ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿಗೆ ಕಿಂಗ್ಸ್‌ ಕನ್ನಡಿಗರ ಚಾಲೆಂಜ್!

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಕಿಂಗ್ಸ್‌ ಇಲೆವನ್ ಪಂಜಾಬ್ ಹಣಾಹಣಿ ಇಂದು
Last Updated 23 ಏಪ್ರಿಲ್ 2019, 20:33 IST
ಅಕ್ಷರ ಗಾತ್ರ

ಬೆಂಗಳೂರು: ಸತತ ಅರ್ಧ ಡಜನ್ ಸೋಲುಗಳ ನಂತರ ಪುಟಿದೆದ್ದು ನಿಂತಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಈ ಬಾರಿಯ ಐಪಿಎಲ್ ಟೂರ್ನಿಯ ಪ್ಲೇ ಆಫ್‌ಗೆ ತಲುಪಲು ಇನ್ನೂ ಅವಕಾಶ ಇದೆಯೇ?

ಉದ್ಯಾನನಗರಿಯ ಕ್ರಿಕೆಟ್‌ಪ್ರೇಮಿಗಳ ವಲಯದಲ್ಲಿ ಬಿಸಿ ಚರ್ಚೆಗೆ ಕಾರಣವಾಗಿರುವ ಪ್ರಶ್ನೆ ಇದು. ಲೋಕಸಭೆ ಚುನಾವಣೆಯ ಕಾವು ತಣ್ಣಗಾದ ಮೇಲೆ ಆರ್‌ಸಿಬಿ ಕುರಿತ ಚರ್ಚೆಯೇ ಹೆಚ್ಚು ಮತ್ತೇರಿಸುತ್ತಿದೆ.

ಈ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಬಳಗವು ಮೊದಲ ಆರು ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿದಾಗ, ‘ಈ ಬಾರಿ ಕಪ್ ನಮ್ದಲ್ಲ’ ಎಂಬ ನಿರಾಶವಾದದತ್ತ ಅಭಿಮಾನಿಗಳು ಹೊರಳಿದ್ದರು. ಆದರೆ, ವಿರಾಟ್ ಬಳಗದ ಮೂರು ವಿಜಯಗಳು ಮತ್ತೆ ಸಣ್ಣ ಆಸೆ ಚಿಗುರಿಸಿವೆ.

ಆದರೆ ಹಾದಿ ಸುಲಭವಲ್ಲ. ಪ್ರಪಾತದ ಆಚೆ–ಈಚೆ ಇರುವ ಎರಡು ಪರ್ವತಗಳ ನಡುವೆ ಬಿಗಿದು ಕಟ್ಟಿದ ತಂತಿಯ ಮೇಲಿನ ನಡಿಗೆಯಂತಹ ಕಠಿಣ ಸವಾಲು ಇದೆ. ಬುಧವಾರ ನಡೆಯಲಿರುವ ಕಿಂಗ್ಸ್‌ ಇಲೆವನ್ ಪಂಜಾಬ್ ಎದುರಿನ ಹಣಾಹಣಿ ಸೇರಿದಂತೆ ನಾಲ್ಕು ಪಂದ್ಯಗಳಲ್ಲಿ ಜಯಸಾಧಿಸಬೇಕು. ಉತ್ತಮ ರನ್‌ರೇಟ್ ಗಳಿಸಿ ಗೆಲ್ಲಬೇಕು. ಒಂದರಲ್ಲಿ ಸೋತರೂ ನಿರಾಶೆಯ ಕಣಿವೆ ಸೇರುವುದು ಖಚಿತ.

ಏಪ್ರಿಲ್ 13ರಂದು ಮೊಹಾಲಿಯಲ್ಲಿ ಕಿಂಗ್ಸ್‌ ಎದುರು ಆರ್‌ಸಿಬಿ ಮೊದಲ ಜಯ ಸಾಧಿಸಿತ್ತು. ಬಲಿಷ್ಠ ಕೋಲ್ಕತ್ತ ನೈಟ್ ರೈಡರ್ಸ್‌ ತಂಡವನ್ನೂ ಅದರ ಅಂಗಳದಲ್ಲಿಯೇ ಹಣಿದು ಬಂದಿದ್ದು, ತವರಿನಲ್ಲಿ ಮೂರು ದಿನಗಳ ಹಿಂದೆ ನಡೆದಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ಒಂದು ರನ್‌ನಿಂದ ರೋಚಕವಾಗಿ ಗೆದ್ದಿದ್ದು ಆರ್‌ಸಿಬಿಯ ಆತ್ಮಬಲ ವೃದ್ಧಿಸಿದೆ.

ಅದಕ್ಕೆ ತಕ್ಕಂತೆ ಮೊದಲಿನ ತನ್ನ ಲೋಪಗಳನ್ನು ಸರಿಪಡಿಸಿಕೊಳ್ಳುವ ಪ್ರಯತ್ನದಲ್ಲಿ ತಂಡವು ಬಹುತೇಕ ಸಫಲವೂ ಆಗಿದೆ. ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ಬಂದಿರುವುದು ಆರ್‌ಸಿಬಿ ಬೌಲಿಂಗ್‌ ಬಲಿಷ್ಠಗೊಳಿಸಿದೆ. ಸ್ಪಿನ್ ವಿಭಾಗದಲ್ಲಿ ಯಜುವೇಂದ್ರ ಚಾಹಲ್, ಮಧ್ಯಮವೇಗಿ ಉಮೇಶ್ ಯಾದವ್, ನವದೀಪ್ ಸೈನಿ ಕೂಡ ಉತ್ತಮ ಲಯದಲ್ಲಿದ್ದಾರೆ. ಆದರೆ, ಹೆಚ್ಚು ರನ್‌ ಬಿಟ್ಟುಕೊಡುವುದನ್ನು ನಿಯಂತ್ರಿಸುವ ಅಗತ್ಯವಿದೆ.

ಬ್ಯಾಟಿಂಗ್ ವಿಭಾಗದಲ್ಲಿಯೂ ತುಸು ಆಶಾದಾಯಕ ಬೆಳವಣಿಗೆ ಆಗಿದೆ. ವಿರಾಟ್ ಮತ್ತು ಎಬಿಡಿ ಬಿಟ್ಟರೆ ಆಡುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಪಾರ್ಥಿವ್ ಪಟೇಲ್, ಮೋಯಿನ್ ಅಲಿ ಮತ್ತು ಮಾರ್ಕಸ್ ಸ್ಟೊಯಿನಿಸ್ ಭರವಸೆ ಮೂಡಿಸಿದ್ದಾರೆ. ಆದರೆ ಫೀಲ್ಡಿಂಗ್‌ ಲೋಪಗಳು ಸುಧಾರಣೆಯಾಗದಿದ್ದರೆ ದುಬಾರಿ ದಂಡ ತೆರವು ಸಾಧ್ಯತೆಯೂ ಇದೆ.

ಏಕೆಂದರೆ, ಬೆಂಗಳೂರು ಪಿಚ್‌ನಲ್ಲಿಯೇ ಆಡಿ ಬೆಳೆದ ಕೆ.ಎಲ್. ರಾಹುಲ್, ಕರುಣ್ ನಾಯರ್, ಮಯಂಕ್ ಅಗರವಾಲ್ ಮತ್ತು ಕೆಲ ವರ್ಷಗಳ ಹಿಂದೆ ಆರ್‌ಸಿಬಿಯಲ್ಲಿದ್ದ ಸಿಡಿಲುಮರಿ ಕ್ರಿಸ್‌ ಗೇಲ್ ಕಿಂಗ್ಸ್‌ ತಂಡದಲ್ಲಿದ್ದಾರೆ. ಅವರಿಗೆಲ್ಲ ಇದು ತವರಿನ ಅಂಗಳವಾಗಿದೆ. ಅವರನ್ನು ಕಟ್ಟಿಹಾಕುವ ಕರಾರುವಾಕ್ ಯೋಜನೆ ರೂಪಿಸದೇ ಹೋದರೆ, ಗೆಲುವಿನ ಅವಕಾಶವನ್ನು ಕೈಚೆಲ್ಲಿದಂತೆಯೇ ಸರಿ.

***

ಡೇಲ್ ಸ್ಟೇನ್ ಬಂದಿರುವುದರಿಂದ ನಮ್ಮ ಬಲ ಹೆಚ್ಚಿದೆ. ಬೌಲಿಂಗ್‌ನಲ್ಲಿರುವ ದೌರ್ಬಲ್ಯಗಳಿಂದ ಚೇತರಿಸಿಕೊಂಡಿದ್ದೇವೆ. ಪವರ್ ಪ್ಲೇ ಹಂತದಲ್ಲಿಯೇ 2–3 ವಿಕೆಟ್ ಕಬಳಿಸುವ ಡೇಲ್ ತಂಡದ ಮುನ್ನಡೆಗೆ ಪ್ರಮುಖ ಕಾಣಿಕೆ ನೀಡುತ್ತಿದ್ದಾರೆ.
–ಮೋಯಿನ್ ಅಲಿ, ಆರ್‌ಸಿಬಿ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT