ಗುರುವಾರ , ಡಿಸೆಂಬರ್ 3, 2020
23 °C

ಐಪಿಎಲ್ ಯಶಸ್ಸಿಗೆ ಆಟಗಾರರ ಬದ್ಧತೆ ಕಾರಣ: ಗಂಗೂಲಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಜೀವ ಸುರಕ್ಷಾ ವಾತಾವರಣ ನಿಯಮದಡಿಯಲ್ಲಿ ಆಡುವುದು ಮಾನಸಿಕವಾಗಿ ಕಠಿಣ ಸವಾಲಾಗಿತ್ತು. ಆದರೆ ಆಟಗಾರರು ತಮ್ಮ ಬದ್ಧತೆ ಮತ್ತು ಪರಿಶ್ರಮದಿಂದ ಸವಾಲನ್ನು ದಿಟ್ಟತನದಿಂದ ಎದುರಿಸಿ ಐಪಿಎಲ್ ಟೂರ್ನಿಯನ್ನು ಯಶಸ್ವಿಗೊಳಿಸಿದ್ದಾರೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಮಂಗಳವಾರ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಮುಕ್ತಾಯವಾದ ಐಪಿಎಲ್ ಟೂರ್ನಿಯ ಯಶಸ್ಸಿನ ಶ್ರೇಯವನ್ನು ಅವರು ಆಟಗಾರರಿಗೇ ಅರ್ಪಿಸಿದರು.

’ಪ್ರತಿಯೊಬ್ಬ ಆಟಗಾರ, ಪ್ರತಿ ತಂಡವನ್ನು ನಾನು ಅಭಿನಂದಿಸುತ್ತೇನೆ. ಭಾರತ ಕ್ರಿಕೆಟ್‌ಗೆ ಇರುವ ಘನತೆಯನ್ನು ಹೆಚ್ಚಿಸಿರುವ ನಿಮಗೆಲ್ಲ ನಾನು, ನಮ್ಮ ಕಾರ್ಯದರ್ಶಿ ಜಯ್ ಶಾ ಮತ್ತು ಖಜಾಂಚಿ ಅರುಣ್ ಧುಮಾಲ್ ಕೃತಜ್ಞತೆ ಸಲ್ಲಿಸುತ್ತೇವೆ‘ ಎಂದು ಗಂಗೂಲಿ ಟ್ವೀಟ್ ಮಾಡಿದ್ದಾರೆ.

ಪ್ರತಿವರ್ಷವೂ ಐಪಿಎಲ್ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯುತ್ತದೆ. ಆದರೆ ಈ ಬಾರಿ ಕೋವಿಡ್–19 ಕಾರಣದಿಂದಾಗಿ ಮುಂದೂಡಲಾಗಿತ್ತು. ಭಾರತದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿದ್ದ ಕಾರಣ ಯುಎಇಯಲ್ಲಿ ಟೂರ್ನಿ ಆಯೋಜಿಸಲಾಗಿತ್ತು. 

’ಗಂಗೂಲಿಯವರ ಮುಂದಾಳತ್ವದಲ್ಲಿ ಬಿಸಿಸಿಐ ಯಶಸ್ವಿಯಾಗಿ ಐಪಿಎಲ್ ಆಯೋಜಿಸಿದೆ. ಇಂದಿನ ಕಠಿಣ ಪರಿಸ್ಥಿತಿಯಲ್ಲಿ ಇದು ಸಾಧ್ಯವಾಗಿದ್ದು ಕ್ರಿಕೆಟ್‌ ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲದಿಂದಾಗಿ. ಮುಂದಿನ ಐಪಿಎಲ್‌ನಲ್ಲಿ ಪ್ರೇಕ್ಷಕರ ಹಾಜರಾತಿಯಲ್ಲಿ ಪಂದ್ಯಗಳು ನಡೆಯುವ ನಿರೀಕ್ಷೆ ಇದೆ. ಈ ಬಾರಿ ಆ ವಾತಾವರಣದ ಕೊರತೆಯನ್ನು ಅನುಭವಿಸಿದ್ದೇವೆ‘ ಎಂದು ಅರುಣ್ ಧುಮಾಲ್ ಟ್ವೀಟ್ ಮಾಡಿದ್ದಾರೆ.

ಟೂರ್ನಿ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ 13 ಜನರಿಗೆ ಕೋವಿಡ್ ಆಗಿತ್ತು. ಆದರೆ ಟೂರ್ನಿಯ ಅವಧಿಯಲ್ಲಿ ಯಾರಿಗೂ ಸೋಂಕು ತಗುಲಿರಲಿಲ್ಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು