ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪ್ಟೆಂಬರ್‌ 19ರಿಂದ ಐಪಿಎಲ್‌: ಬ್ರಿಜೇಶ್‌ ಪಟೇಲ್‌

Last Updated 24 ಜುಲೈ 2020, 9:22 IST
ಅಕ್ಷರ ಗಾತ್ರ

ನವದೆಹಲಿ: ‘ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್) ಕ್ರಿಕೆಟ್‌ ಟೂರ್ನಿಯು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ (ಯುಎಇ) ಸೆಪ್ಟೆಂಬರ್‌ 19ರಂದು ಆರಂಭವಾಗಲಿದೆ. ನವೆಂಬರ್‌ 8ರಂದು ಫೈನಲ್‌ ಪಂದ್ಯ ನಡೆಯಲಿದೆ‘ ಎಂದು ಐಪಿಎಲ್‌ ಅಧ್ಯಕ್ಷ ಬ್ರಿಜೇಶ್‌ ಪಟೇಲ್‌ ಶುಕ್ರವಾರ ಖಚಿತಪಡಿಸಿದ್ದಾರೆ.

’ವೇಳಾಪಟ್ಟಿಯನ್ನು ಅಂತಿಮಗೊಳಿಸಲು ಐಪಿಎಲ್‌ ಆಡಳಿತ ಮಂಡಳಿ ಶೀಘ್ರ ಸಭೆ ಸೇರಲಿದೆ. ಸೆಪ್ಟೆಂಬರ್‌ 19ರಿಂದ ನವೆಂಬರ್‌ 8ರವರೆಗೆ ಟೂರ್ನಿ ನಡೆಯಲಿದೆ. ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ. 51 ದಿನಗಳ ಪೂರ್ಣ ಪ್ರಮಾಣದ ಟೂರ್ನಿ ಆಯೋಜನೆಯಾಗಲಿದೆ‘ ಎಂದು ಬ್ರಿಜೇಶ್‌ ನುಡಿದರು.

ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಪಾಲಿಸಬೇಕಾದ ನಿಯಮಗಳನ್ನು (ಎಸ್‌ಒಪಿ) ರೂಪಿಸಲಾಗುತ್ತಿದೆ. ಈ ಕುರಿತು ಎಮಿರೇಟ್ಸ್‌ ಕ್ರಿಕೆಟ್‌ ಮಂಡಳಿಗೆ ಮಾಹಿತಿ ನೀಡಲಾಗುವುದು. ಖಾಲಿ ಕ್ರೀಡಾಂಗಣ ಅಥವಾ ಪ್ರೇಕ್ಷಕರಿಗೆ ಅವಕಾಶ ನೀಡುವ ನಿರ್ಧಾರ ಯುಎಇ ಸರ್ಕಾರದ್ದಾಗಿದೆ‘ ಎಂದು ಅವರು ಮಾಹಿತಿ ನೀಡಿದರು.

ಯುಎಇನಲ್ಲಿ ಮೂರು ಕ್ರೀಡಾಂಗಣಗಳು ಲಭ್ಯ ಇವೆ. ದುಬೈ ಇಂಟರ್‌ನ್ಯಾಶನಲ್‌, ಶೇಕ್‌ ಜಾಯೇದ್‌ ಕ್ರೀಡಾಂಗಣ (ಅಬುಧಾಬಿ) ಹಾಗೂ ಶಾರ್ಜಾ ಕ್ರೀಡಾಂಗಣ.

ತಂಡಗಳ ತರಬೇತಿಗಾಗಿ ಐಸಿಸಿ ಅಕಾಡೆಮಿಯ ಅಧೀನದಲ್ಲಿರುವ ಕ್ರೀಡಾಂಗಣಗಳನ್ನು ಬಿಸಿಸಿಐ ಬಾಡಿಗೆಗೆ ಪಡೆಯಲಿದೆ ಎಂದು ತಿಳಿದುಬಂದಿದೆ.

ದುಬೈನ ಆರೋಗ್ಯ ಕಾರ್ಯವಿಧಾನಗಳ ಅನ್ವಯ, ಕೋವಿಡ್‌–19 ಫಲಿತಾಂಶದ ವರದಿ ’ನೆಗೆಟಿವ್‌‘ ಬಂದಿರುವವರಿಗೆ ಕ್ವಾರಂಟೈನ್‌ ಅಗತ್ಯವಿಲ್ಲ. ಈ ವರದಿಯನ್ನು ತಮ್ಮೊಂದಿಗೆ ಕೊಂಡೊಯ್ಯದವರು ತಪಾಸಣೆಗೆ ಒಳಗಾಗಬೇಕಾಗುತ್ತದೆ.

ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌–ನವೆಂಬರ್‌ನಲ್ಲಿ ನಿಗದಿಯಾಗಿದ್ದ ಟ್ವೆಂಟಿ–20 ವಿಶ್ವಕಪ್‌ ಟೂರ್ನಿಯನ್ನು ಮುಂದೂಡಲು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಸೋಮವಾರ ನಿರ್ಧರಿಸಿತ್ತು. ಹೀಗಾಗಿ ಐಪಿಎಲ್‌ ಆಯೋಜನೆಗೆ ಅವಕಾಶ ಒದಗಿದೆ.

ಐಪಿಎಲ್‌ ಟೂರ್ನಿಯು ಸೆಪ್ಟೆಂಬರ್‌ 26ಕ್ಕೆ ಆರಂಭವಾಗಲಿದೆ ಎಂಬ ಊಹಾಪೋಹಗಳು ಇದ್ದವು. ಆದರೆ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸಕ್ಕೆ ತೊಂದರೆಯಾಗಬಾರದು ಎಂಬಉದ್ದೇಶದಿಂದ ಐಪಿಎಲ್‌ಅನ್ನು ಒಂದು ವಾರ ಮುಂಚೆಯೇ ಆರಂಭಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

’ಆಸ್ಟ್ರೇಲಿಯಾ ಸರ್ಕಾರವು ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ರೂಪಿಸಿರುವ ನಿಯಮಗಳ ಅನ್ವಯ, ಭಾರತ ತಂಡವು 14 ದಿನಗಳ ಕಡ್ಡಾಯ ಕ್ವಾರಂಟೈನ್‌ನಲ್ಲಿ ಇರಲಿದೆ. ಹೀಗಾಗಿ ಐಪಿಎಲ್‌ನಿಂದಾಗಿ ಭಾರತ ತಂಡವು, ಆಸ್ಟ್ರೇಲಿಯಾಕ್ಕೆ ತಡವಾಗಿ ತಲುಪಬಾರದು ಎಂಬ ಉದ್ದೇಶವಿದೆ‘ ಎಂದು ಹೆಸರು ಹೇಳಲಿಚ್ಛಿಸಿದ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ನುಡಿದರು.

ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿ ಆಡಲಿದೆ. ಡಿಸೆಂಬರ್‌ 3ರಂದು ಬ್ರಿಸ್ಬೇನ್‌ನಲ್ಲಿ ಮೊದಲ ಪಂದ್ಯ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT