ಧೋನಿ–ಅಶ್ವಿನ್‌ ಮುಖಾಮುಖಿ

ಸೋಮವಾರ, ಏಪ್ರಿಲ್ 22, 2019
32 °C
ಇಂದು ಸೂಪರ್‌ ಕಿಂಗ್ಸ್‌–ಕಿಂಗ್ಸ್‌ ಇಲೆವನ್‌ ಪಂಜಾಬ್‌ ಪಂದ್ಯ

ಧೋನಿ–ಅಶ್ವಿನ್‌ ಮುಖಾಮುಖಿ

Published:
Updated:
Prajavani

ಚೆನ್ನೈ: ಸೌಮ್ಯ ಸ್ವಭಾವದ ನಾಯಕ ಮಹೇಂದ್ರ ಸಿಂಗ್‌ ಧೋನಿ ಮತ್ತು ಆಕ್ರಮಣಕಾರಿ ಶೈಲಿಯ ಮುಂದಾಳು ರವಿಚಂದ್ರನ್‌ ಅಶ್ವಿನ್‌ ಅವರು ಶನಿವಾರ ಮುಖಾಮುಖಿಯಾಗಲಿದ್ದಾರೆ.

ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡವನ್ನು ಮುನ್ನಡೆಸುತ್ತಿರುವ ಅಶ್ವಿನ್‌, ತಾವು ಆಡಿ ಬೆಳೆದ ಚೆಪಾಕ್‌ ಅಂಗಳದಲ್ಲಿ ಆತಿಥೇಯ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಕಟ್ಟಿಹಾಕಲು ಸಜ್ಜಾಗಿದ್ದಾರೆ.

ಐಪಿಎಲ್‌ ಆರಂಭದಿಂದಲೂ ಅಶ್ವಿನ್‌, ಸೂಪರ್‌ ಕಿಂಗ್ಸ್‌ ತಂಡದಲ್ಲಿದ್ದರು. ಆದರೆ ಹಿಂದಿನ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಚೆನ್ನೈ ತಂಡ ಅವರನ್ನು ಖರೀದಿಸಲು ನಿರಾಸಕ್ತಿ ತೋರಿತ್ತು. ಹೀಗಾಗಿ ಪಂಜಾಬ್‌ ಪಾಲಾಗಿದ್ದರು.

ಕಿಂಗ್ಸ್‌ ಇಲೆವನ್‌ ತಂಡ ಈ ಬಾರಿ ಆಡಿರುವ ನಾಲ್ಕು ಪಂದ್ಯಗಳ ‍ಪೈಕಿ ಮೂರರಲ್ಲಿ ಗೆದ್ದು ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ. ಚೆನ್ನೈ ಕೂಡಾ ಇಷ್ಟೇ ಪಂದ್ಯಗಳಲ್ಲಿ ಜಯಿಸಿದ್ದು ಪಟ್ಟಿಯಲ್ಲಿ ಮೂರನೇ ಸ್ಥಾನ ಹೊಂದಿದೆ. ಈ ಪಂದ್ಯದಲ್ಲಿ ವಿಜಯಿಯಾದವರಿಗೆ ಅಗ್ರಸ್ಥಾನಕ್ಕೇರುವ ಅವಕಾಶ ಇದೆ.

ಹಿಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಅಚ್ಚರಿಯ ರೀತಿಯಲ್ಲಿ ಗೆದ್ದಿದ್ದ ಕಿಂಗ್ಸ್‌ ಇಲೆವನ್‌, ವಿಶ್ವಾಸದ ಉತ್ತುಂಗದಲ್ಲಿ ತೇಲುತ್ತಿದೆ. ಡೆಲ್ಲಿ ವಿರುದ್ಧ ವಿಶ್ರಾಂತಿ ಪಡೆದಿದ್ದ ಕ್ರಿಸ್‌ ಗೇಲ್‌ ಈ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಒಂದೊಮ್ಮೆ ಅವರು ಆಡಿದರೆ ಚೆನ್ನೈ ಬೌಲರ್‌ಗಳಿಗೆ ಸಂಕಷ್ಟ ತಪ್ಪಿದ್ದಲ್ಲ.

ಕನ್ನಡಿಗರಾದ ಕೆ.ಎಲ್‌.ರಾಹುಲ್‌ ಮತ್ತು ಮಯಂಕ್‌ ಅಗರವಾಲ್‌ ಅವರೂ ಬ್ಯಾಟಿಂಗ್‌ನಲ್ಲಿ ಅಶ್ವಿನ್‌ ಪಡೆಯ ಆಧಾರ ಸ್ಥಂಭಗಳಾಗಿದ್ದಾರೆ. ಉತ್ತಮ ಲಯದಲ್ಲಿರುವ ಇವರು ಚೆಪಾಕ್‌ ಅಂಗಳದಲ್ಲೂ ರನ್‌ ಗೋಪುರ ಕಟ್ಟಲು ಉತ್ಸುಕರಾಗಿದ್ದಾರೆ.

ಡೆಲ್ಲಿ ವಿರುದ್ಧ ‘ಹ್ಯಾಟ್ರಿಕ್‌’ ವಿಕೆಟ್‌ ಉರುಳಿಸಿ ಗಮನ ಸೆಳೆದಿದ್ದ ಇಂಗ್ಲೆಂಡ್‌ನ ಆಲ್‌ರೌಂಡರ್‌ ಸ್ಯಾಮ್‌ ಕರನ್‌ ಮೇಲೂ ಅಭಿಮಾನಿಗಳು ಚಿತ್ತ ನೆಟ್ಟಿದ್ದಾರೆ. ಸರ್ಫರಾಜ್‌ ಖಾನ್‌ ಹಾಗೂ ಡೇವಿಡ್‌ ಮಿಲ್ಲರ್‌ ಮೇಲೂ ಹೆಚ್ಚಿನ ನಿರೀಕ್ಷೆ ಇದೆ.

ಬೌಲಿಂಗ್‌ನಲ್ಲಿ ಕರನ್‌, ಮೊಹಮ್ಮದ್‌ ಶಮಿ, ಮುರುಗನ್‌ ಅಶ್ವಿನ್‌, ಮುಜೀಬ್‌ ಉರ್‌ ರಹಮಾನ್‌ ಅವರ ಬಲ ಅಶ್ವಿನ್‌ ಪಡೆಗಿದೆ.

ಹಾಲಿ ಚಾಂಪಿಯನ್‌ ಚೆನ್ನೈ, ಈ ಬಾರಿ ತವರಿನಲ್ಲಿ ಆಡಿದ ಎರಡು ಪಂದ್ಯಗಳಲ್ಲೂ ಗೆದ್ದಿದ್ದು, ಈಗ ‘ಹ್ಯಾಟ್ರಿಕ್‌’ ಸಾಧನೆ ಮಾಡುವತ್ತ ಗಮನ ಹರಿಸಿದೆ.

ಈ ಕನಸು ಸಾಕಾರಗೊಳ್ಳಬೇಕಾದರೆ ‘ಮಹಿ’ ಪಡೆ ಬ್ಯಾಟಿಂಗ್‌ನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಆಡಬೇಕು. ಈ ತಂಡ ಹಿಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ಗೆ ಮಣಿದಿತ್ತು. ಇನಿಂಗ್ಸ್‌ ಆರಂಭಿಸುವ ಅಂಬಟಿ ರಾಯುಡು ಮತ್ತು ಶೇನ್‌ ವಾಟ್ಸನ್‌ ಅವರ ವೈಫಲ್ಯ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸುತ್ತಿದೆ. ಸುರೇಶ್‌ ರೈನಾ, ಕೇದಾರ್‌ ಜಾಧವ್‌, ಡ್ವೇನ್‌ ಬ್ರಾವೊ ಮತ್ತು ರವೀಂದ್ರ ಜಡೇಜ ಸ್ಥಿರ ಸಾಮರ್ಥ್ಯ ತೋರಬೇಕಿದೆ. ನಾಯಕ ಧೋನಿ ಹಿಂದಿನ ಪಂದ್ಯಗಳಲ್ಲಿ ಉತ್ತಮ ಆಟ ಆಡಿದ್ದು ಈ ಪಂದ್ಯದಲ್ಲಿ ‘ಹೆಲಿಕಾಪ್ಟರ್‌’ ಹೊಡೆತಗಳ ಮೂಲಕ ತವರಿನ ಅಭಿಮಾನಿಗಳನ್ನು ರಂಜಿಸಲು ಸನ್ನದ್ಧರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !