ಬೌಲರ್‌ ಜೇಮ್ಸ್ ಆ್ಯಂಡರ್ಸನ್‌ ವಯಸ್ಸು 36: ಅದೇ ವೇಗ; ಅದೇ ಮೊನಚು

7

ಬೌಲರ್‌ ಜೇಮ್ಸ್ ಆ್ಯಂಡರ್ಸನ್‌ ವಯಸ್ಸು 36: ಅದೇ ವೇಗ; ಅದೇ ಮೊನಚು

Published:
Updated:

‘ಅವರು ಸರ್ವಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರು. ತಂಡದ ದೊಡ್ಡ ಆಸ್ತಿಯೂ ಆಗಿದ್ದಾರೆ...’

‘36 ವರ್ಷ ಆಗಿದ್ದರೂ ವಯಸ್ಸಿಗೂ ಮೀರಿದ ಸಾಮರ್ಥ್ಯ ತೋರುತ್ತಿರುವ ಅವರು ಇನ್ನೂ ಮೂರು–ನಾಲ್ಕು ವರ್ಷ ಕ್ರಿಕೆಟ್ ಆಡಬಲ್ಲರು...’

‘ನಾನು ವಯಸ್ಸಾಗಿದೆ ಎಂದು ಕೊರಗುವುದಿಲ್ಲ. ಹಾಗೆಂದು 26 ವರ್ಷದ ಯುವಕ ಎಂದು ಹೇಳುವುದೂ ಇಲ್ಲ, 36 ವರ್ಷದ ಹಿರಿಯ ಎಂಬ ಭಾವನೆಯೂ ಇಲ್ಲ. 32 ವರ್ಷದವನಂತೆ ಇರಲು ನನಗೆ ಇಷ್ಟ...’ ಇಂಗ್ಲೆಂಡ್ ಕ್ರಿಕೆಟ್ ತಂಡದ ವೇಗದ ಬೌಲರ್‌ ಜೇಮ್ಸ್ ಆ್ಯಂಡರ್ಸನ್‌ ಅವರ ಬಗ್ಗೆ ಹಿರಿಯರು ಮತ್ತು ಸ್ವತಃ ಅವರೇ ಆಡಿದ ಮಾತುಗಳು ಇವು.

ಮೊದಲ ಹೇಳಿಕೆ ನೀಡಿದವರು ತಂಡದ ನಾಯಕ ಜೋ ರೂಟ್‌. ಎರಡನೆಯದು ಕೋಚ್‌ ಟ್ರೆವರ್ ಬೇಲಿಸ್‌ ಅವರ ಮಾತು.  ಭಾರತ ತಂಡದ ಎದುರು ಲಾರ್ಡ್ಸ್‌ನಲ್ಲಿ ಕಳೆದ ವಾರ ನಡೆದ ಎರಡನೇ ಟೆಸ್ಟ್ ಪಂದ್ಯದ ನಂತರ ಜೇಮ್ಸ್‌ ಆ್ಯಂಡರ್ಸನ್‌ ಎಂಬ ಅಪಾಯಕಾರಿ ಬೌಲರ್‌ನ ಮಹಿಮೆಯನ್ನು ಇಂಗ್ಲೆಂಡ್‌ನಾದ್ಯಂತ ಕೊಂಡಾಡಲಾಗುತ್ತಿದೆ.

‘ಗಾಯ’ಗೊಂಡ ಹುಲಿ: ಗಾಯದ ಸಮಸ್ಯೆಗಳು ಆಟಗಾರರ ಜಂಘಾಬಲವನ್ನೇ ಕುಗ್ಗಿಸುತ್ತದೆ. ಎಷ್ಟೇ ಚಿಕಿತ್ಸೆ ಪಡೆದುಕೊಂಡರೂ ಮರಳಿ ಅಂಗಣಕ್ಕೆ ಇಳಿದಾಗ ಅವರ ನೈತಿಕ ಸ್ಥೈರ್ಯ ಸ್ವಲ್ಪ ಮಟ್ಟಕ್ಕೆ ಕುಸಿದಿರುತ್ತದೆ. ಆದರೆ ಆ್ಯಂಡರ್ಸನ್‌ಗೆ ಗಾಯದ ಸಮಸ್ಯೆ ಸಂದರ್ಭದಲ್ಲಿ ಲಭಿಸಿದ ಆರೈಕೆಯೇ ವರವಾಗಿದೆ. ಭುಜದ ನೋವಿಗೆ ಚಿಕಿತ್ಸೆ ಪಡೆದ ಅವರು ಆರು ವಾರಗಳ ನಂತರ ಅಂಗಣಕ್ಕೆ ಇಳಿದಿದ್ದರು.

ಬರ್ಮಿಂಗಂನಲ್ಲಿ ನಡೆದ ಮೊದಲ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ತಲಾ ಎರಡು ವಿಕೆಟ್ ಉರುಳಿಸಿದ ಅವರು ಲಾರ್ಡ್ಸ್‌ನಲ್ಲಿ ‘ಲಾರ್ಡ್‌’ ಆಗಿ ಮೆರೆದರು. ಎರಡೂ ಇನಿಂಗ್ಸ್‌ಗಳಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಿಬ್ಬರನ್ನೂ ಬಲಿ ಪಡೆದ ನಂತರವೂ ಪ್ರವಾಸಿಗರನ್ನು ಕಾಡಿದರು. ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಸೇರಿದಂತೆ ಒಟ್ಟು ಒಂಬತ್ತು ವಿಕೆಟ್ ಕಬಳಿಸಿದರು. ಆದ್ದರಿಂದಲೇ ಒಂದೂವರೆ ದಿನ ಮಳೆಗೆ ಆಹುತಿಯಾದ ಪಂದ್ಯದಲ್ಲೂ ನಾಲ್ಕನೇ ದಿನವೇ ಇಂಗ್ಲೆಂಡ್ ಇನಿಂಗ್ಸ್ ಜಯದೊಂದಿಗೆ ಮೆರೆದಿತ್ತು. 

ಚಿಕಿತ್ಸೆ ಪಡೆದು ಮರಳಿದ ಮೊದಲ ಸರಣಿಯ ಮೊದಲ ಎರಡು ಪಂದ್ಯಗಳು ಆ್ಯಂಡರ್ಸನ್ ಕೊರಳಿಗೆ ಸವಿ ನೆನಪಿನ ಮಾಲೆಯನ್ನೇ ತೊಡಿಸಿವೆ. ಲಾರ್ಡ್ಸ್‌ ಪಂದ್ಯದ ಎರಡನೇ ಇನಿಂಗ್ಸ್‌ನ ಮೊದಲ ವಿಕೆಟ್ ಪಡೆಯುವುದರೊಂದಿಗೆ ಅವರು ಈ ಅಂಗಣದಲ್ಲಿ ವಿಕೆಟ್ ಗಳಿಕೆಯಲ್ಲಿ ಮೂರಂಕಿ ದಾಟಿದ ಸಾಧನೆ ಮಾಡಿದರು. ಇದು ಅಪರೂಪದ ದಾಖಲೆ. ಒಂದೇ ಅಂಗಣದಲ್ಲಿ 100 ವಿಕೆಟ್ ಗಳಿಸಿದವರ ಪಟ್ಟಿ ದೊಡ್ಡದೇನೂ ಇಲ್ಲ. ಆ್ಯಂಡರ್ಸನ್‌ಗಿಂತ ಮುನ್ನ ಶ್ರೀಲಂಕಾದ ಮುತ್ತಯ್ಯ ಮುರಳೀಧರ ಮಾತ್ರ ಇಂಥ ಸಾಧನೆ ಮಾಡಿದ್ದರು. ಅವರು ಕ್ಯಾಂಡಿ, ಕೊಲಂಬೊ ಮತ್ತು ಗಾಲ್‌ನಲ್ಲಿ ತಲಾ 100 ವಿಕೆಟ್ ಉರುಳಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಆ್ಯಂಡರ್ಸನ್ ಕಬಳಿಸಿರುವ ವಿಕೆಟ್‌ಗಳ ಸಂಖ್ಯೆ ಈಗ 553. ಇನ್ನು 10 ವಿಕೆಟ್ ಬಗಲಿಗೆ ಬಿದ್ದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಲಿ ಪಡೆದ ವೇಗಿ ಎಂಬ ದಾಖಲೆ ಅವರದಾಗಲಿದೆ. ಈ ಪಟ್ಟಿಯ ಅಗ್ರ ಸ್ಥಾನದಲ್ಲಿ ಈಗ ಆಸ್ಟ್ರೇಲಿಯಾದ ಗ್ಲೆನ್‌ ಮೆಕ್‌ಗ್ರಾ ಇದ್ದಾರೆ.

ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 20 ರನ್‌ಗಳಿಗೆ ಐದು ವಿಕೆಟ್ ಪಡೆಯುವುದರೊಂದಿಗೆ 26 ಬಾರಿ ಐದರ ಗೊಂಚಲು ಗಳಿಕೆ ಅವರಾಯಿತು.

ಎರಡು ಪಂದ್ಯಗಳಲ್ಲಿ ಅವರು ಬೀಸಿದ ಬಲೆಯಲ್ಲಿ ಭಾರತದ ಪ್ರಖ್ಯಾತ ಬ್ಯಾಟ್ಸ್‌ಮನ್‌ಗಳು ಬಿದ್ದು ಪರದಾಡಿದರು. ಸೋಮವಾರ ಬಿಡುಗಡೆಗೊಂಡ ರ್ಯಾಕಿಂಗ್‌ ಪಟ್ಟಿಯಲ್ಲಿ ಅವರು ವೇಗದ ಬೌಲರ್‌ಗಳ ಸಾಲಿನ ಅಗ್ರ ಪಂಕ್ತಿಗೆ ಏರಿದರು. ಜೀವನಶ್ರೇಷ್ಠ 903 ರೇಟಿಂಗ್ ಪಾಯಿಂಟ್‌ಗಳನ್ನೂ ಬುಟ್ಟಿಗೆ ಹಾಕಿಕೊಂಡರು. ಇಯಾನ್‌ ಬಾಥಮ್ ಅವರ ನಂತರ 900 ಪಾಯಿಂಟ್ ಗಳಿಸಿದ ಇಂಗ್ಲೆಂಡ್‌ನ ಏಕೈಕ ಬೌಲರ್ ಎಂಬ ಹೆಗ್ಗಳಿಕೆಯೂ ಅವರದಾಯಿತು. ಬಾಥಮ್‌ 1980ರಲ್ಲಿ ಈ ಸಾಧನೆ ಮಾಡಿದ್ದರು. 

ಜಿಮ್ಮಿ ಎಂಬ ಅಡ್ಡ ಹೆಸರಿನಿಂದ ಕರೆಯಲಾಗುವ ಜೇಮ್ಸ್‌ ಮೈಕೆಲ್ ಆ್ಯಂಡರ್ಸನ್‌ 140 ಟೆಸ್ಟ್‌ಗಳಲ್ಲಿ 30778 ಎಸೆತಗಳನ್ನು ಹಾಕಿದ್ದು ಇನಿಂಗ್ಸ್‌ನಲ್ಲಿ 42ಕ್ಕೆ 7 ಮತ್ತು ಪಂದ್ಯದಲ್ಲಿ 71ಕ್ಕೆ 11 ವಿಕೆಟ್ ಶ್ರೇಷ್ಠ ಸಾಧನೆಯಾಗಿದೆ. 36 ವರ್ಷದ ಈ ಆಟಗಾರ ಬ್ಯಾಟಿಂಗ್‌ನಲ್ಲೂ ಮಿಂಚಿನ ಆಟ ಆಡಬಲ್ಲರು. 194 ಇನಿಂಗ್ಸ್‌ಗಳಲ್ಲಿ ಅವರು 1137 ರನ್‌ ಗಳಿಸಿದ್ದಾರೆ. 81 ಅವರು ಗಳಿಸಿದ ಅತ್ಯಧಿಕ ರನ್‌.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !