀಪ ವಾಸಿಸುವ ಯಾರಿಗೂ ಇಲ್ಲದ ಸಮಸ್ಯೆ ಅರ್ಜಿದಾರನಿಗೆ ಹೇಗಾಯಿತು’ ಎಂದು ಕೇಳಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು