ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ವಜಾಗೊಳ್ಳುವ ಭೀತಿಯಿಂದ ನಾಯಕತ್ವ ತೊರೆದ ಕೊಹ್ಲಿ?

Last Updated 16 ಜನವರಿ 2022, 15:04 IST
ಅಕ್ಷರ ಗಾತ್ರ

ನವದೆಹಲಿ: ಇತ್ತೀಚೆಗಷ್ಟೇ ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕ ಸ್ಥಾನದಿಂದ ವಿರಾಟ್ ಕೊಹ್ಲಿ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ವಜಾಗೊಳಿಸಿತ್ತು. ಈಗ ಮಗದೊಮ್ಮೆ ವಜಾ ಆಗುವ ಭೀತಿಯಿಂದಾಗಿ ಟೆಸ್ಟ್ ನಾಯಕತ್ವವನ್ನು ತೊರೆದಿದ್ದಾರೆಯೇ ?

ಇಂತಹದೊಂದು ಪ್ರಶ್ನೆಕ್ರಿಕೆಟ್ ವಲಯದಲ್ಲಿ ದಟ್ಟವಾಗುತ್ತಿದೆ. ಕ್ರಿಕೆಟ್ ದಂತಕಥೆ, ಮಾಜಿ ನಾಯಕ ಸುನಿಲ್ ಗವಾಸ್ಕರ್ ಕೂಡ ಇದನ್ನೇ ಬೊಟ್ಟು ಮಾಡಿದ್ದಾರೆ.

'ನನಗೇನೂ ಅಚ್ಚರಿಯಾಗಿಲ್ಲ, ಪಂದ್ಯದ ಬಳಿಕ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ವಿರಾಟ್ ಘೋಷಣೆ ಮಾಡಲಿದ್ದಾರೆ ಎಂದು ಅಂದುಕೊಂಡಿದ್ದೆ. ಆದರೆ ಸರಣಿಯನ್ನು ಕಳೆದುಕೊಂಡ ಆಕ್ರೋಶದಲ್ಲಿ ಹಾಗೇ ಮಾಡಿರುತ್ತಾರೆ ಎಂದು ಎಲ್ಲರೂ ಭಾವಿಸುತ್ತಾರೆ. ಹಾಗಾಗಿ ಸ್ವಲ್ಪ ಅಂತರದಬಳಿಕ ನಿರ್ಧಾರ ಪ್ರಕಟಿಸಿದ್ದಾರೆ' ಎಂದು ಹೇಳಿದ್ದಾರೆ.

'ಒಬ್ಬ ನಾಯಕರಾಗಿ ವಿದೇಶ ನೆಲದಲ್ಲಿನ ಸರಣಿ ಸೋಲನ್ನು ಮಂಡಳಿ ಅಥವಾ ಮಂಡಳಿಯ ಅಧಿಕಾರಿಗಳು ಹಾಗೂ ಕ್ರಿಕೆಟ್ ಇಷ್ಟಪಡುವವರು ಹಗುರವಾಗಿ ಪರಿಗಣಿಸುವುದಿಲ್ಲ. ಅದನ್ನು ನನ್ನ ಅನುಭವದಿಂದಲೇ ಹೇಳಬಲ್ಲೆ. ಕಪ್ತಾನರನ್ನು ವಜಾಗೊಳಿಸುವ ಅಪಾಯವಿರುತ್ತದೆ. ಹಿಂದೆಯೂ ಹಾಗಾಗಿದೆ. ಈ ಬಾರಿಯೂ ಹಾಗಾಗಲಿದೆ ಎಂದು ಅಂದುಕೊಂಡಿದ್ದೆ. ಯಾಕೆಂದರೆ ಈ ಸರಣಿಯನ್ನು ಭಾರತವು ಸುಲಭವಾಗಿ ಗೆಲ್ಲಲಿದೆ ಅಥವಾ ಗೆಲ್ಲುತ್ತದೆ ಎಂದು ನಿರೀಕ್ಷಿಸಲಾಗಿತ್ತು' ಎಂದು ಹೇಳಿದರು.

'ಈ ಎಲ್ಲ ಸಾಧ್ಯತೆಗಳ್ನು ಪೂರ್ವಾಲೋಚನೆ ಮಾಡಿ ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿರಬಹುದು' ಎಂದು ಗವಾಸ್ಕರ್ತಿಳಿಸಿದರು.

'ಈ ಹಿಂದೆ ಏನಾಯಿತು ಎಂಬುದನ್ನು ನೋಡಿದಾಗ, ಅದರ (ವಜಾಗೊಳಿಸುವ) ಎಲ್ಲ ಸಾಧ್ಯತೆಗಳಿತ್ತು' ಎಂದುಪ್ರತಿಕ್ರಿಯಿಸಿದರು.

'ಏಕದಿನ ತಂಡದ ನಾಯಕ ಸ್ಥಾನದಿಂದ ವಿರಾಟ್ ಕೊಹ್ಲಿ ಅವರನ್ನು ಕೆಳಗಿಳಿಸಿರುವ ಸನ್ನಿವೇಶಗಳನ್ನು ನೋಡಿದಾಗ, ಈ ಸರಣಿ ಕಳೆದುಕೊಂಡ ಬಳಿಕ ನಾಯಕತ್ವದಿಂದ ವಜಾಗೊಳಿಸುವ ಎಲ್ಲ ಸಾಧ್ಯತೆಗಳಿದ್ದವು. ನೀವು ಗೆಲ್ಲದಿದ್ದರೆ ಏನು ಸಂಭವಿಸುತ್ತದೆ? ವೈಯಕ್ತಿಕವಾಗಿ ಯಶಸ್ವಿಯಾಗದಿದ್ದರೂ ಪರವಾಗಿಲ್ಲ, ತಂಡ ಕ್ರೀಡೆಯಲ್ಲಿ ನಾಯಕನೇ ಹೊಣೆಗಾರನಾಗಿರುತ್ತಾರೆ' ಎಂದು ಹೇಳಿದರು.

ಪಂತ್‌ಗೆ ಟೆಸ್ಟ್ ನಾಯಕ ಪಟ್ಟ: ಗವಾಸ್ಕರ್ ಸಲಹೆ
ಕೊಹ್ಲಿ ಅವರಿಂದ ತೆರವಾಗಿರುವ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಸ್ಥಾನವನ್ನು ರಿಷಭ್ ಪಂತ್ ಅವರಿಗೆ ವಹಿಸಿಕೊಡುವಂತೆ ಗವಾಸ್ಕರ್ ಸಲಹೆ ಮಾಡಿದ್ದಾರೆ.

'ರಿಷಭ್ ಪಂತ್ ಐಪಿಎಲ್‌ನಲ್ಲಿಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿದ್ದು, ಟೆಸ್ಟ್‌ನಲ್ಲೂ ಕಪ್ತಾನನ ಹೆಚ್ಚುವರಿ ಜವಾಬ್ದಾರಿಯು ಮತ್ತಷ್ಟು ಉತ್ತಮ ಪ್ರದರ್ಶನ ನೀಡಲು ನೆರವಾಗಲಿದೆ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT